ಗಿರೀಶ್ ಕಾರ್ನಾಡ್ ಸ್ಮರಣೆ: 1998ರ ಒಂದು ಭಾನುವಾರ

[ಖ್ಯಾತ ನಾಟಕಕಾರ, ಸಾಹಿತಿ, ನಟ ಗಿರೀಶ್ ಕಾರ್ನಾಡ್ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ. ಯದುನಂದನ್ ಅವರು ಈ ತಮ್ಮ ಬರಹದಲ್ಲಿ ಅವರ ನೆನಪಿನ ಮತ್ತು ಅವರ ಓದಿನ ಕಾರ್ನಾಡ್ ಚಿತ್ರಣವನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ]

ಆಗ ನಾನು ಚನ್ನೇಗೌಡನ ದೊಡ್ಡಿ(ಈಗ ವೀರಣ್ಣಗೌಡ ನಗರ) ನನ್ನ ತಾತನ ಮನೆ ಮುಂಭಾಗದಲ್ಲೇ ಇದ್ದ ಎಚ್.ಕೆ. ವೀರಣ್ಣಗೌಡ ಕಾಲೇಜಿನಲ್ಲಿ ದ್ವೀತಿಯ ಪಿ.ಯು.ಸಿ. ಓದುತ್ತಿದ್ದೆ. ಭಾನುವಾರ ಆಗಿದ್ದರಿಂದ ನಮ್ಮ ತಾತ  ಕೆಲಸಕ್ಕೆ ಹಚ್ಚಿದ್ರು. ಈ ನನ್ನ ತಾತನಿಗೆ ಯಾರಾದ್ರೂ ಸುಮ್ಮನೆ ಕೂತಿದ್ರೆ ಸಹಿಸುತ್ತಿರಲಿಲ್ಲ. ಹಾಗೇನಾದ್ರೂ ಕೂತಿದ್ರೆ, ‘ಲೋ ಮಗ ಬಾಯ್ಲಿ ಆ ಹಸಿಗೆ ವಸಿ ನೀರ್ ತೋರ್ಸು’ ಅನ್ನೋರು. ಈಗ ತಾನೆ ತೋರಿಸ್ದೆ ಕಣಯ್ಯ(ತಾತನನ್ನ ನಾವು ಕರೆಯುತಿದ್ದದ್ದು ಅಯ್ಯ ಅಂತ) ಅಂದ್ರೆ, ‘ಆಯ್ತು ವಸಿ ವಣುಲ್ಲು ಹಾಕು’ ಅನ್ನೋರು. ಹಾಕಿದಿನಿ ನೋಡು ಬೇಕಾದ್ರೆ ಇನ್ನೂ ಗೊಂತಲ್ಲೆ ಜಾಸ್ತಿ ಆಯ್ತೆ ಅಂದ್ರೆ, ‘ತೊಪ್ಪೆ ಹಿಂದಕ್ಕೆ ತಳ್ಳು ಮೈಯೆಲ್ಲಾ ಗಬ್ಡ ಮಾಡ್ಕತವೆ’ ಅನ್ನೋರು. ತೊಪ್ಪೆ ತಳ್ಳಿ ಬಂದು ಕೂತ್ರೆ, ಒಂದು ನಿಮಿಷ ಸುಮ್ನೆ ಇದ್ದು ‘ಲೋ ಮಗ ಆ ಮರ್ದು ಬಾಚಣಿಗೆ ತತ್ತಾಯ್ಲಿ, ಯಾಕೋ ವಸಿ ಬೆನ್ನು ಕಡಿತದೆ, ವಸಿ ಉಜ್ಜುವಂತೆ ಅನ್ನೋರು.  ಬಿಳಿ ರೋಮಗಳೇ ತುಂಬಿದ ಆ ಬೆನ್ನು ಉಜ್ಜುವಾಗ ಮಾತ್ರ, ಇವರ ಕಣ್ಣಿಗೆ ಯಾಕಾದ್ರೂ ಬಿದ್ನಪ್ಪ ನಾನು, ಬೆಳಿಗ್ಗೆ ಯಾವ ಮಗ್ಗಲಲ್ಲಿ ಎದ್ದೆ ಅಂತ ಶಪಿಸ್ಕೊತಿದ್ದೆ.

ತೆಂಗಿನ ಕಾಯಿ ಕಿತ್ತು ತಂದು ಮನೆ ಮುಂದೆ ರಾಶಿ ಮಾಡಿ  ಮೂರು ದಿನ ಆಗಿತ್ತು. ಸಾವಿರ ಸಂಖ್ಯೆಯಲ್ಲಿದ್ದ ಆ ಕಾಯಿಗಳನ್ನ ನಮ್ಮ ತಾತ ಯಾರಿಗೋ ಮಾರಾಟ ಮಾಡಿದ್ರು. ಅವರು ಭಾನುವಾರ ಬೆಳಿಗ್ಗೆನೆ ಬಂದು ಕಾಯಿ ಸುಲಿಯೋದಿಕ್ಕೆ ಶುರು ಮಾಡಿದ್ರು. ನಾನು ಮತ್ತು ನನ್ನ ಸೋದರ ಮಾವ (ದೊಡ್ಡವರು) ಇಬ್ಬರೂ, ಅವರಿಗೆ ಸುಲಿಯೋ ಜಾಗಕ್ಕೆ ಕಾಯಿ ತಂದು ಕೊಡುವುದು, ಸಿಪ್ಪೆಗಳನ್ನ ಬೇರೆ ಒಂದು ರಾಶಿ ಮಾಡುವುದು ಮಾಡುತಿದ್ದೊ. ಇದ್ದಕ್ಕಿಂದಂತೆ ಪಕ್ಕದಲ್ಲೆ ಇದ್ದ ರಸ್ತೆಯಿಂದ ಒಂದು ಕಾರು ಜೋರಾಗಿ ಬ್ರೇಕ್ ಹಾಕಿದ ಶಬ್ದ ಬಂತು. ನೋಡಿದರೆ ಒಂದು ಬಿಳಿ ಕಲರ್ ಮಾರುತಿ ಒಮ್ನಿ ಕಾರಿನ ಮುಂದೆ ಒಂದು ಬೈಕ್.  ಆ ಒಮ್ನಿಯನ್ನ ಓವರ್ ಟೇಕ್ ಮಾಡಿ ಬೈಕಿನವ ಸಡನ್ನಾಗಿ ಕಾರಿಗೆ ಅಡ್ಡಲಾಗಿ ನಿಲ್ಲಿಸಿದ್ದರಿಂದ ಆ ಬ್ರೇಕ್  ಶಬ್ದ. ಬೈಕಿನವ ಮತ್ತು ಕಾರಿನ ಚಾಲಕ ಇಬ್ಬರ ಜಗಳವನ್ನು ನೋಡುತ್ತಿದ್ದಾಗ ನಮಗೆ ತಿಳಿದದ್ದು. ಈ ಕಾರಿನವ ಮದ್ದೂರು tb ಸರ್ಕಲ್ ನಲ್ಲಿ ಯಾರೋ ಬೈಕಿನವರಿಗೆ ಗುದ್ದಿದ್ದಾನೆ, ಗುದ್ದಿ ಕಾರು ನಿಲ್ಲಿಸದೆ ಬಂದುಬಿಟ್ಟಿದ್ದಾನೆ. ಬೆಂಗಳೂರಿಂದ ಮೈಸೂರಿಗೆ ಹೋಗುತ್ತಿದ್ದ ಕಾರು ಗುದ್ದಿದ ನಂತರ ಯಾರೋ ಹಿಂಬಾಲಿಸುತ್ತಿರುವುದು ಗಮನಕ್ಕೆ ಬಂದು, ಹೆದ್ದಾರಿ ಪಕ್ಕದ ವಳಗರಹಳ್ಳಿ ರಸ್ತೆ ಅಂದರೆ ನಮ್ಮ ಮನೆ ಮತ್ತು HK ವೀರಣ್ಣಗೌಡ ಕಾಲೇಜಿನ ನಡುವಿನ ರಸ್ತೆಗೆ ತಿರುಗಿಸಿದ್ದಾರೆ. ತಿರುಗಿಸುವಾಗ ಸ್ವಲ್ಪ ತಡವಾಗಿದೆ, ಅಷ್ಟೊತ್ತಿಗೆ ಬೈಕಿನವನು ಬಂದಿದ್ದಾನೆ, ಕಾರು ತಿರುಗಿಸಿ 50 ಮೀಟರ್ ದೂರ ಬರುವಷ್ಟರಲ್ಲಿ ಬೈಕಿನವನು ಇವರನ್ನು ಓವರ್ ಟೇಕ್ ಮಾಡಿ ಕಾರಿಗೆ ಅಡ್ಡಲಾಗಿ ತನ್ನ ಬೈಕ್ ನಿಲ್ಲಿಸಿದ್ದಾನೆ.

ಈ ಬೈಕಿನವ ಬೆಳಿಗ್ಗೇನೆ ವಸಿ ಏರಿಸಿದ್ದಾನೆ. ಇವರಿಬ್ಬರ ಜಗಳ ಯಾಕೋ ಬಗೆಹರಿಯುವಂತೆ ಕಾಣದಿದ್ದಾಗ ಕಾರಿನ ಮಧ್ಯ ಸೀಟಿನಲ್ಲಿ ಕೂತಿದ್ದವರು, ಕಾರಿನ ಬಾಗಿಲನ್ನು ಪಕ್ಕಕ್ಕೆ ಸರಸಿ ಕೆಳಗೆ ಇಳಿದರು. ಕಾರಿನಿಂದಿಳಿದ ಆ ವ್ಯಕ್ತಿ ನೋಡಿ ನನಗೆ ಪರಮಾಶ್ಚರ್ಯ!!! ಅವರನ್ನು ನೋಡುತ್ತಿದ್ದಾಗೆ ನನಗೆ ಮೊದಲು ನೆನಪಾಗಿದ್ದು ಮಾತ್ರ ‘ಶರ್ಮಿಷ್ಠೆ’ ಆ ನಂತರ ಯಯಾತಿ, ದೇವಯಾನಿ, ಪುರು ಮುಂತಾದವರೆಲ್ಲಾ ನೆನಪಿಗೆ ಬಂದ್ರು. ಆಗ  ದ್ವೀತಿಯ ಪಿ.ಯು.ಸಿ.ಗೆ ಯಾಯಾತಿ ನಾಟಕ ಪಠ್ಯವಾಗಿತ್ತು. ನಮ್ಮ ‘ಶ್ರೀಲತಾ’ ಮೇಡಮ್ ಬಹಳ ಸೊಗಸಾಗಿ ಆ ಪಾಠ ಮಾಡಿದ್ರು. ಅದರಲ್ಲೂ ಶರ್ಮಿಷ್ಠೆ ಪಾತ್ರದ ಅವರ ವಿವರಣೆ ಇನ್ನೂ ಮಾಸಿಲ್ಲ. ಈ ರಸ್ತೆ ಮಧ್ಯ ಜಗಳ ಆಡುವುದು ಯಾಕೋ ಅವರಿಗೆ ಸರಿ ಕಾಣಲಿಲ್ಲ. ಬಂದವರೆ ತನ್ನ ಕಾರಿನ ಚಾಲಕನಿಗೆ ಜಗಳ ಬೇಡ ಅಂತ ಹೇಳಿ, ಆ ಬೈಕಿನವನಿಗೆ ಇಲ್ಲಿ ಜಗಳ ಬೇಡ Police ಸ್ಟೇಷನ್ನಿಗೆ ಹೋಗೋಣ ಅಲ್ಲೆ ತಿರ್ಮಾನ ಆಗ್ಲಿ ಅಂತ ತಾಕಿತು ಮಾಡಿದ್ರು. ನನಗೆ ಅವರು  ಮಾಡಿದ Police ಪದದ ಉಚ್ಚಾರಣೆ ವಿಶೇಷ ಅನ್ನಿಸ್ತು ಅದು ಕನ್ನಡದ ಪೋಲಿಸ್ ಅಥವಾ ಪೂಲಿಸ್ ಎರಡೂ ಆಗಿರಲಿಲ್ಲ, ಅವೆರಡರ ಮಧ್ಯದ ಉಚ್ಚಾರಣೆ ಅನ್ನಿಸ್ತು. ಮುಂದೆ ನನ್ನ ಅಣ್ಣ Boss ಅನ್ನೋ ಪದವನ್ನ ಯುರೋಪ್ ನಲ್ಲಿ ಹೇಗೆ ಉಚ್ಛರಿಸುತ್ತಾರೆ ಅಂತ ಹೇಳಿದ, ಅದು ಬಾಸ್ ಅಥವಾ ಬೋಸ್ ಅಂತ ಉಚ್ಛರಿಸಬಾರದು ಆ ಎರಡರ ನಡುವಿನ ಒಂದು ಟೋನ್ ಇದೆ ಅಂತ. ಕಾರ್ನಾಡರ ಆ ಉಚ್ಛಾರಣೆಗೆ ಲಂಡನ್ ಪ್ರಭಾವ ಇದೆ ಅಂತ ಅವಾಗ ಗೊತ್ತಾಯ್ತು.

ಈ ಜಗಳವನ್ನ ಗಮನಿಸುತ್ತಿದ್ದ ನನ್ನ ತಾತ, ‘ಓ ಗುದ್ಬುಟ್ಟು ಬಂದಿದ್ದಾರಾ ಇವರು, ಕಾರು ನಿಲ್ಲಿಸ್ದೆ ಬಂದವರಲ್ಲಾ ಎಂತಾ ಐನಾತಿ ಮಕ್ಕಳು . ಲೋ ಇವ್ನೆ ಬುಡ್ಬೇಡಾ ಸರಿಯಾಗಿ ಕಿತ್ಕೊಂಡು ಕಳಿಸು’ ಅಂತ ಆ ಬೈಕಿನವನಿಗೆ ಕೂತಲ್ಲೆ ಕೂಗಿ ಹೇಳಿದರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ನನ್ನ ದೊಡ್ಡವ್ವನ ಮಗ ನನ್ನ ತಾತನಿಗೆ ‘ಅಯ್ಯೋ, ಸುಮ್ಕಿರಯ್ಯ ಅವರು ಯಾರು ಅಂತ ಗೊತ್ತಾ ನಿನಗೆ, ಅವರು ಬಹಳ ದೊಡ್ಡವ್ರು. ಸಿಕ್ಕಾಪಟ್ಟೆ ಬರೆದು ಹೆಸರು ಮಾಡವ್ರೆ’ ಅಂದ. ಅಷ್ಟೊತ್ತಿಗಾಗ್ಲೆ ನನ್ನ ದೊಡ್ಡವ್ವನ ಮಗ ಬೆಂಗಳೂರಲ್ಲಿ ಬಿ.ಎಸ್ಸಿ. ನರ್ಸಿಂಗ್ ಓದುತಿದ್ದರಿಂದ, ನನ್ನ ತಾತ ಅವನ ಮಾತಿಗೆ ಮರು ಮಾತನಾಡದೆ. ಸಲಹೆ ಕೊಡೋದು ಬಿಟ್ಟು ಜಗಳ ನೋಡೋದನ್ನ ಮುಂದುವರೆಸಿದರು.

ಕೊನೆಗೆ ಯಾವುದು ಬಗೆಹರಿಯಲಿಲ್ಲ. ಪೋಲಿಸ್ ಸ್ಟೇಷನ್ನಿಗೆ ಹೋಗೋದು ಅಂತ ತಿರ್ಮಾನ ಆಯ್ತು. ಮೊದಲು ಕಾರಿನಲ್ಲಿ ಕಾರ್ನಾಡ್ ಮತ್ತು ಅವನ ಚಾಲಕ ಹೋದ್ರು ನಂತರ ಈ ಬೈಕಿನವನು ಅವರನ್ನು ಹಿಂಬಾಲಿಸಲು ಬೈಕ್ ಸ್ಟಾರ್ಟ್ ಮಾಡೋದಿಕ್ಕೆ ಅಂತ ಕಿಕ್ ಮಾಡ್ತಾನೆ ಸ್ಟಾರ್ಟ್ ಆಗ್ತಿಲ್ಲ, ಕಿಕ್ ಮೇಲೆ ಕಿಕ್, ಕಿಕ್ ಮೇಲೆ ಕಿಕ್ ಸ್ಟಾರ್ಟ್ ಆಗ್ತಿಲ್ಲ. ಬೈಕಿನವನಿಗೆ ಮತ್ತೆ ಇವರು ಎಲ್ಲಿ ಮಿಸ್ಸಾಗ್ಬಿಟ್ಟಾರು ಅನ್ನೋ ಆತಂಕ. ಅಲ್ಲೆ ಬೈಕಿನ ಪಕ್ಕ ಜಗಳ ನೋಡುತ್ತಾ ನಿಂತಿದ್ದ ಮತ್ತೊಬ್ಬರು, ಇವನ ಪರಿಸ್ಥಿತಿ ನೋಡಲಾರದೆ ಆಫ್ ಮೋಡಲಿದ್ದ  ಕೀ ಯನ್ನ ಆನ್ ಮೋಡಿಗೆ ತಿರುಗಿಸಿದರು. ಬೈಕ್ ಸ್ಟಾರ್ಟ್ ಆಯ್ತು, ಅವನು ಹೊರಟ. ಅಲ್ಲೆ ಇದ್ದ ಮತ್ತೊಬ್ಬರು ಆ ಕೀ ತಿರುಗಿಸಿದ ವ್ಯಕ್ತಿಗೆ ‘ನೀನ್ ಯಾಕೆ ಆನ್ ಮಾಡಕೋದೆ ಮಾರಾಯ ಇನ್ನು ವಸಿವತ್ತು ಗಾಡಿ ಕಿಕ್ ಮಾಡಿದ್ರೆ ಬಾಡಿಲಿರೋ ಕಿಕ್ ಇಳಿಯೋದು ಅಂದ್ರು.

***********

ಕಾರ್ನಾಡ್ ತಮ್ಮ  ಸಿನಿಮಾ ನಟನೆಯ ವೃತ್ತಿಯನ್ನು ಜೀವನೋಪಯಕ್ಕಾಗಿ ಮಾಡಿದ ಒಂದು ಉಪವೃತ್ತಿ ಎಂದು ಹೇಳಿಕೊಂಡಿದ್ದಾರೆ. ದುರಾದೃಷ್ಟ ನನ್ನಂತ ಸಿನಿಮಾ ವೀಕ್ಷಕನಿಗೆ ಕಾರ್ನಡ್ ಆಕರ್ಷಿಸಿದ್ದು ಸಿನಿಮಾ ನಟರಾಗಿ. ಕನ್ನಡದ ಸಂಸ್ಕಾರ ಅವರ ನಟನಾವೃತ್ತಿಯ ಮೊದಲ ಹೆಜ್ಜೆ. ಈ ಸಿನಿಮಾದ ನಟನೆ ಮಾತ್ರ ಅಲ್ಲದೆ ಅದರ ಎಲ್ಲಾ ಪ್ರಕ್ರಿಯೆಯಲ್ಲಿ ಕಾರ್ನಾಡ್ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂಸ್ಕಾರ ಸಿನಿಮಾ ಕನ್ನಡ ಸಿನಿಮಾ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು ಎಂದು ಗುರುತಿಸುವುದಿದೆ. ಆ ನಂತರ ಕಾರ್ನಾಡ್ ನಟನೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಿಗೂ ವಿಸ್ತರಿಸಿತು. ಕಲಾತ್ಮಕ, ಬ್ರಿಡ್ಜ್, ಕಮರ್ಷಿಯಲ್ ಯಾವುದೇ ಭೇದವನ್ನು ಮಾಡದೆ ಸಣ್ಣ ಪಾತ್ರದಿಂದ ಹಿಡಿದು ಪ್ರಧಾನ ಪಾತ್ರದವರೆಗೂ ನಟಿಸಿದರು.

ನಾನು ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, ಗಿರೀಶ್ ಕಾರ್ನಾಡ್ ಮುಖ್ಯವಾಗುವುದು ಒಬ್ಬ ಸಿನಿಮಾ ನಟ ಎಂಬ ಕಾರಣಕ್ಕಾಗಿ ಅಲ್ಲವೇ ಅಲ್ಲ ಅವರು ರಚಿಸಿದ ನಾಟಕಗಳಿಗಾಗಿ ಮತ್ತು ಆ ನಾಟಕಗಳಲ್ಲಿ ಇದ್ದ ಅವರ ಅಲೋಚನೆ(idea)ಯ ಕಾರಣಕ್ಕೆ ಎಂದು ಮನವರಿಕೆ ಆಯ್ತು. ಕಾರ್ನಾಡರ ಬಹುತೇಕ ನಾಟಕಗಳನ್ನ ನಾನು ಓದಿಲ್ಲವಾದರೂ ಓದಿದ ಕೆಲವೇ ನಾಟಕಗಳಲ್ಲಿ, ಅವರು ಪುರಾಣ ಮತ್ತು ಐತಿಹಾಸಿಕ ಪಾತ್ರಗಳನ್ನು ಸಮಕಾಲಿನ ಸಮಾಜ ಮತ್ತು ಪರಿಸ್ಥಿತಿಗೆ ಎದರು-ಬದಿರಾಗಿ ನಿಲ್ಲಿಸಿ ನಡೆಸುವ ವಾಗ್ವಾದ ಬಹಳ ಮುಖ್ಯ ಅನಿಸಿದೆ. ತಮ್ಮ ನಾಟಕದ ರಚನಾ ವಿನ್ಯಾಸದ ಬಗ್ಗೆ ಅವರು ಹೇಳಿದ ಒಂದು ಅಭಿಪ್ರಾಯ ಕೇಳಿ ಬಹಳ ಆಶ್ಚರ್ಯ ಆಯ್ತು. ಅವರು ತಮ್ಮ ಕಾಲೇಜು ವಿದ್ಯಾಭ್ಯಾಸದಲ್ಲಿ ಕಲಿತ ಸಂಖ್ಯಾಶಾಸ್ತ್ರ ಮತ್ತು ಗಣಿತ ವಿಷಯಗಳು ತಮ್ಮ ನಾಟಕದ ರಚನೆಯಲ್ಲಿ ಬಹಳ ಸಹಕಾರಿ ಆಯ್ತು ಎಂದು ಹೇಳಿಕೊಂಡಿದ್ದಾರೆ. ಕಾರ್ನಾಡರ ಪ್ರತಿಭೆ ಮತ್ತು ಅವರ ಆದ್ಯತೆ ಬಗ್ಗೆ ಪಿ.ಲಂಕೇಶರ ಒಂದು ಪ್ರಶಂಸೆ ಮಾತು ಇಲ್ಲಿ ನೆನೆಯಬೇಕು “ಗಿರೀಶ್ ಕಾರ್ನಾಡ್ ಎಂಥ ವಿಚಿತ್ರ ಮನುಷ್ಯರೆಂಬುದು ಅನೇಕರಿಗೆ ಗೊತ್ತಿಲ್ಲ. ಈತ ಮನಸ್ಸು ಮಾಡಿದ್ದರೆ ವಿಕ್ರಮ್ ಸೇಠ್, ಸಲ್ಮಾನ್ ರಶ್ದಿ, ನಾಯ್ಪಾಲ್ ತರಹದ ಇಂಗ್ಲೀಷ್ ಲೇಖಕರಾಗಿ ಮೆರೆಯಬಹುದಿತ್ತು. ನಮ್ಮಲ್ಲಿ ಇಂಗ್ಲೀಷ್ ಭಾಷೆಯನ್ನು ಅದರೆಲ್ಲ ಚೆಂದದೊಂದಿಗೆ ಬಳಸಬಲ್ಲ ವ್ಯಕ್ತಿ ಗಿರೀಶ್. ಇಂಗ್ಲೀಷ್ ಲೇಖಕರ ಆದಾಯ, ಖ್ಯಾತಿ , ವೈಭವ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಕನ್ನಡದಲ್ಲಿ ನೂರು ನಾಟಕ ಬರೆದರೂ ದೊರಯದಷ್ಟು ಹಣ ಇಂಗ್ಲೀಷ್ ನ ಒಂದು ಕಿರು ನಾಟಕದಿಂದ ದೊರೆಬಲ್ಲದು. ಆದರೆ ಗಿರೀಶ್ ಅದಕ್ಕೆಲ್ಲ ಆಸೆ ಪಡಲಿಲ್ಲ”

ಕಾರ್ನಾಡರು ಮತ್ತೂ ಮುಖ್ಯ ಅನಿಸಿದ್ದು, ಅವರ ಅಲೋಚನೆ ಮತ್ತು ಅಭಿಪ್ರಾಯಗಳ ಸಲುವಾಗಿ. ಮೂರನೇ ಜಗತ್ತಿನ ಪ್ರಖಂಡ ಚಿಂತಕ ಎಂದೂ ಬೌದ್ಧಿಕ ವಲಯದಲ್ಲಿ ಹೆಸರಾಗಿದ್ದ ಕಾರ್ನಾಡ್ ಯಾವುದಾದರು ಸಮಕಾಲಿನ ವಿಷಯ/ವಿವಾದ ಕುರಿತಂತೆ ಅಭಿಪ್ರಾಯ/ತಕರಾರು ವ್ಯಕ್ತಪಡಿಸಿದರು ಮಾರನೆ ದಿನಕ್ಕೆ ಅದು ರಾಷ್ಟ್ರ ಮಟ್ಟದ ಸುದ್ದಿ ಆಗೋದು. ಬಲಪಂಥದ ಅಪಾಯದ ಬಗ್ಗೆ ಅವರಿಗಿದ್ದ ಒಳನೋಟ, ಟಿಪ್ಪು ಸುಲ್ತಾನನ ಕುರಿತ ಐತಿಹಾಸಿಕ ವಿವರಗಳಲ್ಲಿ ಅವರಿಗಿದ್ದ ನಿಖರತೆ, ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಇವರು ರಸ್ತೆಗಿಳಿದದ್ದು. ಇಲ್ಲಿ ಒಬ್ಬ ಸಾಹಿತಿ/ಕಲಾವಿದ ಸಾಮಾಜಿಕ ಹೊಣೆಗಾರಿಕೆಯನ್ನು ಹೇಗೆ ಹೊರಬೇಕು ಎಂಬುದಕ್ಕೆ ಮಾದರಿಯಾದರು.

ಪ್ರಜಾವಾಣಿ ಪತ್ರಿಕೆಯಲ್ಲಿ ಅವರ ಆತ್ಮಚರಿತ್ರೆ ‘ಆಡಾಡುತ ಆಯುಷ್ಯ’ ದ ಪ್ರಾರಂಭದ ಅಧ್ಯಾಯ ಓದಿ, ಕುತೂಹಲ ಬಂದು ನಂತರ ಇಡಿ ಪುಸ್ತಕ ಓದಿದೆ. ಓದುವಾಗ ಅವರ ಬಾಲ್ಯ, ಅವರ ಪ್ರತಿಭೆ, ಅವರು ಲಂಡನ್ ಗೆ ಹೋಗಿದ್ದು, ನಂತರ ಅಲ್ಲಿಂದಲೇ ನಾಟಕ ಬರೆದದ್ದು, ಲಂಡನ್ ನಲ್ಲಿ ಅವರ ಒಡನಾಟ, ಅವರು ಬಿಡಿಸಿದ ಪೊಟ್ರಾಯ್ಟ್ ಗಳು, ಇವನ್ನೆಲ್ಲ ತಿಳಿದು ಬಹಳ ಆಶ್ಚರ್ಯದ ಜೊತೆ ಸಂತೋಷ ಆಗೋದು. ಅವರ ಸುತ್ತ ಇದ್ದ ಬೌದ್ಧಿಕ ವಲಯ – ಇದೆಲ್ಲಾ ಓದುತಿದ್ರೆ ಎಷ್ಟ ದೊಡ್ಡ ಮಟ್ಟದ ಸಾಧನೆ ಅನ್ನಿಸೋದು. ಪುಸ್ತಕ ಓದಿದ ಸ್ವಲ್ಪ ದಿನಗಳ ನಂತರ, ಇವರು ಯಾವಾಗಲೂ ಮತ್ತು ತಮ್ಮ ಬಹುಪಾಲು ಜೀವನವನ್ನ ಈ Intellectualಗಳ ಜೊತೆ ಗುರುತಿಸಿಕೊಳ್ಳೋದಿಕ್ಕೆ, ಅವರ ಸಂಗದಲ್ಲಿ ಇರೋದಿಕ್ಕೆ ಬಯಸಿದ್ದಾರೆ ಮತ್ತು ಅದೇ ದಾರಿಯಲ್ಲಿ ದೊಡ್ಡ ದೊಡ್ಡ ಸ್ಥಾನಗಳಿಗೆ ಏರಲು ಪ್ರಯತ್ನಿಸಿದ್ದಾರೆ ಅನ್ನಿಸೋದಿಕ್ಕೆ ಶುರುವಾಯ್ತು. ಇಡೀ ಆತ್ಮ ಚರಿತ್ರೆಯಲ್ಲಿ ಬಾಲ್ಯ ಬಿಟ್ಟರೆ ಸಾಮಾನ್ಯರ ಸಂಪರ್ಕವೇ ಇಲ್ಲವೇನೋ ಅನ್ನಿಸಿತು. ಕಾರ್ನಾಡ್ ಜನರ ನಡುವಿನ ಸಾಹಿತಿ ಆಗಿದ್ರಾ? ಅವರು ಈ ದೇಶದ ತಳ ಸಮುದಾಯದ ಧ್ವನಿ ಆಗಿದ್ರಾ? ಮೇಲ್ವರ್ಗದ ಎಲ್ಲಾ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನ ಪಡೆದ ಕಾರ್ನಾಡರಿಗೆ ಈ ಕುರಿತು ಯಾವ ಅಭಿಪ್ರಾಯ ಇತ್ತು? ಇದು ಯಾವಾಗಲು ಕಾಡುವ ಪ್ರಶ್ನೆ. (ಇದು ನನ್ನ ಗ್ರಹಿಕೆಯ ಮಿತಿಯೂ ಇರಬಹುದು).

ಗಿರೀಶ್ ಕಾರ್ನಾಡ್ 81 ವರ್ಷದ ತುಂಬು ಜೀವನವನ್ನ ನಡೆಸಿದ್ದರು. ಅವರ ನಾಟಕ, ಸಿನಿಮಾ, ಜ್ಞಾನಪೀಠ ಮತ್ತು ಇತರೆ ಪ್ರಶಸ್ತಿಗಳ  ಜೊತೆ ಇಳಿವಯಸ್ಸಿನಲ್ಲಿ ಅವರು ಪಡೆದ ಬಹಳ ದೊಡ್ಡ ಪ್ರಶಸ್ತಿ Urban Naxal ಅನ್ನೋದೆಲ್ಲಾ ನನ್ನ ಮನಸ್ಸಿನಲ್ಲಿದೆ.

ಗಿರೀಶ್ ಕಾರ್ನಾಡ್ ಗೆ ಇಂತಿ ನಮಸ್ಕಾರಗಳು

  • ಯದುನಂದನ್ ಕೀಲಾರ, ಸರ್ಕಾರಿ ನೌಕರಿಯಲ್ಲಿರುವ ಯದುನಂದನ್ ಅವರಿಗೆ ಸಿನೆಮಾ ಮತ್ತು ಸಾಹಿತ್ಯ ಆಸಕ್ತಿಯ ಕ್ಷೇತ್ರ. ಹಲವು ಜನಪರ ಚಿತ್ರೋತ್ಸವಗಳ ಆಯೋಜನೆಯಲ್ಲಿ ಭಾಗಿಯಾಗಿದ್ದಾರೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights