ಕೊರೊನ ಸೋಂಕು ತಗುಲಿದ ವ್ಯಕ್ತಿಗಳ ಹೆಸರು ಬಹಿರಂಗಪಡಿಸುವುದಕ್ಕೆ ಕೇರಳ ಸರ್ಕಾರ ಚಿಂತನೆ

ನೆನ್ನೆ ಒಂದೆ ದಿನ ಕೇರಳ ರಾಜ್ಯದಲ್ಲಿ ಹೊಸ 39 ಜನರಲ್ಲಿ ಕೊರೊನ ಸೋಂಕು ಪತ್ತೆಯಾಗಿದೆ. ಈಗ ಕೊರೊನ ಸೋಂಕಿತ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲು ಕೇರಳ ಸರ್ಕಾರ ಚಿಂತಿಸುತ್ತಿರುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಶುಕ್ರವಾರ ವರದಿಯಾಗಿರುವ ಪ್ರಕರಣಗಳಲ್ಲಿನ ವ್ಯಕ್ತಿಗಳು ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟು, ಹಲವರನ್ನು ಭೇಟಿ ಮಾಡಿರುವ ಹಿನ್ನಲೆಯಲ್ಲಿ ಹೆಸರುಗಳನ್ನು ಬಹಿರಂಗಪಡಿಸುವ ಚಿಂತನೆ ನಡೆಸಿರುವುದಾಗಿ ಪಿಣರಾಯಿ ಹೇಳಿದ್ದಾರೆ.

ಯಾರ ಹೆಸರನ್ನೂ ತೆಗೆದುಕೊಳ್ಳದೆ “ಈ ಸಾಮಜಿಕ ಕಾರ್ಯಕರ್ತ ಕಾಸರಗೋಡಿನಿಂದ ತಿರುವನಂತಪುರಕ್ಕೆ ಪ್ರಯಾಣ ಮಾಡಿದ್ದರು. ಅವರು ಪ್ರವಾಸ ಮಾಡಿರುವ ಮಾಹಿತಿ ಅಚ್ಚರಿ ತರುವಂತಿದೆ. ಹಲವು ವಲಯದ ವ್ಯಕ್ತಿಗಳನ್ನು ಅವರು ಭೇಟಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತರು ನಡೆದುಕೊಳ್ಳುವ ರೀತಿಯೇ ಇದು? ಕೊರೊನ ವೈರಸ್ ನಮ್ಮಿಂದ ದೂರ ಇಲ್ಲ ಅನ್ನುವುದಕ್ಕೆ ಇದೆ ಎಚ್ಚರ” ಎಂದು ಪಿಣರಾಯಿ ಹೇಳಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಇದಾದ ನಂತರ ಕೊರೊನ ಸೋಂಕು ಪತ್ತೆಯಾಗಿರುವ ಕಾಂಗ್ರೆಸ್ ಮುಖಂಡ ಎ ಪಿ ಉಸ್ಮಾನ್ ಹೇಳಿಕೆ ನೀಡಿದ್ದು “ನಾನು ಸಾರ್ವಜನಿಕ ಕಾರ್ಯಕರ್ತ ಆಗಿದ್ದು, ಸಾಕಷ್ಟು ಪ್ರವಾಸ ಮಾಡಬೇಕಾಗಿ ಬಂದಿತ್ತು. ಹಲವರನ್ನು ಭೇಟಿ ಮಾಡಿದ್ದೇನೆ. ನನ್ನನ್ನು ಫೆಬ್ರವರಿ 29ರ ನಂತರ ಭೇಟಿಯಾಗಿರುವವರು ಮತ್ತು ನನ್ನ ಸಂಪರ್ಕಕ್ಕೆ ಬಂದಿರುವವರು ದಯವಿಟ್ಟು ಆರೋಗ್ಯ ಸಿಬ್ಬಂದಿಗಳನ್ನು ಕಂಡು ಬನ್ನಿ. ನನಗೆ ಯಾರೆಲ್ಲರನ್ನು ಭೇಟಿ ಮಾಡಿದ್ದೇನೆ ಎಂಬ ನೆನಪಿಲ್ಲ. ಹಲವು ದಿನಗಳು ನಾನು 200 ಕಿಲೋಮೀಟರ್ ಗಳು ಪ್ರಯಾಣ ಮಾಡಿದ್ದೇನೆ” ಎಂದು ಕಾರ್ಮಿಕ ಸಂಘದ ಮುಖಂಡ ಕೂಡ ಆಗಿರುವ ಉಸ್ಮಾನ್ ಹೇಳಿದ್ದಾರೆ.

ಉಸ್ಮಾನ್ ಅವರು ಯಾವುದೇ ವಿದೇಶಿ ಪ್ರವಾಸ ಮಾಡಿರುವ ಇತಿಹಾಸ ಇಲ್ಲ.

ಈ ಮೊದಲು ಬೆಂಗಳೂರು ಮಹಾನಗರ ಪಾಲಿಕೆ ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಇರುವ ವಿದೇಶಿ ಪ್ರವಾಸ ಹಿನ್ನಲೆ ಇರುವ ಅಥವಾ ಸೋಂಕು ಶಂಕಿತರ ಪಟ್ಟಿಯನ್ನು ಬಹಿರಂಗಗೊಳಿಸಿ ಬಿಡುಗಡೆ ಮಾಡಿತ್ತು. ಅಲ್ಲಿ ಹೆಸರುಗಳನ್ನು ತಡೆಹಿಡಿದು, ವಿಳಾಸಗಳನ್ನು ಮಾತ್ರ ನೀಡಲಾಗಿತ್ತು. ಇದು ಕೂಡ ಖಾಸಗಿತನಕ್ಕೆ ತರಬಹುದಾದ ಧಕ್ಕೆ ಎಂಬ ಕೂಗು ಒಂದು ವಲಯದಿಂದ ಕೇಳಿಬಂದಿತ್ತು.

ಒಂದು ಕಡೆಗೆ ಖಾಸಗಿತನದ ವಿಚಾರ ಮತ್ತೊಂದು ಕಡೆಗೆ ಪ್ರತ್ಯೇಕತೆಯನ್ನು ಉಲ್ಲಂಘಿಸುತ್ತಿರುವ ಹಲವು ಪ್ರಕರಣಗಳು ಕೊರೊನ ಬಿಕ್ಕಟ್ಟಿನ ಸಮಸ್ಯೆಗೆ ಇನ್ನಷ್ಟು ಆತಂಕಗಳನ್ನು ತಂದೊಡ್ಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights