ದುಡಿಮೆ ಸಾವು ಹಾಗು ರೋಗ – ಎಲ್ಸಿ ನಾಗರಾಜು ಅನುವಾದಿಸಿರುವ ಲಿಯೋ ಟಾಲ್ಸ್ಟಾಯ್ ಕಥೆ ಓದಿ

ದಕ್ಷಿಣ ಅಮೇರಿಕಾದ ಇಂಡಿಯನ್ ಮೂಲನಿವಾಸಿ ಸಂಸ್ಕೃತಿಯಲ್ಲಿ ಪ್ರಚಲಿತದಲ್ಲಿರುವ ಒಂದು ದಂತ ಕಥೆಯ ಪ್ರಕಾರ:

ದೇವರು ಮೊದಲಿಗೆ ಮನುಷ್ಯ ಜೀವಿಯನ್ನು ಸೃಷ್ಟಿಸಿದ. ಅವರು ಯಾವ ಕೆಲಸವನ್ನೂ ಮಾಡಬೇಕಾದ ಅವಶ್ಯಕತೆಯಿರಲಿಲ್ಲ. ಮನೆ, ಉಡುಗೆ ತೊಡುಗೆ ಅನ್ನ ಆಹಾರಗಳೆಂಬವು ಬೇಕಾಗಿರಲಿಲ್ಲ. ಯಾವುದೇ ಕಾಯಿಲೆ ಕಸಾಲೆಗಳಿಲ್ಲದಂತೆ ಅವರು ನೂರು ವರ್ಷಗಳ ತನಕ ತುಂಬು ಜೀವನ ನಡೆಸುತ್ತಿದ್ದರು.

ಕೊಂಚ ಕಾಲದ ನಂತರ ದೇವರು, ಈ ಮನುಷ್ಯಾದಿಗಳು ಹೇಗೆ ಬದುಕುತ್ತಿರುವರೋ ನೋಡಬೇಕೆಂದು ಇಷ್ಟಪಟ್ಟ. ಅವರುಗಳು ಸಂತೋಷ ಸಮಾಧಾನಗಳಿಂದ ಇರುವುದನ್ನು ಬಿಟ್ಟು, ಪ್ರತಿಯೊಬ್ಬನೂ ತನ್ನ ಹಿತವನ್ನು ಮಾತ್ರ ಕಾದುಕೊಳ್ಳುತ್ತ ಒಬ್ಬರಿಗೊಬ್ಬರು ಜಗಳವಾಡುತ್ತ ಜೀವನವನ್ನು ಪ್ರೀತಿಸುವ ಬದಲಿಗೆ ಹಿಡಿಶಾಪ ಹಾಕುವ ಮಟ್ಟಕ್ಕೆ ತಂದಿಟ್ಟಿದ್ದರು.

ಆಗ ದೇವರು : ಅವರು ತಮ್ಮಷ್ಟಕ್ಕೆ ತಾವು ಬದುಕುತ್ತಿರುವುದರಿಂದ ಹೀಗಾಗಿದೆ, ಎಂದುಕೊಂಡು ಇದನ್ನು ಬದಲಾಯಿಸಲು, ಮನುಷ್ಯರು ಕೆಲಸ ಮಾಡಲೇ ಬೇಕಾದ ಬಗೆಯಲ್ಲಿ ಬದುಕನ್ನು ವ್ಯವಸ್ಥೆ ಮಾಡಿದ.

ಹಸಿವಿನಿಂದ, ಚಳಿಯಿಂದ ರಕ್ಷಿಸಿಕೊಳ್ಳಲು ಈಗ ಅವರು ಮನೆಗಳನ್ನು ಕಟ್ಟಿಕೊಳ್ಳಬೇಕಾಯಿತು, ನೆಲವನ್ನು ಅಗೆಯಬೇಕಾಯಿತು, ಹಣ್ಣು ಹಂಪಲು ಧವಸಧಾನ್ಯಗಳನ್ನು ಬೆಳೆದುಕೊಳ್ಳಬೇಕಾದ, ಸಂಗ್ರಹಿಸಬೇಕಾದ ಅವಶ್ಯಕತೆಯುಂಟಾಯಿತು.

ಒಬ್ಬರಿಗೊಬ್ಬರು ಗೆಳೆಯರಂತಿರದೆ ಸಾಧನ ಸಲಕರಣೆಗಳನ್ನು ಮಾಡಿಕೊಳ್ಳುವಂತಿಲ್ಲ, ಮರಮಟ್ಟುಗಳನ್ನು ಸಾಗಿಸಲಾಗುವುದಿಲ್ಲ. ಮನೆ ಕಟ್ಟಿಕೊಳ್ಳಲಾಗುವುದಿಲ್ಲ. ಒಬ್ಬಂಟಿಗರಾಗಿ ಬಿತ್ತನೆ ಸುಗ್ಗಿ ಕೆಲಸಗಳನ್ನು ಸುಗ್ಗಿ ಕೆಲಸಗಳನ್ನು ನಿರ್ವಹಿಸಲಾಗುದಿಲ್ಲ, ನೇಯ್ಗೆಯ ಕೆಲಸ ಮಾಡಲಾಗುವುದಿಲ್ಲ. ಕೆಲಸವು ಅವರನ್ನು ಹತ್ತಿರ ತರುತ್ತದೆ, ಪರಸ್ಪರ ಗೆಳೆತನ, ಭಾವನಿಕೆಗಳಿಂದ ಜೊತೆಯಾಗಿ ಕೆಲಸ ಮಾಡಿದರೆ ಹೆಚ್ಚು ಗಳಿಸಿ, ಚೆನ್ನಾಗಿ ಬದುಕಬಹುದಾದ ಸಾಧ್ಯತೆಗಳು ಅವರಿಗೆ ಅರ್ಥವಾಗುತ್ತದೆಂದು ದೇವರು ಯೋಚಿಸಿದ.

ಕಾಲ ಉರುಳೆತು, ಈ ಮನುಷ್ಯರು ಹೇಗೆ ಬದುಕುತ್ತಿದ್ದಾರೋ ನೋಡೋಣವೆಂದು ದೇವರು ಇವರೆಡೆಗೆ ತಿರುಗಿ ನೋಡಿದೆ.

ಪರಿಸ್ಥಿತಿ ಮೊದಲಿಗಿಂತಾ ಕೆಟ್ಟಿತ್ತು. ಅವರೆಲ್ಲರೂ ಜೊತೆ ಜೊತೆಯಾಗಿ ಕೆಲಸ ಮಾಡುತ್ತಿದ್ದರು ನಿಜ, ಮಾಡದೇ ಬೇರೆ ದಾರಿಯೇ ಇರಲಿಲ್ಲ. ಆದರೆ ಮನುಷ್ಯರು ಸಣ್ಣ ಸಣ್ಣ ಗುಂಪುಗಳಾಗಿ, ಪ್ರತಿ ಗುಂಪು ಬೇರೆ ಗುಂಪಿನ ದುಡಿಮೆಯನ್ನು ಲಪಟಾಯಿಸಲು ಹವಣಿಸುತ್ತ, ಒಬ್ಬರ ಕಾಲನ್ನೊಬ್ಬರು ಎಳೆಯುತ್ತ, ಕಿತ್ತಾಟದಲ್ಲಿ ತಮ್ಮ ಚೈತನ್ಯ ಹಾಗೂ ವೇಳೆಯನ್ನು ಹರಣ ಮಾಡುತ್ತ ಹಾಳಾಗಿ ಹೋಗಿದ್ದರು.

ತಾನು ಮಾಡಿದ ಹೊಸ ವ್ಯವಸ್ಥೆಯು ಸರಿ ಹೋಗಲಿಲ್ಲವೆಂದು ಭಾವಿಸಿದ ದೇವರು, ಮನುಷ್ಯನಾದವನಿಗೆ ಸಾವು ಯಾವಾಗ ಬರುತ್ತದೆಂದು ತಿಳಿಯದಂತೆ, ಯಾವಾಗ ಬೇಕಾದರೂ ಬರುವಂತೆ ಏರ್ಪಾಡು ಮಾಡಿ ಇದನ್ನು ಅವರುಗಳಿಗೆಲ್ಲ ಕೂಗಿ ಹೇಳಿದ.

ಸಾವು ಯಾವಾಗ ಬೇಕಾದರೂ ಬರುವ ಭಯದಿಂದ ಅವರು ಪರಸ್ಪರ ಕಾಲುಗಳನ್ನು ಎಳೆದುಕೊಳ್ಳದೆ, ಜೀವಿತದ ವೇಳೆಯನ್ನು ಹಾಳು ಮಾಡಿಕೊಳ್ಳಲು ಇಷ್ಟ ಪಡದೇ, ಹೊಂದಾಣಿಕೆ ಮಾಡಿಕೊಂಡು ಬದುಕಬಹುದೆಂದು ದೇವರು ಭಾವಿಸಿದ.

ಆದರೆ ಇದು ಕೂಡ ಸರಿ ಹೋದಂತೆ ಕಾಣಲಿಲ್ಲ. ಮನುಷ್ಯರು ಹೇಗೆ ಬದುಕುತ್ತಿದ್ದಾರೆಂದು ದೇವರು ತಿರುಗಿ ನೋಡಿದಾಗ ಪರಿಸ್ಥಿತಿ ಮೊದಲಿಗಿಂತಲೂ ಹಾಳಾಗಿ ಹೋಗಿತ್ತು.

ಮನುಷ್ಯರಾದವರಿಗೆ ಯಾವಾಗ ಬೇಕಾದರೂ ಸಾವು ಬರಬಹುದೆಂದು ಯೋಚಿಸಿದ ಬಲಾಢ್ಯರು ದುರ್ಬಲರಿಗೆ ಕಾಟ ಕೊಡುತ್ತ, ಕೊಲೆ ಸುಲಿಗೆಗಳನ್ನು ನಡೆಸುತ್ತ, ಬಲಾಢ್ಯರು ಮತ್ತವರ ಹಿಂಬಾಲಕರು ಸೋಮಾರಿಗಳಾಗಿ, ಬಡಪಾಯಿಗಳು ಮಾತ್ರ ಬಿಡುವೇ ಇಲ್ಲದಂತೆ ದುಡಿಮೆ ಮಾಡಬೇಕಾಗಿ ಬಂತು. ಮನುಷ್ಯರ ಪ್ರತಿ ಗುಂಪು ಇನ್ನೊಂದು ಗುಂಪಿಗೆ ಹೆದರುತ್ತಾ, ದ್ವೇಷಿಸುತ್ತಾ, ಮನುಷ್ಯ ಜೀವನವೆಂಬುದು ಮತ್ತಷ್ಟು ಹೀನಾಯವಾಗಿ ಹೋಗಿತ್ತು.

ಇದನ್ನೆಲ್ಲ ನೋಡಿದ ದೇವರಿಗೆ ಪರಿಸ್ಥಿತಿಯನ್ನು ತಹಬಂದಿಗೆ ತರಲು ಇನ್ನು ಉಳಿದಿದ್ದುದು ಒಂದೇ ಒಂದು ಸಾಧನ. ಮನುಷ್ಯರಿಗೆ ನಾನಾ ಬಗೆಯ ರೋಗ ರುಜಿನಗಳು ಬರುವಂತೆ ಮಾಡಿದ. ಎಲ್ಲ ಮನುಷ್ಯರಿಗೆ ರೋಗ ಬರುವುದೆಂದು ತಿಳಿದಾಗ ಆರೋಗ್ಯದಿಂದಿರುವವರು ಕಾಯಿಲೆ ಬಂದವರನ್ನು ಶುಶ್ರೂಷೆ ಮಾಡುತ್ತಾರೆಂದು, ಸಹಾನುಭೂತಿ ಕರುಣೆಗಳನ್ನು ತೋರಿಸಬಹುದೆಂದು, ತಮಗೆ ರೋಗ ಬಂದಾಗ ಬೇರೆಯವರು ಇದನ್ನೇ ಮಾಡುತ್ತಾರೆಂಬ ನಿರೀಕ್ಷೆಯಿಂದಾದರೂ ಪರಿಸ್ಥಿತಿ ತಹಬಂದಿಗೆ ಬರಬಹುದೆಂದು ದೇವರು ಭಾವಿಸಿದ.

ಮರಳಿ ಹೊರಟು ಹೋದ ದೇವರು ಮತ್ತೆ ಮನುಷ್ಯಾದಿಗಳ ಬದುಕನ್ನು ನೋಡಲು ಬಂದಾಗ ಎಲ್ಲರೂ ಕಾಯಿಲೆಗಳಿಂದ ನರಳುತ್ತಿದ್ದರು. ಜೀವನವೆಂಬುದು ಮೊದಲಿಗಿಂತ ಹೆಚ್ಚು ಹಾಳಾಗಿಹೋಗಿತ್ತು.

ಯಾವ ರೋಗರುಜಿನಗಳು ಮನುಷ್ಯಾದಿಗಳನ್ನು ಹತ್ತಿರ ತರಬೇಕಿತ್ತೋ ಆ ರೋಗರುಜಿನಗಳು ಮನುಷ್ಯರನ್ನು ಹೆಚ್ಚು ದೂರ ಮಾಡಿದ್ದವು. ಕಾಯಿಲೆಗೊಳಗಾದ ಬೇರೆಯವರ ಕೆಲಸಗಳನ್ನು ಮಾಡಲು ಸಾಧ್ಯವಿದ್ದ ಬಲಾಡ್ಯರು ಬಡಪಾಯಿಗಳ ಮೇಲೆ ಹೆಚ್ಚು ಕೆಲಸದ ಒತ್ತಾಯ ಮಾಡ ತೊಡಗಿದರು. ಬೇರೆಯವರು ಕಾಯಿಲೆಗೊಳಗಾದಾಗ ಅವರ ಕೆಲಸಗಳಲ್ಲಿ ನೆರವಾಗುವ ಗೋಜಿಗೆ ಬಲಾಡ್ಯರು ಹೋಗಲೇ ಇಲ್ಲ. ಹೀಗಾಗಿ ಬಡಪಾಯಿಗಳ ಮೇಲೆ ಕೆಲಸದ ಹೊರೆ ಹೆಚ್ಚಿತು. ರೋಗ ರುಜಿನಗಳ ಕರುಣಾಜನಕ ದೃಶ್ಯಗಳು ತಮ್ಮ ಸಂತೋಷವನ್ನು ಹಾಳು ಮಾಡಬಾರದೆಂದು ಭಾವಿಸಿದ ಕೆಲವರು ತಾವು ಕಟ್ಟಿಕೊಂಡ ಸುಭದ್ರ ಮನೆಗಳಿಂದ ಹೊರಗೆ ಬರಲೇ ಇಲ್ಲ. ಯಾರ ಸಹಾನುಭೂತಿ ಕರುಣೆಗಳು ತಮ್ಮನ್ನು ಸಾಂತ್ವನ ಪಡಿಸಬಹುದಿತ್ತೋ, ಅವರೇ ಇಲ್ಲದೇ, ಅನೇಕರು ಸಾವು ನೋವುಗಳಿಗೆ ಈಡಾಗ ತೊಡಗಿದರು. ಸಂಬಳದ ದಾದಿಯರು, ಶುಶ್ರೂಷಕರು ಕೂಡ ರೋಗಿಗಳನ್ನು ತಮ್ಮ ಸಹಾನುಭೂತಿ ಕರುಣೆಗಳಿಂದ ಸಾಂತ್ವನ ಪಡಿಸುತ್ತಿರಲಿಲ್ಲ.

ಸುಮಾರು ರೋಗಗಳು ಸಾಂಕ್ರಾಮಿಕವೆಂದು, ಒಬ್ಬರಿಂದ ಒಬ್ಬರಿಗೆ ಹರಡುತ್ತವೆಂದು ತಿಳಿದವರು ರೋಗಿಗಳ ಸಾಮೀಪ್ಯವನ್ನು ತೊರೆದುದಷ್ಟೇ ಅಲ್ಲ ಅವರನ್ನು ಶುಶ್ರೂಷೆ ಮಾಡುತ್ತಿದ್ದವರನ್ನೂ ದೂರ ಮಾಡ ತೊಡಗಿದರು.

ತನ್ನ ಕಟ್ಟ ಕಡೆಯ ಸಾಧನವೂ ಪರಿಸ್ಥಿತಿಯನ್ನು ನಿಗ್ರಹಿಸಲಿಲ್ಲವಾಗಿ, ಮನುಷ್ಯಾದಿಗಳು ನರಳುತ್ತಲೇ ಪಾಠ ಕಲಿಯಲೆಂದು ದೇವರು ಮನುಷ್ಯರನ್ನು ಬಿಟ್ಟು ಹೊರಟು ಹೋದ.

ಮನುಷ್ಯಾದಿಗಳನ್ನು ಅವರ ಪಾಡಿಗೆ ಅವರನ್ನು ಬಿಟ್ಟು ಬಿಟ್ಟಾಗ ತಾವು ಸಂತೋಷ ನೆಮ್ಮದಿಯಿಂದ ಇರಬಹುದೆಂದು ಅವರಿಗೆ ಅನ್ನಿಸತೊಡಗಿತು. ಕೆಲವರು ಮಾತ್ರ ದುಡಿಯುವುದು, ಕೆಲವರು ದುಡಿಯದಿರುವುದು ತಪ್ಪೆಂದು, ಕೆಲಸವಂಬುದು ಸಕಲರೂ ಮಾಡಬೇಕಾದ, ಎಲ್ಲರನ್ನೂ ಒಂದುಗೂಡಿಸುವ ಪವಿತ್ರ ಕಾರ್ಯವೆಂದು ಅವರಿಗೆ ಜ್ಞಾನೋದಯವಾಗ ತೊಡಗಿತು. ಸಾವು ಕಾಡುತ್ತಿರುವಾಗ ಪ್ರತಿ ವರುಷ, ತಿಂಗಳು, ಗಂಟೆ, ಅಣು ಕ್ಷಣಗಳನ್ನು ಮನುಷ್ಯರು ಪ್ರೀತಿಯಿಂದ ತೀವ್ರವಾಗಿ ಬದುಕುವುದು ಯೋಗ್ಯವೆಂದು ಅವರಿಗೆ ಅರಿವಾಗತೊಡಗಿತು. ರೋಗ ರುಜಿನಗಳು ಮನುಷ್ಯರನ್ನು ಬೇರೆ ಬೇರೆ ಮಾಡುವ ಬದಲು ಅನ್ಯೋನ್ಯತೆಯಿಂದ ಬದುಕಲು ನೆರವಾಗಬೇಕೆಂದು ಅರ್ಥ ಮಾಡಿಕೊಳ್ಳತೊಡಗಿದರು.

 

ಮೂಲ ಕಥೆ: WORK DEATH AND SICKNESS

ಲಿಯೋ ಟಾಲ್ಸ್ಟಾಯ್ ರಷ್ಯಾದ ಪ್ರಖ್ಯಾತ ಕಥೆಗಾರ ಮತ್ತು ಕಾದಂಬರಿಕಾರ. ಮಹಾತ್ಮ ಗಾಂಧಿಯವರನ್ನು ಪ್ರಭಾವಿಸಿದ್ದ ಲೇಖಕ ಮತ್ತು ಮಾನವತಾವಾದಿ. ‘ವಾರ ಅಂಡ್ ಪೀಸ್’ ಮತ್ತು ‘ಅನ್ನಾ ಕರೆನಿನ’ ಕಾದಂಬರಿಗಳನ್ನು ಇವತ್ತಿಗೂ ಜಗತ್ತಿನಾದ್ಯಂತ ಅತಿ ಹೆಚ್ಚು ಸಂಖ್ಯೆಯಲ್ಲಿ ಓದುತ್ತಾರೆ.

ಕನ್ನಡಕ್ಕೆ: ಎಲ್ಸಿ ನಾಗರಾಜು, ಪರಿಸರ ವಿಜ್ಞಾನ ಮತ್ತು ಸಮತೋಲನ ಜೀವನದ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಕೃಷಿಕ. ಟಾಲ್ಸ್ಟಾಯ್ ಸೇರಿದಂತೆ ವಿಶ್ವದ ಹಲವು ಅತ್ಯುತ್ತಮ ಸಾಹಿತಿಗಳ ಕಥೆ-ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸಕ್ತ ಕಥೆಯನ್ನು ಅವರು ಅನುವಾದಿಸಿ ಸಂಕಲಿಸಿರುವ “ಸತ್ಯ ಮತ್ತು ದೇವರು” (ಟಾಲ್ ಸ್ಟಾಯ್ ಕಥೆಗಳು) ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights