ಭಾರತದ 363 ಸಂಸದರು – ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್: ಎಡಿಆರ್
ಭಾರತದ 363 ಸಂಸದರು ಮತ್ತು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.
ತಮ್ಮ ವಿರುದ್ದ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 ರಲ್ಲಿ ಸೇರಿಸಲಾದ ಕ್ರಿಮಿನಲ್ ಅಪರಾಧಗಳ ಆರೋಪಗಳಿವೆ ಎಂದು ಕೇಂದ್ರ ಮತ್ತು ರಾಜ್ಯಗಳಲ 39 ಸಚಿವರು ಘೋಷಿಸಿದ್ದಾರೆ.
2019 ರಿಂದ 2021 ರವರೆಗೆ 542 ಲೋಕಸಭಾ ಸದಸ್ಯರು ಮತ್ತು 1,953 ಶಾಸಕರ ಅಫಿಡವಿಟ್ ಗಳನ್ನು ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ವಿಶ್ಲೇಷಿಸಿವೆ.
ಒಟ್ಟು 2,495 ಸಂಸತ್ ಸದಸ್ಯರು/ಶಾಸಕರಲ್ಲಿ 363 (ಶೇ.15) ಜನಪ್ರತಿನಿಧಿಗಳ ವಿರುದ್ಧ ಆರ್ಪಿ ಕಾಯ್ದೆ 1951 ರ ಸೆಕ್ಷನ್ 8 (1) (2) & (3) ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಅವರಲ್ಲಿ 296 ಶಾಸಕರು ಮತ್ತು 67 ಮಂದಿ ಸಂಸದರಾಗಿದ್ದಾರೆ.
ಪಕ್ಷಗಳ ಪೈಕಿ, ಬಿಜೆಪಿ ಅತಿ ಹೆಚ್ಚು 83 ಸಂಸದ/ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 47 ಮತ್ತು ಟಿಎಂಸಿ 25 ಸದಸ್ಯರನ್ನು ಹೊಂದಿದೆ ಎಂದು ಎಡಿಆರ್ ತಿಳಿಸಿದೆ.
24 ಹಾಲಿ ಲೋಕಸಭಾ ಸದಸ್ಯರ ವಿರುದ್ಧ ಒಟ್ಟು 43 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಅದೇ ರೀತಿಯಲ್ಲಿ 111 ಹಾಲಿ ಶಾಸಕರು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಅವರ ವಿರುದ್ಧ ಒಟ್ಟು 315 ಕ್ರಿಮಿನಲ್ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.
ಆರ್ಪಿ ಕಾಯ್ದೆ, 1951 ರ ಸೆಕ್ಷನ್ 8 ರ (1), (2) ಮತ್ತು (3) ರ ಅಡಿಯಲ್ಲಿ ಪಟ್ಟಿ ಮಾಡಲಾದ ಅಪರಾಧಗಳು ಗಂಭೀರ – ಘೋರ ಸ್ವರೂಪದ್ದಾಗಿವೆ. ಈ ದೋಷಿಗಳು ಎಂದು ಸಾಬೀತಾದರೆ, ಸಂಸದರು ಮತ್ತು ಶಾಸಕರು ಸಂಸತ್ತಿನ ಸದಸ್ಯರಾಗುವ ಹಾಗೂ ವಿಧಾನಸಭಾ ಸದಸ್ಯ ಅಥವಾ ರಾಜ್ಯದ ವಿಧಾನ ಪರಿಷತ್ ಸದಸ್ಯರಾಗುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ.
ಇದನ್ನೂ ಓದಿ: 20 ವರ್ಷಗಳ ದಾಖಲೆ: ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನ!

