ಕೊರೊನ ಗೆದ್ದು ಬಂದ 52 ವರ್ಷದ ಸಕ್ಕರೆ ಖಾಯಿಲೆ ಇದ್ದ ಸಾಮಾಜಿಕ ಕಾರ್ಯಕರ್ತ; ಹೊಸ ಭರವಸೆ

ಪಶ್ಚಿಮ ಬಂಗಾಳದ 52 ವರ್ಷದ ನೇತೈ ಚಂದ್ರ ಘೋಷ್ ಹಲವು ರೀತಿಯಲ್ಲಿ ಹಿರೋ. ಒಂದು ತಿಂಗಳ ಕಾಲ ವೆಂಟಿಲೇಟರ್ ನಲ್ಲಿದ್ದು ಕೊರೊನ ಸೋಂಕು ಮುಕ್ತರಾಗಿ ಗೆದ್ದು ಬಂದಿರುವುದಷ್ಟೇ ಅವರ ಹಿರಿಮೆ ಅಲ್ಲ, ಬಿಕ್ಕಟ್ಟಿನ ಸಮಯದಲ್ಲಿ ಮನೆಯಲ್ಲಿ ಕೂರದೆ ಸಾಮಾಜಿಕವಾಗಿ ಸಹಾಯ ಮಾಡುತ್ತಾ ಬಂದಿದ್ದು ಕೂಡ ಹಲವರಿಗೆ ಮಾದರಿಯಾಗಿದ್ದಾರೆ.

ಹಿರಿಯರಿಗೆ ಮತ್ತು ಸಕ್ಕರೆ ಖಾಯಿಲೆಯಂತಹ ರೋಗಗಳು ಇದ್ದವರಿಗೆ ಕೊರೊನ ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲೇ ಉಳಿಯುವಂತೆ ಸಲಹೆ ನೀಡಲಾಗಿತ್ತಾದರೂ ಘೋಷ್ ಅವರು ಮನೆಯಲ್ಲಿ ಸೋಮಾರಿಯಾಗಿ ಕಾಲ ಕಳೆಯಲು ನಿರಾಕರಿಸಿ ಪಶ್ಚಿಮ ಬಂಗಾಳದ ಪೊಲೀಸರೊಂದಿಗೆ ಕೈಜೋಡಿಸಿ ಕೊಲ್ಕತ್ತಾದಲ್ಲಿ ಬಡವರಿಗೆ ಪರಿಹಾರ ಸಾಮಗ್ರಿ ವಿತರಣೆ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಮಾರ್ಚ್ ಕೊನೆಯ ಭಾಗದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಅವರ ಸಾಮಾಜಿಕ ಕೆಲಸಕ್ಕೆ ಬ್ರೇಕ್ ಬಿತ್ತು.

ಮಾರ್ಚ್ 29 ರಂದು ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಘೋಷ್ ಅವರನ್ನು ಎ ಎಂ ಆರ್ ಐ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಯಿತು. ಮುಂದಿನ ದಿನ ಪರೀಕ್ಷೆಯ ಮೂಲಕ ಸೋಂಕು ಖಚಿತವಾಗಿ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಯಿತು.

ಅವರು ಮೇ 2 ರವರೆಗೆ ವೆಂಟಿಲೇಟರ್ ನಲ್ಲಿ ಪೂರ್ಣಾವಧಿಯವರೆಗೆ ಇದ್ದರು, ನಂತರ ೧೨ ಘಂಟೆಗಳ ಕಾಲ ಇದ್ದರು. ಮೇ 5 ರಂದು ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ವೆಂಟಿಲೇಟರ್ ಇಲ್ಲದೆ ಉಸಿರಾಟ ಸಾಧ್ಯವಾಯಿತು. ಏಪ್ರಿಲ್ 18 ರಂದು ಅವರು ಸೋಂಕು ಮುಕ್ತರಾಗಿದ್ದರೂ, ಮೇ 8 ರವರೆಗೆ ಅವರು ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು ಎಂದು ವೈದ್ಯರು ತಿಳಿಸಿರುವುದಾಗಿ ದ ಪ್ರಿಂಟ್ ವರದಿ ಮಾಡಿದೆ. ಅವರು ಬದುಕಿ ಉಳಿದದ್ದು ಒಂದು ಪವಾಡ ಎಂದು ಕೂಡ ಬಣ್ಣಿಸಲಾಗುತ್ತಿದೆ.

ಆಸ್ಪತ್ರೆಯಿಂದ ಹೊರ ಬಂದ ಮೇಲೆ ಮಾತನಾಡಿರುವ ಘೋಷ್ ಅವರು “ನನಗೆ ವೈದ್ಯರೇ ದೇವರು. ಈ ಆಸ್ಪತ್ರೆಗೆ ನಾನು ಚಿರಋಣಿಯಾಗಿರುತ್ತೇನೆ. ಕಳೆದ 42 ದಿನಗಳನ್ನು ನಾನು ಮತ್ತು ನನ್ನ ಕುಟುಂಬ ಎಂದಿಗೂ ಮರೆಯುವುದಿಲ್ಲ” ಎಂದಿದ್ದಾರೆ.

ಘೋಷ್ ಅವರು ಬಡವರಿಗೆ ಮತ್ತು ನಿರಾಶ್ರಿತರಿಗೆ ಲಾಭರಹಿತ ಸಂಸ್ಥೆಯೊಂದನ್ನು ನಡೆಸುತ್ತಾರೆ. “ಸಮಾಜದ ಬಗ್ಗೆ ನನಗೆ ಕರ್ತವ್ಯಗಳು ಇವೆ. ಆದುದರಿಂದ ಈ ಬಿಕ್ಕಟ್ಟಿನ ಸಮಯದಲ್ಲಿ ಮನೆಯಲ್ಲಿ ಕುಳಿತಿರಲು ಸಾಧ್ಯವಾಗಲಿಲ್ಲ. ನೀವು ಕರೆಯುತ್ತಿರುವಂತೆ ನಾನು ಹೀರೋ ಅಲ್ಲ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಹೀರೋಗಳು. ನಾನು ನಿಮ್ಮೆಲ್ಲರಿಗೂ ಒಂದು ಮನವಿ ಮಾಡುವುದಿದೆ – ವೈದ್ಯರು ದೇವರುಗಳು. ಅವರನ್ನು ಗೌರವದಿಂದ ಕಾಣಿ ಅವರ ವಿರುದ್ಧ ಬೈಗುಳ ಮತ್ತು ಆರೋಪಗಳು ಬೇಡ. ಅವರಿಗೆ ಕಳಂಕ ಹಚ್ಚಬೇಡಿ” ಎಂದು ಘೋಷ್ ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights