ಕೊನೆಗೂ ಎಚ್ಚೆತ್ತುಕೊಂಡ ಸುಪ್ರೀಂ ಕೋರ್ಟ್; ವಲಸೆ ಕಾರ್ಮಿಕರಿಗೆ ನೆರವಾಗಲು ಸರ್ಕಾರಕ್ಕೆ ಆದೇಶ

ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಂಕಷ್ಟಗಳ ಬಗ್ಗೆ ಸುಯೋ ಮೋಟುವನ್ನು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅವರಿಗೆ ಸಾಕಷ್ಟು ಸಾರಿಗೆ ವ್ಯವಸ್ಥೆ, ಆಹಾರ ಮತ್ತು ಆಶ್ರಯವನ್ನು ಉಚಿತವಾಗಿ ನೀಡಬೇಕು ಎಂದು ಹೇಳಿದೆ.

ಮಾರ್ಚ್ 25 ರಿಂದ ದೇಶಾದ್ಯಂತ ಲಾಕ್‌ಡೌನ್ ಮಾಡಿದ ನಂತರ, ಉದ್ಯೋಗ ಕಳೆದುಕೊಂಡ ಹಾಗೂ ಸಾರಿಗೆ ಸ್ಥಗಿತದಿಂದಾಗಿ ವಲಸೆ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದರು. ಅವರು ಹಲವಾರು ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವರಲ್ಲಿ ಸಾವಿರಾರು ಜನರು ತಮ್ಮ ಸ್ಥಳೀಯ ಹಳ್ಳಿಗಳಿಗೆ ನಡೆದುಕೊಂಡೇ ಹಿಂದಿರುಗಿದರು.

ಸುಪ್ರೀಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಎಂ ಆರ್ ಶಾ ಅವರುಗಳಿರುವ ನ್ಯಾಯಪೀಠವು ಕೇಂದ್ರ ಮತ್ತು ರಾಜ್ಯಗಳಿಗೆ ನೋಟಿಸ್ ಜಾರಿಗೊಳಿಸಿದ್ದು,  ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಎಲ್ಲಾ ಕ್ರಮಗಳನ್ನು ಗುರುವಾರ ವಿವರಿಸುವಂತೆ ಕೇಳಿದೆ.

“ಇಡೀ ದೇಶದಲ್ಲಿ ಲಾಕ್‌ಡೌನ್‌ನ ಪ್ರಸ್ತುತ ಪರಿಸ್ಥಿತಿಯಲ್ಲಿ, ಸಮಾಜದರುವ ಹಿಂದುಳಿದ ವಲಸೆ ಕಾರ್ಮಿಕ ವರ್ಗಕ್ಕೆ ಸರ್ಕಾರಗಳ ನೆರವು ಮತ್ತು ಸಹಾಯದ ಅಗತ್ಯವಿದೆ. ವಿಶೇಷವಾಗಿ ಈ ಕಷ್ಟಕರ ಪರಿಸ್ಥಿತಿಯಲ್ಲಿ ಭಾರತ ಸರ್ಕಾರ, ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳು ಸಹಾಯ ಹಸ್ತ ಚಾಚಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ನ್ಯಾಯಪೀಠ ಹೇಳಿದೆ.

ರಸ್ತೆಯ, ಹೆದ್ದಾರಿ, ರೈಲ್ವೆ ನಿಲ್ದಾಣಗಳು ಮತ್ತು ರಾಜ್ಯ ಗಡಿಗಳಲ್ಲಿ ಇನ್ನೂ ಹೆಚ್ಚಿನ ಭಾಗಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರ ಬಿಕ್ಕಟ್ಟು ಇಂದಿಗೂ ಮುಂದುವರೆದಿದೆ ಎಂದು ನ್ಯಾಯಾಲಯ ಹೇಳಿದೆ.

ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಮತ್ತು ಸೈಕಲ್‌ಗಳಲ್ಲಿ ನಡೆಯುವ ದುರದೃಷ್ಟಕರ ಮತ್ತು ಶೋಚನೀಯ ಪರಿಸ್ಥಿತಿಗಳನ್ನು ಎತ್ತಿ ತೋರಿಸಿರುವ ಮಾಧ್ಯಮ ವರದಿಗಳನ್ನು ನ್ಯಾಯಾಲಯ ಗಮನಿಸಿದೆ.

“ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಗಳನ್ನು ಕೈಗೊಂಡಿದ್ದರೂ ಹಲವಾರು ಅಸಮರ್ಪಕತೆಗಳು ಮತ್ತು ಕೆಲವು ನ್ಯೂನತೆಗಳು ಕಂಡುಬಂದಿವೆ. ಪರಿಸ್ಥಿತಿಯನ್ನು ನಿಬಾಯಿಸಲು ಪರಿಣಾಮಕಾರಿಯಾದ ಕೇಂದ್ರೀಕೃತ ಪ್ರಯತ್ನಗಳ ಅಗತ್ಯವಿದೆ” ಎಂದು ನಾಯಪೀಠ ಹೇಳಿದೆ.

ಈ ಹಿಂದೆ ಸಲ್ಲಿಸಿದ ಹಲವಾರು ಪಿಐಎಲ್‌ಗಳು ಕೇಂದ್ರ ಮತ್ತು ರಾಜ್ಯಗಳಿಗೆ ಪರಿಣಾಮಕಾರಿ ನಿರ್ದೇಶನಗಳನ್ನು ನೀಡಲು ವಿಫಲವಾಗಿವೆ. ಹಾಗಾಗಿ ಸುಪ್ರೀಂ ಕೋರ್ಟ್ ಅನ್ನು ನಿವೃತ್ತ ನ್ಯಾಯಾಧೀಶರು, ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದರು. ಇದಾದ ಬಳಿಕ ಸುಪ್ರೀಂ ಕೋರ್ಟ್ ವಲಸೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಹರಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights