CBSE 10ನೇ ತರಗತಿ ಫಲಿತಾಂಶ ಪ್ರಕಟ: ಮೂರನೇ ಸ್ಥಾನ ಪಡೆದ ಕರ್ನಾಟಕ!
ಕೇಂದ್ರೀಯ ಪಠ್ಯಕ್ರಮದ CBSE ಹತ್ತನೇ ತರಗತಿ ಪರೀಕ್ಷೆಗಳ ಫಲಿತಾಂಶ ಇಂದು ಪ್ರಕಟವಾಗಿದ್ದು, ಬೆಂಗಳೂರು ವಲಯದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭರ್ಜರಿ ಫಲಿತಾಂಶ ಪಡೆಸಿದ್ದಾರೆ.
2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳು ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆ ಬರೆದಿದ್ದರು. ಪರೀಕ್ಷಾ ಫಲಿತಾಂಶ ಇಂದು (ಬುಧವಾರ) ಹೊರಬಿದ್ದಿದ್ದು, ಪರೀಕ್ಷೆ ಬರೆದ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಲ್ಲಿ ಶೇ. 98.23 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಫಲಿತಾಂಶದ ಪಟ್ಟಿಯಲ್ಲಿ ತಿರುವನಂತಪುರ ಹಾಗೂ ಚೆನ್ನೈ ನಂತರದ ಸ್ಥಾನವನ್ನು ಬೆಂಗಳೂರು ವಲಯವು ಪಡೆದುಕೊಂಡಿದ್ದು, ಮೂರನೇ ಸ್ಥಾನದಲ್ಲಿದೆ.
ಈ ಬಾರಿಯೂ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 93.31 ಬಾಲಕಿಯರು ಪಾಸಾಗಿದ್ದು, ಶೇ 90.14 ಬಾಲಕರು ತೇರ್ಗಡೆ ಹೊಂದಿದ್ದಾರೆ.
ಈ ವರ್ಷದಲ್ಲಿ ಒಟ್ಟು 18,85,885 ವಿದ್ಯಾರ್ಥಿಗಳು ದೇಶಾದ್ಯಂತ ವಿವಿಧ ವಲಯಗಳಲ್ಲಿ CBSE ಪರೀಕ್ಷೆ ಬರೆದಿದ್ದರು. ಈ ಪೈಕಿ 17,12,131 ಅಂದರೆ ಶೇ 91.56 ವಿದ್ಯಾರ್ಥಿಗಳು ಯಶಸ್ಸು ಕಂಡಿದ್ದಾರೆ.

