ಕರೋನಾ ಭೀತಿ: ಆರ್ಥಿಕತೆಗೆ ಬೀಳಬಹುದಾದ ಪೆಟ್ಟು ಊಹಿಸಲು ಅಸಾಧ್ಯ

ಒಂದು ಕಡೆ ಸಾಲು ಸಾಲು ಬ್ಯಾಂಕುಗಳ ಬಿಕ್ಕಟ್ಟು. ಹಿಂದೆ ಬಿದ್ದಿರುವ ಭಾರತೀಯ ಆರ್ಥಿಕತೆಗೆ ಈಗ ಕರೋನ ಇನ್ನೂ ದೊಡ್ಡ ಪೆಟ್ಟು ಕೊಡುಲಿದೆಯೇ? ಜಾಗತಿಕವಾಗಿ ಆರ್ಥಿಕ ಚಟುವಟಿಕೆಗಳು ಸ್ಥಬ್ದವಾಗುತ್ತಿರುವ ಹಿನ್ನಲೆಯಲ್ಲಿ ಭಾರತವೂ ಕರೋನಾ ವೈರಸ್ ಸಾಂಕ್ರಾಮಿಕವನ್ನು ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

ಜಾಗತಿಕವಾಗಿ ಕೊರೊನಾ ವೈರಸ್ ಸೋಂಕಿತ ಜನರ ಸಂಖ್ಯೆ 1,30,000 ಮೀರಿದ್ದು, ಭಾರತದಲ್ಲಿ 76 ಜನಕ್ಕೆ ಕೊರೋನ ಸೋಂಕು ತಗುಲಿರುವುದು ಧೃಢಪಟ್ಟಿದೆ. ಈಗಾಗಲೇ ಹಲವು ಕಡೆ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.

ಕೇರಳದಂತರ ರಾಜ್ಯಗಳು ಸೋಂಕು ಹರಡದಂತೆ ತಡೆಯಲು ಶಿಸ್ತು ಕ್ರಮಗಳನ್ನು ತೆಗೆದುಕೊಂಡಿದ್ದು, ಸಿನೆಮಾ ಥಿಯೇಟರ್ ಗಳನ್ನು ಬಂದ್ ಮಾಡಿದೆ. ಯಾವುದೇ ಸರ್ಕಾರಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿಲ್ಲ. ಸೋಂಕಿನ ಸಂಖ್ಯೆ ಒಂದು ಪಕ್ಷ ಹೆಚ್ಚಿದರೆ ಎಲ್ಲ ರಾಜ್ಯಗಳು ಇಂತಹ ಕ್ರಮಗಳಿಗೆ ಮುಂದಾಗುವ ಸಾಧ್ಯತೆ ಇದೆ.

ಈಗಾಗಲೇ ಜನರು ಮುಂಜಾಗ್ರತಾ ನಿಟ್ಟಿನಿಂದ ಗುಂಪು ಸೇರುವ ಮಾಲುಗಳು, ತಿಂಡಿ ಮಾರಾಟ ಮಾಡೂವ ಬೀದಿಗಳಲ್ಲಿ ಅಡ್ಡಾಡುವುದನ್ನು ಕಡಿಮೆ ಮಾಡಿದ್ದಾರೆ ಎಂಬ ಸುದ್ದಿಯಿದೆ. ಇದರಿಂದ ದಿನನಿತ್ಯದ ವ್ಯವಹಾರಗಳಿಗೆ ಪೆಟ್ಟುಬಿದ್ದಿರುವುದಂತೂ ನಿಜ. ದೆಹಲಿಯಲ್ಲಿ ಐಪಿಲ್ ಪಂದ್ಯವನ್ನು ರದ್ದು ಮಾಡುವಂತೆ ಅಲ್ಲಿನ ಉಪಮುಖ್ಯಮಂತ್ರಿ ಮನೀಷ್ ಸಿಸೋಧಿಯಾ ಹೇಳಿದ್ದಾರೆ.

ಅಸಂಘಟಿತ ವ್ಯವಹಾರಗಳಿಂದ ಹಿಡಿದು ದೊಡ್ಡ ಕಾರ್ಪೊರೇಟ್ ವಲಯದ ವ್ಯವಹಾರಗಳಿಗೂ (ಅದರಲ್ಲೂ ಎಫ್ ಎಂ ಸಿ ಜಿ ವಲಯಕ್ಕೆ) ಕೊರೋನಾ ಸೋಂಕು ದೊಡ್ಡ ಆರ್ಥಿಕ ಪೆಟ್ಟು ನೀಡುವ ಸಾಧ್ಯತೆ ಇದೆ. ಇದನ್ನೆ ಧ್ವನಿಸಿರುವ ಷೇರು  ಮಾರುಕಟ್ಟೆ ಇಂದು ಧಿಢೀರ್ ಭಾರಿ ಕುಸಿತ ಕಂಡು ಮತ್ತೆ ಚೇತರಿಸಿಕೊಂಡಿದೆ. ಚೇತರಿಕೆ ಕಂಡರೂ ಕಷ್ಟದ ದಿನಗಳು ಎದುರಾಗಲಿವೆ ಎಂಬುದು ಷೇರುಮಾರುಕಟ್ಟೆ ಪಂಡಿತರ ಆತಂಕ.

ಕೇಂದ್ರ ಸರ್ಕಾದ ಮಂತ್ರಿಗಳು ಕೂಡ ಮುಂದಿನ ಹಲವು ದಿನಗಳವರೆಗೆ ಅನ್ಯ ದೇಶಗಳಿಗೆ ಪ್ರಯಾಣ ಬೆಳೆಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಭಾರತ ಮತ್ತು ಹಲವು ದೇಶಗಳ ನಡುವೆ ವಿನಿಮಯಗಳು ನಡೆಯುತ್ತಿರುತ್ತದೆ. ಒಂದು ಕಡೆ ಚೈನಾದಂತಹ ದೇಶದಿಂದ ಹಲವು ವಸ್ತುಗಳನ್ನು ಆಮದು ಮಾಡಿಕೊಂಡರೆ, ಹಲವು ದೇಶಗಳಿಗೆ ಮಾನವ ಸಂಪನ್ಮೂಲಗಳನ್ನು ಭಾರತ ರಫ್ತು ಮಾಡುತ್ತದೆ. ಜಾಗತಿಕವಾಗಿ ಕರೋನಾ ಹೆಚ್ಚಿರುವುದರಿಂದ, ಹಲವು ದೇಶಗಳು ಬೇರೆ ದೇಶಗಳಿಂದ ಬರುವ ಜನರಿಗೆ ಅವಕಾಶಕ್ಕೆ ತಡೆಹಾಕುತ್ತವೆ. ಇದರಿಂದ ಭಾರತದ ಆರ್ಥಿಕ ಬೊಕ್ಕಸೆಗೆ ವಿವಿಧ ರೀತಿಯಲ್ಲಿ ಹರಿಯುವ ಹಣಕ್ಕೆ ಸ್ವಲ್ಪವಾದರೂ ತೊಂದರೆ ಆಗುವ ಸಾಧ್ಯತೆ ಇದೆ.

ಹಲವರ ಲೆಕ್ಕಾಚಾರಗಳ ಪ್ರಕಾರ ಈಗಾಗಲೆ ಭಾರತದಲ್ಲಿ ಬ್ಯಾಂಕಿಂಗ್ ವಲಯ, ಫಾರ್ಮಾ ವಲಯ, ವಾಹನ ಮಾರಾಟ ವಲಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಈಗ ಕರೋನ ಪರಿಣಾಮದಿಂದ 2008ರ ಆರ್ಥಿಕ ಬಿಕ್ಕಟ್ಟು ಮರುಕಳಿಸಲಿದೆಯೇ ಎಂಬ ಪ್ರಶ್ನೆ ಕೂಡ ಎದ್ದಿದೆ.

ಇಂತಹ ಮಹಾಮಾರಿಯನ್ನು ಎದುರಿಸಲು ಚೈನಾದಂತಹ ದೇಶ ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಬಹಳ ಮುಂದಿತ್ತು. ನಾಗರಿಕರ ಉಷ್ಣಾಂಶವನ್ನು ಪತ್ತೆ ಹಚ್ಚುವ ಮಾಪಕಗಳಿಂದ ಹಿಡಿದು, ವೈರಸ್ ಹರಡುವ ಬಗೆಯನ್ನು ಪತ್ತೆ ಹಚ್ಚಲು ಕೃತಕ ಬುದ್ಧಿವಂತಿಕೆ ತಂತ್ರಜ್ಞಾನ, ಮಾಹಿತಿ ಪ್ರಚಾರಕ್ಕೆ ಮತ್ತು ವಿನಿಮಯಕ್ಕೆ ಬಳಸಿದ ಮುಂಚೂಣಿ ತಂತ್ರಜ್ಞಾನ ಎಲ್ಲದರಲ್ಲೂ ಅದು ಮುಂದೆ ಇತ್ತು. ಅಂತಹ ದೊಡ್ಡ ಮಟ್ಟದಲ್ಲಿ ಭಾರತ ಈ ಸೋಂಕನ್ನು ಎದುರಿಸಬೇಕಾದರೆ ಅದಕ್ಕೆ ಅಗತ್ಯ ಉಪಕರಣಗಳು, ತಂತ್ರಜ್ಞಾನ ಲಭ್ಯ ಇದೆಯೇ? ಇದಕ್ಕೆ ತಗಲುವ ವೆಚ್ಚವನ್ನು ಸರಿದೂಗಿಸಲು ಆರ್ಥಿಕವಾಗಿ ಶಕ್ತಿ ಇದೆಯೇ? ಎಂಬ ಪ್ರಶ್ನೆಗಳು ಕಾಡುತ್ತವೆ.

ಇಂತಹ ಸಾಮಾಜಿಕ ಬಿಕ್ಕಟ್ಟಿನಲ್ಲಿ ಎಲ್ಲ ನಾಗರಿಕರೂ ಸ್ವಯಂಪ್ರೇರಣೆಯಿಂದ ಕರೋನ ವಿಶಾಲವಾಗಿ ಹರಡದಂತೆ ನೋಡಿಕೊಳ್ಳುವುದು ಅಗತ್ಯ ಕರ್ತವ್ಯವಾಗಿದೆ. ಆಗ ಆರ್ಥಿಕತೆಯ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದೇನೊ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights