ಮೋದಿಗೆ ಮಾತಿನ ಪರಿಣಾಮವನ್ನು ಅರಿತು, ಅದರ ಮೇಲೆ ಹಿಡಿತಹೊಂದಬೇಕು: ಮನಮೋಹನ್ ಸಿಂಗ್
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತುಗಳಿಂದಾಗಬಹುದಾದ ಪರಿಣಾಮಗಳ ಬಗ್ಗೆ ಅರಿವಿಟ್ಟುಕೊಂಡು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದಾರೆ.
ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಎದುರಾಗಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಅವರು, ಜವಾಬ್ದಾರಿ ಸ್ಥಾನದಲ್ಲಿರುವವರು ತಮ್ಮ ಮಾತಿನ ಮೇಲೆ ಹಿಡಿತ ಹೊಂದಿರುಬೇಕು. ತಮ್ಮ ಮಾತಿನಿಂದಾಗುವು ಪರಿಣಾಮಗಳ ಬಗ್ಗೆ ಅರಿವಿರಬೇಕು. ಅಲ್ಲದೆ, ಚೀನಾ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪ್ರಧಾನಿಯ ಮಾತು ಅವಕಾಶ ಮಾಡಿಕೊಡಬಾರದು ಎಂದು ಅವರು ಹೇಳಿದ್ದಾರೆ.
ತಪ್ಪು ಮಾಹಿತಿ ಕೊಡುವುದು ರಾಜತಾಂತ್ರಿಕತೆ ಅಥವಾ ನಿರ್ಣಾಯಕ ನಾಯಕತ್ವಕ್ಕೆ ಪರ್ಯಾಯವಲ್ಲ. ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಂಡು ಗಡಿಭಾಗದಲ್ಲಿ ಮೊನ್ನೆ ವೀರ ಮರಣ ಹೊಂದಿದ ಸೈನಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರಧಾನಿ ಮೋದಿಯವರಿಗೆ ಮಾಜಿ ಪ್ರಧಾನಿ ಸಲಹೆ ನೀಡಿದ್ದಾರೆ.
ಈ ವಿಷಯದಲ್ಲಿ ಇನ್ನೂ ಯಾವ ರೀತಿಯಲ್ಲೂ ಕ್ರಮ ಕೈಗೊಳ್ಳದಿದ್ದರೆ ಅಥವಾ ಅನ್ಯಾಯ ಮಾಡಿದರೆ ದೇಶದ ಜನರ ನಂಬಿಕೆಗೆ ದ್ರೋಹವೆಸಗಿದಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೇಶವು ಐತಿಹಾಸಿಕ ಕಾಲಘಟ್ಟದಲ್ಲಿ ನಿಂತಿದ್ದು, ಸರ್ಕಾರದ ನಿರ್ಧಾರಗಳು ಮತ್ತು ಕ್ರಮಗಳು ಭವಿಷ್ಯದ ಪೀಳಿಗೆಗಳು ನಮ್ಮನ್ನು ಹೇಗೆ ಗ್ರಹಿಸುತ್ತವೆ ಎಂಬುದರ ಬಗ್ಗೆ ಗಂಭೀರವಾದ ಪ್ರಭಾವ ಬೀರುತ್ತವೆ ಎಂದು ಹೇಳಿದ್ದಾರೆ.
ದೇಶದಲ್ಲಿ ನಮ್ಮನ್ನು ಮುನ್ನಡೆಸುವವರಿಗೆ ಜವಾಬ್ದಾರಿ, ಕರ್ತವ್ಯಗಳಿರುತ್ತದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಆ ಜವಾಬ್ದಾರಿ ಪ್ರಧಾನ ಮಂತ್ರಿಯ ಕಚೇರಿಯ ಮೇಲಿದೆ. ನಮ್ಮ ರಾಷ್ಟ್ರದ ಭದ್ರತೆಯ ಹಿತದೃಷ್ಟಿಯಿಂದ ಕಾರ್ಯತಂತ್ರ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಗ್ಗೆ ಅವರು ಆಡುವ ಮಾತುಗಳು ಮತ್ತು ಘೋಷಣೆಗಳ ಪರಿಣಾಮಗಳನ್ನು ಪ್ರಧಾನಿ ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.
ಪ್ರಧಾನಿ ಮೋದಿಯವರು ಕಳೆದ ವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ‘ಭಾರತಗೊಳಗೆ ಯಾರೂ ಪ್ರವೇಶಿಸಿಲ್ಲ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬಳಸಿಕೊಂಡು ಚೀನಾವು ಮೋದಿಯವರೇ ಹೇಳಿದ್ದಾರೆ. ಚೀನೀ ಸೈನಿಕರು ಭಾರತದೊಳಗೆ ಪ್ರವೇಶಿಸಿಲ್ಲ ಎಂದು. ಹಾಗಿದ್ದ ಮೇಲೆ ಚೀನಾದೊಳಗೆ ಭಾರತೀಯ ಸೈನಿಕರ ಪ್ರವೇಶಿಸಿದ್ದಾರೆಂದು ಒಪ್ಪಿಕೊಂಡಿದ್ದಾರೆ. ಘರ್ಷಣೆಗೆ ಭಾರತೀಯ ಸೈನಿಕರೇ ಕಾರಣ ಎಂದು ಸಮರ್ಥಿಸಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೋದಿವರಿಗೆ ತಮ್ಮ ಮಾತಿನ ಮೇಲೆ ಹಿಡಿತವೂ, ಮಾತಿನ ಪರಿಣಾಮ ಅರಿವೂ ಇರಬೇಕು ಎಂದು ಸಲಹ ನೀಡಿದ್ದಾರೆ.
ಇದನ್ನೂ ಓದಿ: ಮೋದಿ ಹೇಳಿಕೆ ಬಳಸಿಕೊಂಡು ಮೋದಿಗೇ ಆಪ್ ಇಟ್ಟ ಚೀನಾ:

