ಇಲ್ಲ, ಪ್ರಿನ್ಸ್ ಚಾರ್ಲ್ಸ್ ಕೊರೊನ ಸೋಂಕಿನಿಂದ ಗುಣಮುಖರಾಗಿದ್ದು ಆಯುರ್ವೇದದಿಂದ ಅಲ್ಲ
ಆಯುಶ್ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರು, ಇಂಗ್ಲೆಂಡಿನ ಪ್ರಿನ್ಸ್ ಚಾರ್ಲ್ಸ್ ಕೊರೊನ ಇಂದ ಗುಣಮುಖರಾಗಲು ಆಯುರ್ವೇದ ಸಹಕಾರ ಮಾಡಿತ್ತು ಎಂದು ಹೇಳಿದ ಒಂದು ದಿನದ ನಂತರ, ಇದನ್ನು ಅಲ್ಲಗೆಳೆದಿರುವ ಪ್ರಿನ್ಸ್ ಚಾರ್ಲ್ಸ್ ಕಚೇರಿಯ ವಕ್ತಾರ “ಇಂಗ್ಲೆಂಡಿನ ಎನ್ ಎಚ್ ಎಸ್ ನೀಡಿದ ವೈದ್ಯಕೀಯ ಸಲಹೆಯಿಂದ ಚಾರ್ಲ್ಸ್ ಗುಣಮುಖರಾಗಿದ್ದಾರೆ” ಎಂದು ತಿಳಿಸಿದ್ದಾರೆ.
“ಹರಡಿರುವ ಮಾಹಿತಿ ತಪ್ಪು. ಪ್ರಿನ್ಸ್ ಚಾರ್ಲ್ಸ್ ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ ಎಚ್ ಎಸ್) ನೀಡಿದ ವೈದ್ಯಕೀಯ ಸಲಹೆಯನ್ನು ಅನುಸರಿಸಿ ಗುಣಮುಖರಾಗಿದ್ದಾರೆ ಅಷ್ಟೇ. ಹೆಚ್ಚಿನದೆಲ್ಲ ಸುಳ್ಳು” ಎಂದು ಎಲ್ಲಾ ಲಿಂಚ್ ತಿಳಿಸಿದ್ದಾರೆ.
ಗೋವಾದಲ್ಲಿ ಗುರುವಾರ ಶ್ರೀಪಾದ್ ನಾಯಕ್ ಅವರು ನೀಡಿದ್ದ ಪತ್ರಿಕಾ ಹೇಳಿಕೆಯಲ್ಲಿ ಪ್ರಿನ್ಸ್ ಚಾರ್ಲ್ ಅವರು ಗುಣಮುಖರಾಗಿದ್ದರ ಬಗ್ಗೆ ತಿಳಿಸಿ “ಇದು ನಮ್ಮ ತಲೆ ತಲಾಂತರದ ವೈದ್ಯಕೀಯ ಚಿಕಿತ್ಸೆಯ ಮಹತ್ವ ತಿಳಿಸುತ್ತದೆ” ಎಂದಿದ್ದಲ್ಲದೆ ಬೆಂಗಳೂರಿನಲ್ಲಿ ಆಯುರ್ವೇದ ರೆಸಾರ್ಟ್ ನಡೆಸುವ ವೈದ್ಯರು ಈ ಮಾಹಿತಿ ನೀಡಿದ್ದಾಗಿ ತಿಳಿಸಿದ್ದರು.
ಪ್ರಿನ್ಸ್ ಚಾರ್ಲ್ಸ್ ಗುಣಮುಖರಾಗಿದ್ದ ದಿನದಿಂದಲೂ ಅವರು ಹೋಮಿಯೋಪತಿ ಚಿಕಿತ್ಸೆಯಿಂದ ಗುಣಮುಖರಾದರು,ಆಯುರ್ವೆದದಿಂದ ಗುಣಮುಖರಾದರು ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಹರಿದಾಡಿದ್ದವು. ಈಗ ಇವೆಲ್ಲವುದಕ್ಕೂ ತೆರೆ ಬಿದ್ದಿದೆ.

