FACT CHECK | CSK ಅಭಿಮಾನಿಗೆ RCB ಬೆಂಬಲಿಗರು ಥಳಿಸಿದ್ದು ನಿಜವೇ?

ಮೇ 18 ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ CSK ವಿರುದ್ದದ ಕ್ರಿಕೆಟ್‌ ಪಂದ್ಯದಲ್ಲಿ RCB 27 ರನ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು. ಆ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್‌ಗೆ ಪ್ರವೇಶಿಸಿದೆ. ಐಪಿಎಲ್ 17ನೇ ಆವೃತ್ತಿಯ ಮೊದಲ ಎಂಟು ಪಂದ್ಯಗಳಲ್ಲಿ ಆರ್‌ಸಿಬಿ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ ಬಳಿಕದ ಎಲ್ಲ ಆರು ಪಂದ್ಯಗಳನ್ನು ಗೆದ್ದು ಆರ್‌ಸಿಬಿ, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ.

ಇದೆಲ್ಲದರ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಸರಣಿ ವಿಡಿಯೋಗಳು ಪ್ರಸಾರವಾಗುತ್ತಿದ್ದು CSK ವಿರುದ್ದ RCB ಗೆಲುವು ಸಾಧಿಸಿದ ನಂತರ ಆರ್‌ಸಿಬಿ ಅಭಿಮಾನಿಗಳು ಸಿಎಸ್‌ಕೆ ಅಭಿಮಾನಿಗಳನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಡಿಯೋದಲ್ಲಿ ಹಳದಿ ಬಟ್ಟೆ ಧರಿಸಿ ತನ್ನ ದೇಹಕ್ಕೆ ಹಳದಿ ಬಣ್ಣ ಬಳಿದುಕೊಂಡು ಬಂದಿದ್ದ ಅಭಿಮಾನಿಯೊಬ್ಬನನ್ನು ಥಳಿಸಿ ಅವಮಾನಿಸಲಾಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ವರ್ತನೆ ನೋಡಿ, ನಾಚಿಕೆಯಾಬೇಕು ನಿಮಗೆ ಎಂದು ಪ್ರತಿಪಾದಿಸಿ ಮೇ 18 ರಂದು ನಡೆದ ಐಪಿಎಲ್‌ಗೆ ಸಂಬಂಧಿಸಿದ ವಿಡಿಯೋ ಎಂದು ಎಕ್ಸ್‌ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳು ಸಿಎಸ್‌ಕೆ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ “IPL 2024” “CSK” ಮತ್ತು “RCB” ಎಂಬಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದಾರೆ. ಅಂತಹ ಎರಡು ಪೋಸ್ಟ್‌ಗಳ ಆರ್ಕೈವ್‌ ಲಿಂಕ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದೆರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಎಕ್ಸ್‌ ಖಾತೆಯನ್ನು ಪರಿಶೀಲಿಸಿದಾಗ, ಮತ್ತೊಬ್ಬ ಬಳದಾರರು ಈ ವಿಡಿಯೋ 2018ರದ್ದು ಎಂದು ಪ್ರತಿಪ್ರಿಯಿಸಿ 2018ರ ಯೂಟ್ಯೂಬ್‌ ಲಿಂಕ್‌ಅನ್ನು ಪೋಸ್ಟ್‌ ಮಾಡಿದ್ದಾರೆ.

ವಿಡಿಯೋ 2018ರದ್ದು ಎಂಬ ಮಾಹಿತಿಯನ್ನು ಆಧರಿಸಿ ಗೂಗಲ್ ಸರ್ಚ್ ಮಾಡಿದಾಗ, 12 ಏಪ್ರಿಲ್ 2018ರಂದು ಟೈಮ್ಸ್ ಆಫ್ ಇಂಡಿಯಾ ಪ್ಲಸ್‌ ವಾಹಿನಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಲಭ್ಯವಾಯಿತು. ಸರವಣನ್ ಹರಿ ಎಂಬ ಎಂಎಸ್ ಧೋನಿ ಅಭಿಮಾನಿಯೊಬ್ಬರನ್ನು ಚೆನ್ನೈನ ಚೆಪಾಕ್ ಸ್ಟೇಡಿಯಂನ ಹೊರಗೆ ಥಳಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್‌ ಮಾಡಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಹಲವು ಮಾಧ್ಯಮಗಳ ವರದಿಗಳು ಲಭ್ಯವಾಗಿವೆ.

ಘಟನೆಗೆ ಸಂಬಂಧಿಸಿದಂತೆ 10 ಏಪ್ರಿಲ್ 2018ರಂದು  ದಿ ನ್ಯೂಸ್‌ ಮಿನಿಟ್ವಿಸ್ತೃತ ವರದಿ ಪ್ರಕಟಿಸಿದೆ. 2018ರಲ್ಲಿ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಒತ್ತಾಯಿಸಿ  ಹಲವು ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದವು. ಇದೇ ಸಂದರ್ಭದಲ್ಲಿ ನಡೆಯುತ್ತಿದ್ದ IPL ಪಂದ್ಯವನ್ನು ವೀಕ್ಷಿಸಲು ಬಂದಿದ್ದ ದೋನಿ ಅಭಿಮಾನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬೆಂಬಲಿಗ ಸರವಣನ್ ಹರಿ ಅವರನ್ನು ಪ್ರತಿಭಟನಾಕಾರರು ಥಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

 

 

 

 

 

 

 

 

 

 

 

 

 

“ನಾವು ಸಿಎಸ್‌ಕೆ ಅಭಿಮಾನಿಗಳು, ನಾವೂ ತಮಿಳಿಗರು. ತಮಿಳುನಾಡಿಗೆ ಕಾವೇರಿ ನೀರು ಸಿಗಬೇಕು ಎಂದು ನಾನೂ ಒತ್ತಾಯಿಸುತ್ತೇನೆ. ಆದರೆ ನಾವು ಕ್ರಿಕೆಟ್ ಪಂದ್ಯ ವೀಕ್ಷಿಸಲು ಆಗಮಿಸಿದ್ದೆವು. ಅವರು ನಮ್ಮ ಮೇಲೆ ಯಾಕೆ ಹಲ್ಲೆ ಮಾಡಿದರು ಎಂಬುದು ಅರ್ಥವಾಗುತ್ತಿಲ್ಲ. ಥಿಯೇಟರ್‌ಗಳಲ್ಲಿ ಸಿನಿಮಾಗಳು ಓಡುತ್ತಿವೆ, ಅದನ್ನು ನಿಲ್ಲಿಸುತ್ತೀರಾ? ಒಂದು ದಿನದ ಸಂಬಳವನ್ನು ಕಾವೇರಿಗಾಗಿ ನೀಡಲು ಸಿದ್ಧನಿದ್ದೇನೆ. ನನ್ನ ಮೇಲೆ ಹಲ್ಲೆ ನಡೆಸಿದ ಜನರಂತೆ ನಾನು ತಮಿಳಿಗ ಎಂದು ತಿಳಿದುಕೊಳ್ಳಬೇಕು ”ಎಂದು ದಿ ನ್ಯೂಸ್ ಮಿನಿಟ್‌ನಗೆ ಸರವಣನ್ ಹರಿ ಪ್ರತಿಕ್ರಿಯಿಸಿರು ಎಂದು ವರದಿಯಾಗಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗದಿರುವುದನ್ನು ವಿರೋಧಿಸಿ ರಾಜಕಾರಣಿಗಳು, ನಟರು ಮತ್ತು ರೈತರು ಪ್ರತಿಭಟನೆ ನಡೆಸುತ್ತಿದ್ದರು, ಐಪಿಎಲ್ ಪಂದ್ಯಗಳನ್ನು ಚೆನ್ನೈನಲ್ಲಿ ನಡೆಸಬಾರದು ಎಂದು ಒತ್ತಾಯಿಸಿದರು, ಇದು ಕೇಂದ್ರ ಸರ್ಕಾರದ ಗಮನವನ್ನು ತನ್ನತ್ತ ಸೆಳೆಯಲು ಪ್ರತಿಭಟನೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಹೀಗೆ ಮಾಡಿದ್ದರು ಎಂದು ಹೇಳಲಾಗಿದೆ.

ನ್ಯೂಸ್ 18 ವರದಿಯ ಪ್ರಕಾರ, ತಮಿಳುನಾಡು ಸರ್ಕಾರದ ಭದ್ರತಾ ವೈಫಲ್ಯದ ಕಾರಣ ನೀಡಿ ಚೆನ್ನೈನಲ್ಲಿ ಆಯೋಜಿಸಿದ್ದ ಪಂದ್ಯಗಳನ್ನು  BCCI  ಪುಣೆಗೆ ಸ್ಥಳಾಂತರಿಸಿತ್ತು ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ವಿರುದ್ದ ಆರ್‌ಸಿಬಿ ಗೆಲುವು ದಾಖಲಿಸಿದ ನಂತರ ಆರ್‌ಸಿಬಿ ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್‌ನ ಅಭಿಮಾನಿಗೆ ಥಳಿಸಿದ್ದಾರೆ ಎಂದು 2018ರ ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು.

 


ಇದನ್ನು ಓದಿರಿ : FACT CHECK | 2014ರ ಮೊದಲು ಭಾರತದಲ್ಲಿ ಕೇವಲ 300 ಸ್ಟಾರ್ಟ್‌ಅಪ್‌ಗಳು ಮಾತ್ರ ಇದ್ದವು ಎಂಬುದು ಸುಳ್ಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights