ಹರ್ಯಾಣ ಪಂಚ್ಕುಲಾ ವಿಳಾಸ ನೀಡಿದ್ದ 24 ವಿದೇಶಿ ನಾಗರಿಕರು ನಾಪತ್ತೆ
ಕೇಂದ್ರಕ್ಕೆ ಪಂಚ್ಕುಲಾ ಆರೋಗ್ಯ ಆಡಳಿತ ಗುರುವಾರ ನೀಡಿದ್ದ 24 ವಿದೇಶಿ ನಾಗರಿಕರ ಸಂಪರ್ಕ ಸಾಧಿಸಲಾಗಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ವಿದೇಶಿಯರು ಪಂಚ್ಕುಲಾದ ವಿಳಾಸ ಮತ್ತು ಸ್ಥಿರ ದೂರವಾಣಿ ಸಂಖ್ಯೆ ನೀಡಿದ್ದರು.
ಪಂಚ್ಕುಲಾ ಆರೊಗ್ಯ ಅಧಿಕಾರಿಗಳು ಈ ವಿಳಾಸ ತಲುಪಿದ ಮೇಲೆ, ಅದು ಒಂದು ಖಾಸಗಿ ಶಾಲೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಶಾಲೆಯದ್ದು ಎಂದು ತಿಳಿದಿದೆ. ಇಟಲಿ, ಸ್ಪೇನ್, ಇರಾನ್, ಅಮೆರಿಕಾ, ಜರ್ಮನಿ, ಚೈನಾ, ಕೊರಿಯಾ, ಜಪಾನ್ ಮತ್ತು ಪ್ರಾನ್ಸ್ ದೇಶಗಳಿಂದ ಬಂದಿದ್ದ ಈ ಎಲ್ಲರೂ ಒಂದೇ ವಿಳಾಸ ಕೊಟ್ಟಿರುವುದು ಮತ್ತು ಈಗ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಹೋಗಿರುವುದು ಕೊರೊನ ವೈರಸ್ ಸಾಂಕ್ರಾಮಿಕದ ಸಮಯದಲ್ಲಿ ತಲೆನೋವಾಗಿ ಪರಿಣಮಿಸಿದೆ.
ಯಾರ ಪಾಸ್ಪೊರ್ಟ್ ಸಂಖ್ಯೆಯಾಗಲೀ ದೊರೆತಿಲ್ಲ. ಶಾಲೆಯ ಮುಖ್ಯಸ್ಥರನ್ನು ವಿಚಾರಿಸಬೇಕಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 22ರಿಂದ ಒಂದು ವಾರದವರೆಗೆ ಯಾವುದೇ ಅಂತರಾಷ್ಟ್ರೀಯ ವಾಣಿಜ್ಯ ವಿಮಾನವನ್ನು ಭಾರತದ ನೆಲದಲ್ಲಿ ಇಳಿಯಲು ಅವಕಾಶ ನೀಡುವುದಿಲ್ಲ ಎಂದು ಭಾರತ ಸರ್ಕಾರ ತಿಳಿಸಿತ್ತು. 24 ವಿದೇಶಿಯರು ನಾಪತ್ತೆಯಾಗಿರುವುದನ್ನು ಪಂಚ್ಕುಲ ಉಪ ಕಮಿಶನರ್ ಧೃಢಪಡಿಸಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. “ಹೌದು, ಭಾರತಕ್ಕೆ ಬಂದಿದ್ದ 24 ವಿದೇಶಿಯರು ಪಂಚ್ಕುಲದ ಶಾಲೆಯ ವಿಳಾಸವನ್ನು ನೀಡಿದ್ದಾರೆ. ಇಂತಹ ಯಾವುದೇ ಭೇಟಿ ನಮ್ಮ ಶಾಲೆಯಲ್ಲಿ ನಡೆದಿಲ್ಲ ಎಂದು ಶಾಲೆಯ ಅಧಿಕಾರಿಗಳು ನಮಗೆ ಹೇಳಿದ್ದಾರೆ. ಇದರ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದೇವೆ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

