ಮಿಡತೆ ಸಮಸ್ಯೆ: ಪಾಕಿಸ್ತಾನದ ಪರಿಹಾರ – ಕೋಳಿಗಳ ಆಹಾರ

25 ವರ್ಷಗಳಲ್ಲಿ ಮೊದಲ ಬಾರಿಗೆ ಮಿಡತೆಗಳ ಬೃಹತ್‌ ಹಿಂಡು, ಭಾರತ ಮತ್ತು ಪಾಕಿಸ್ತಾನದ ಕೃಷಿ ಪ್ರದೇಶಗಳಿಗೆ ಸವಾಲಾಗಿ ಎದುರಾಗಿವೆ. ಮಿಡತೆಗಳ ನಾಶಕ್ಕಾಗಿ ಪರಿಸರಕ್ಕೆ ಹಾನಿಯುಂಟುಮಾಡುವ ಕೀಟನಾಶಕಗಳನ್ನು ಬಳಸದಿರಲು ಪಾಕಿಸ್ಥಾನ ನಿರ್ಧರಿಸಿದೆ. ಹಾಗಾಗಿ  “ಮಿಡತೆಗಳನ್ನು ಹಿಡಿಯಿರಿ – ಹಣ ಗಳಿಸಿರಿ” ಎಂಬ ಹೊಸ ಪ್ರಾಯೋಗಿಕ ಯೋಜನೆ ಮೂಲಕ ಮಿಡತೆಗಳನ್ನು ಕೊಲ್ಲಲು ಪಾಕ್ ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಜೈಪುರದಲ್ಲಿ ಮಿಡತೆಗಳ ಬೃಹತ್ ಹಿಂಡುಗಳು ಎಲ್ಲೆಡೆ ತುಂಬಿದ್ದವು. ಅತ್ಯಂತ ಹೆಚ್ಚು ಜನರು ವಾಸಿಸುವ ಈ ನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಕೊರೊನಾ ಸಂಕಷ್ಟದಿಂದ ಹೊಡೆತ ತಿಂದಿದ್ದ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಮಿಡತೆಗಳ ಹಿಂಡು ಮತ್ತಷ್ಟು ಅಪಾಯವನ್ನು ತಂದಿರಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಪಾಕಿಸ್ತಾನದ ಪೂರ್ವ ಪ್ರಾಂತ್ಯಗಳಲ್ಲಿ ಚಳಿಗಾಲದ ಆರಂಭದಲ್ಲಿಯೇ ಮಿಡತೆಗಳ ಆಕ್ರಮಣ ಶುರುವಾಗಿತ್ತು. ಇದು ಬೇಸಿಗೆಯ ಮಧ್ಯದ ಕಾಲದವರೆಗೂ ಮುಂದುವರೆಯುತ್ತದೆ ಎಂದು ಹೇಳಲಾಗುತ್ತಿದೆ. ಈ ಮಿಡತೆಗಳನ್ನು ನಾಶ ಮಾಡುವುದಕ್ಕಾಗಿ ಪಾಕಿಸ್ತಾನದ ಸರ್ಕಾರವು ಫೆಬ್ರವರಿಯಲ್ಲಿ ರಾಷ್ಟ್ರೀಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿತು. ಸುಮಾರು 3,00,000 ಲೀಟರ್ ಕೀಟನಾಶಕವನ್ನು ವಾಯುಪಡೆ ಸಿಂಪಡಿಸುತ್ತಿತ್ತು.

ಆದರೆ, ಸರ್ಕಾರ ಬಳಸುವ ಕೀಟನಾಶಕಗಳು ಮಾನವರಿಗೆ ಕ್ಯಾನ್ಸರ್ ಮತ್ತು ವನ್ಯಜೀವಿಗಳಿಗೆ ವಿಷಕಾರಿ ಎಂದು ಪೇಶಾವರ ಕೃಷಿ ವಿಶ್ವವಿದ್ಯಾಲಯದ ಪ್ರಾಣಿ ಜೀವಶಾಸ್ತ್ರಜ್ಞ ಸೊಹೈಲ್ ಅಹ್ಮದ್ ಎಚ್ಚರಿಸಿದ್ದರು. ಅಲ್ಲದೆ, ಮಿಡತೆಗಳನ್ನು ನಿಯಂತ್ರಿಸಲು ಯಾವುದೇ ಜೈವಿಕ ಸುರಕ್ಷಿತ ಕೀಟನಾಶಕವನ್ನು ಬಳಸಲಾಗುವುದಿಲ್ಲ ಎಂದು ಹೇಳಲಾಗಿದೆ.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಮಿಡತೆಗಳ ಕಾಟ ಉಲ್ಬಣಗೊಳ್ಳುತ್ತಿತ್ತು. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಪಾಕಿಸ್ತಾನದ ಒಕಾರಾ ಜಿಲ್ಲೆಯ ಒಂದು ಹೊಸ ಪ್ರಯೋಗಿಕ ಪರಿಹಾರವನ್ನು ಮಾಡಲು ಮುಂದಾಗಿದ್ದಾರೆ. ರೈತರು ಮಿಡತೆಗಳಿಗೆ ಬಲೆ ಹಾಕಿ, ಅವುಗಳನ್ನು ಸಂಗ್ರಹಿಸಿ ಹಣವನ್ನು ಸಂಪಾದನೆ ಮಾಡುವ ಮಾರ್ಗವನ್ನು ಸೂಚಿಸಲಾಗಿತ್ತು. ಬಲೆಯಲ್ಲಿ ಹಿಡಿದ ಮಿಡತೆಗಳನ್ನು ಪಶು ಆಹಾರ ಗಿರಣಿಗಳಿಗೆ ಮಾರಿ, ಕೋಳಿಗಳಿಗೆ ಹೆಚ್ಚಿನ ಪ್ರೋಟೀನ್ ಉಳ್ಳ ಆಹಾರವನ್ನು ತಯಾರಿಸಲಾಗತ್ತದೆ.

ಈ ಯೋಜನೆಯನ್ನು, ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಸಂಶೋಧನಾ ಸಚಿವಾಲಯದ ಅಧಿಕಾರಿ ಮುಹಮ್ಮದ್ ಖುರ್ಷಿದ್ ಮತ್ತು ಪಾಕಿಸ್ತಾನ ಕೃಷಿ ಸಂಶೋಧನಾ ಮಂಡಳಿಯ ಜೈವಿಕ ತಂತ್ರಜ್ಞಾನ ತಜ್ಞ ಜೋಹರ್ ಅಲಿ ಅವರ ಉಪಾಯವಾಗಿದ್ದು, “ಇದನ್ನು ಮಾಡಿದ್ದಕ್ಕಾಗಿ ನಾವು ಅಪಹಾಸ್ಯಕ್ಕೊಳಗಾಗಿದ್ದೇವೆ – ಜನರು ನಿಜವಾಗಿಯೂ ಮಿಡತೆಗಳನ್ನು ಹಿಡಿದು ಮಾರಾಟ ಮಾಡಬಹುದೆಂದು ಯಾರೂ ಭಾವಿಸಲಿಲ್ಲ” ಎಂದು ಅಲಿ ಹೇಳಿದ್ದಾರೆ.

ಆದರೆ, ಮತ್ತೂ ಮುಂದುವರೆದ ಈ ಇಬ್ಬರು “ಮಿಡತೆಗಳನ್ನು ಹಿಡಿಯಿರಿ – ಹಣ ಗಳಿಸಿರಿ” ಎಂಬ ಘೋಷಣೆಯನ್ನು ಕೊಟ್ಟು, ಪ್ರತಿ ಒಂದು ಕೆ.ಜಿ ಮಿಡತೆಗೆ 20 ರೂ ಪಾಕಿಸ್ಥಾನಿ ಹಣ ಕೊಡುವುದಾಗಿ ಹೇಳಲಾಯಿತು. ಹಗಲಿನ ವೇಳೆ ಮಿಡತೆಗಳು ಸಂಚರಿಸುತ್ತವೆ. ರಾತ್ರಿಯ ವೇಳೆ ಮರಗಳ ಮೇಲೆ ಗುಂಪಾಗಿ ಕೂರುತ್ತವೆ. ಆ ಸಂದರ್ಭದಲ್ಲಿ ಮಿಡತೆಗಳನ್ನು ಹಿಡಿಯಲಾಗುತ್ತಿದೆ. ಪ್ರತಿರಾತ್ರಿ ಸರಾಸರಿ ಏಳು ಟನ್ ಮಿಡತೆಗಳನ್ನು ಹಿಡಿಯಲಾಗುತ್ತಿದೆ ಎಂದು ಖುರ್ಷಿದ್ ಹೇಳಿದ್ದಾರೆ.

ಹೊಸ ಪ್ರಯೋಗದ ಮೂಲಕ ಮಿಡತೆಗಳನ್ನು ನಾಶ ಮಾಡುವ ಹಾಗೂ ನಾಶದ ಜೊತೆಗೆ ಹಣವನ್ನೂ ಸಂಪಾದಿಸುವ ಈ ಪ್ರಯೋಗ ಪಾಕಿಸ್ಥಾನದಲ್ಲಿ ಯಶಸ್ವಿಯಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights