ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಮದ್ಯ ಮಾರಾಟ ಮಾಡುವುದು ಉತ್ತಮ: ಆರ್.ಬಿ.ತಿಮ್ಮಾಪುರ
ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ಡೌನ್ ವಿಧಿಸಲಾಗಿದೆ. ಹಾಗಿದ್ದರೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವುಗಳೂ ಸಂಭವಿಸುತ್ತಿವೆ. ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 6 ಜನರು ಸಾವಿಗೀಡಾಗಿದ್ದಾರೆ. ಆದರೆ ಸಾರಾಯಿ ಬಂದ್ ಆಗಿದ್ದಕ್ಕೆ 20 ಜನ ಸತ್ತಿದ್ದಾರೆ. ಅವುಗಳು ಕೂಡ ಜೀವಗಳೇ. ಸಾರಾಯಿಗೆ ಅಂಟಿಕೊಂಡವರು ಮನೋರೋಗಿಗಳಾಗುತ್ತಿದ್ದಾರೆ. ಅವರನ್ನು ಬದುಕಿಸುವ ಕಡೆ ಸರ್ಕಾರ ಗಮನ ಹರಿಸಬೇಕು ಎಂದು ಮಾಜಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಒತ್ತಾಯಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸರ್ಕಾರ ಮದ್ಯ ಮಾರಾಟ ಆರಂಭಿಸಿದರೆ ಒಳ್ಳೆಯದು. ಇದರಿಂದಾಗಿ ಸರ್ಕಾರಕ್ಕೂ ಆದಾಯ ಬರುತ್ತದೆ. ಕಳ್ಳಭಟ್ಟಿ ಸಾರಾಯಿ ವ್ಯಾಪಾರ ನಡೆಯುತ್ತಿದೆ, ಅದೇನು ಬಂದ್ ಆಗಿದೆಯಾ? ಎಂದು ಪ್ರಶ್ನಿಸಿದರು.
ಗುಜರಾತ್ನಲ್ಲಿ ಮದ್ಯ ಮಾರಾಟ ಸಂಪೂರ್ಣ ಸ್ಥಗಿತವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನಾನು ಅಲ್ಲಿ ಒಬ್ಬರನ್ನು ಕೇಳಿದೆ. ಬಂದ್ ಇದೆ, ಆದರೆ ಇಲ್ಲೇ ನನ್ನ ಕಿರಾಣಿ ಅಂಗಡಿಯಲ್ಲೇ ಮದ್ಯ ಇದೆ ಎಂದ. ಹೀಗಾಗಿ ಯಾರ್ಯಾರು ಕುಡಿಯಬೇಕು ಅಂತಾರೆ, ಅವರಿಗೆ ಕಳ್ಳದಾರಿಯಲ್ಲಿ ಸಿಗುತ್ತಿದೆ ಎಂದರು.
ಸಾರಾಯಿ ಸಂಪೂರ್ಣವಾಗಿ ಬಂದ್ ಆಗಿದ್ದರೆ ಸಂತೋಷವಿತ್ತು. ಎಷ್ಟು ಜನ ಸಾಯ್ತಿದ್ರೋ ಸಾಯುತ್ತಿದ್ದರು. ಆದರೆ ಈಗ ಸಾರಾಯಿ ಸಂಪೂರ್ಣ ಬಂದ್ ಆಗಿಲ್ಲವೇ. ನೂರು, ಸಾವಿರಕ್ಕೆ ಅಂದರೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಆಗ ದುಡ್ಡು ಇದ್ದವರಿಗೆ ಮದ್ಯ ಸಿಗುತ್ತದೆ. ತೀರಾ ಬಡವರಿಗೆ ಸಿಗುವುದಿಲ್ಲ.ಅದಕ್ಕಾಗಿ ಕೊಡುವುದಿದ್ದರೆ ಎಲ್ಲರಿಗೂ ಕೊಡಲಿ ಎಂದು ಆರ್.ಬಿ.ತಿಮ್ಮಾಪುರ ಸರ್ಕಾರಕ್ಕೆ ಒತ್ತಾಯಿಸಿದರು.
ಸರ್ಕಾರ ಎಂಎಸ್ ಐಎಲ್ ನ ಆರಂಭಿಸಿದರೆ ಒಳ್ಳೆಯದು. ಕೇರಳ ಮಾದರಿಯಲ್ಲಿ ಆನ್ಲೈನ್ ಮಾರಾಟ ಮಾಡಲಿ ಎಂದು ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂಬ ಕರೆ ವಿಚಾರಕ್ಕೆ ತಿಮ್ಮಾಪುರ ವ್ಯಂಗ್ಯ ಮಾಡಿದರು. ರಾಷ್ಟ್ರವನ್ನು ಮೂಢನಂಬಿಕೆ,ಅಂಧಾಚಾರಕ್ಕೆ ತಳ್ಳಿದ ಪ್ರಧಾನಿಯ ಕುತಂತ್ರ ನಡೆಯಿದು. ಚಪ್ಪಾಳೆ ಹೊಡೆಯುವುದರಿಂದ, ದೀಪ ಹಚ್ಚುವುದರಿಂದ ಕೊರೊನಾ ಹೋಗಲ್ಲ. ಮೋದಿ ಮಾತಿನಲ್ಲೇ ಜನರನ್ನು ಮರಳು ಮಾಡುವ ಕುತಂತ್ರ ಹೂಡಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

