ಲಾಕ್‌ಡೌನ್ ನಂತರ ಉದ್ದಿಮೆಗಳಿಗೆ ಸರ್ಕಾರದಿಂದ ನೆರವು ಖಚಿತ: ನಿತಿನ್ ಗಡ್ಕರಿ

ಕೊರೋನಾ ವೈರಸ್ ಹಿನ್ನಲೆಯಲ್ಲಿ ಹೇರಲಾಗಿರುವ ಲಾಕ್ ಡೌನ್ ಹಿಂಪಡೆದ ಬಳಿಕ ಉದ್ಯಮಗಳಿಗೆ ಸರ್ಕಾರದಿಂದ ಎಲ್ಲಾ ನೆರವು ದೊರೆಯಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

ಎಫ್ ಐಸಿಸಿಐ ಪ್ರತಿನಿಧಿಗಳೊಂದಿಗಿನ ವೆಬ್ ಆಧಾರಿತ ಸೆಮಿನಾರ್ ಉದ್ದೇಶಿಸಿ ಮಾತನಾಡಿದ ಗಡ್ಕರಿ ಅವರು, ದೇಶದಲ್ಲಿ ಲಾಕ್ ಡೌನ್ ಹಿಂಪಡೆದ  ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳ ಪುನಾರಂಭಕ್ಕೆ ಎಲ್ಲಾ ರೀತಿಯ ನೆರವು ಒದಗಿಸುತ್ತೇವೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು  ಆರ್ಥಿಕ ನಿರ್ಧಾರಗಳನ್ನು ಕೈಗೊಂಡಿದೆ ಎಂದರು.

ಇದೇ ವೇಳೆ ಸಾಲ ಮತ್ತು ಬಂಡವಾಳ ಸೌಲಭ್ಯಗಳನ್ನು ಮರು ನೇಮಿಸಲು ಆರ್ ಬಿಐ ಅನುಮತಿ ನೀಡಿದ್ದು, ಸಾಲ ಮರುಪಾವತಿ ದಿನಾಂಕಗಳ ಪರಿಷ್ಕರಣೆ ಮತ್ತು ಕಾರ್ಯನಿರತ ಬಂಡವಾಳ ಸೌಲಭ್ಯಗಳನ್ನು ಒದಗಿಸುವ ಕುರಿತು ಆರ್ ಬಿಐ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಿದರು.  ಪ್ರಮುಖವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕುರಿತು ಮಾತನಾಡಿದ ಗಡ್ಕರಿ, ಸರ್ಕಾರ ಅವರ ಕಷ್ಟಗಳನ್ನು ಅರಿತಿದೆ ಮತ್ತು ಆರ್ಥಿಕತೆಯಲ್ಲಿ ಅವರ ಪ್ರಾಮುಖ್ಯತೆಯನ್ನು ಕೂಡ ಅರ್ಥಮಾಡಿಕೊಂಡಿದೆ. ಈ ಉದ್ಯಮಗಳಿಗೆ ಸರ್ಕಾರ ಮತ್ತು ಬ್ಯಾಂಕಿಂಗ್ ವಲಯದೊಂದಿಗೆ  ಕೈಜೋಡಿಸುವಂತೆ ಸಲಹೆ ನೀಡಿದರು. ಅಂತೆಯೇ ಭಾರತೀಯ ಕೈಗಾರಿಕಾ ವಲಯ ಹಾಲಿ ಬಿಕ್ಕಟ್ಟಿನಿಂದ ಫೀನಿಕ್ಸ್ ನಂತೆ ಪುಟಿದೇಳಬೇಕು. ಉತ್ಪಾದನೆ ಹೆಚ್ಚಿಸಿ ರಫ್ತಿನ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಈ ಸಮಯದಲ್ಲಿ ಎಲ್ಲಾ ವಲಯಗಳು ಸದೃಢವಾಗಿ ಉಳಿಯಬೇಕು. ಸರ್ಕಾರ ಎಂಎಸ್ಎಂಇ ಕ್ರೆಡಿಟ್ ಗ್ಯಾರಂಟಿಯನ್ನು 5 ಲಕ್ಷ ರೂ.ಗಳವರೆಗೆ ಹೆಚ್ಚಿಸಲು ಶ್ರಮಿಸುತ್ತಿದೆ. ಪ್ರಸ್ತುತ ಪರಿಸ್ಥಿತಿಯನ್ನು ಒಂದು ಸವಾಲು ಎಂದು ಪರಿಗಣಿಸಬೇಕು. ಅನೇಕ ದೇಶಗಳು ಚೀನಾದಿಂದ  ದೂರಸರಿಯುತ್ತಿದ್ದು, ಅವರಿಗೆ ಹೂಡಿಕೆ ಮಾಡಲು ಭಾರತ ಉತ್ತಮ ವೇದಿಕೆಯಾಗಬಹುದು. ಈ ನಿಟ್ಟಿನಲ್ಲಿ ಸದೃಢ ಭಾರತವನ್ನು ನಾವು ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಎಲ್ಲರೂ ಕೈ ಜೋಡಿಸಿ ಶ್ರಮಿಸೋಣ. ಎಲ್ಲ ವಲಯಗಳನ್ನೂ ಉತ್ತಮ ಮೂಲಭೂತ ಸೌಕರ್ಯವನ್ನು ನಿರ್ಮಾಣ  ಮಾಡೋಣ. ಕೊರೋನಾವನ್ನು ಸೋಲಿಸಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸೋಣ ಎಂದು ಕರೆ ನೀಡಿದರು.

2019-20ನೇ ಸಾಲಿನಲ್ಲಿ ಹೆದ್ದಾರಿ ನಿರ್ಮಾಣ ಪ್ರಕ್ರಿಯೆ ದಾಖಲೆಯ ಮಟ್ಟದಲ್ಲಿತ್ತು. ಮುಂದಿನ ವರ್ಷಗಳಲ್ಲಿ ಇದನ್ನು ಶೇ.2-3ರಷ್ಟು ಏರಿಕೆ ಮಾಡಿ ಮೂಲಭೂತ ಸೌಕರ್ಯ ಪ್ರಮಾಣ ಏರಿಕೆ ಮಾಡಲು ಸರ್ಕಾರ ಸರ್ವಸನ್ನದ್ಧವಾಗಿದೆ. ಅಂತೆಯೇ ಕಡಿಮೆ ಅವಧಿಯಲ್ಲಿ ಕಾಮಗಾರಿ  ಪೂರ್ಣಗೊಳಿಸುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿದ್ದು, ಸಂಬಂಧ ಪಟ್ಟ ಇಲಾಖೆಗಳು ಮತ್ತು ಕಚೇರಿಗಳು ಸಂಜೆ 7 ಗಂಟೆಯವರೆಗೂ ಕಾರ್ಯಾಚರಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights