ಮೈಸೂರು ಪಾಲಿಕೆ ಮೇಯರ್ ಎಲೆಕ್ಷನ್ : ಮೂರು ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ..!

ಮೈಸೂರು ಪಾಲಿಕೆ ಮೇಯರ್ ಎಲೆಕ್ಷನ್ ಗರಿಗೆದರಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಜೆಡಿಎಸ್- ಕಾಂಗ್ರೆಸ್ ಮೈತ್ರಿಯೊಂದಿಗೆ ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.

ಮೇಯರ್ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಅಶ್ವಿನಿ ಅನಂತು, ಬಿಜೆಪಿ ಅಭ್ಯರ್ಥಿಯಾಗಿ ಸುನಂದಾ ಪಾಲನೇತ್ರಾ, ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಂತಕುಮಾರಿ ಸ್ಪರ್ಧಿಸಿದ್ದಾರೆ. ಪ್ರಾದೇಶಿಕ ಆಯುಕ್ತ ಪ್ರಕಾಶ್ ಗೆ ಜೆಸಿಎಸ್ ಅಭುರ್ಥಿ ಅಶ್ವಿನಿ ಅನಂತು ನಾಮಪತ್ರ ಸಲ್ಲಿಕೆ ಮಾಡಿದರು. ಈ ಮೂವರಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎನ್ನುವ ಕುತೂಹಲಕ್ಕೆ ನಾಳೆ (ಆ.25) ರಂದು ತೆರೆ ಬೀಳಲಿದೆ.

ಒಟ್ಟು 65 ಪಾಲಿಕೆ ಸದಸ್ಯರ ಪೈಕಿ ಒಬ್ಬರ ಸದಸ್ಯತ್ವ ರದ್ದಾಗಿರುವುದರಿಂದ 64 ಸದಸ್ಯರು ಪ್ರಸ್ತುತ ಇದ್ದು, 72 ಜನ ಮತ ಚಲಾಯಿಸಲಿದ್ದಾರೆ. ಆ ಪೈಕಿ ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿ 8 ಮತ ಇರಲಿದೆ. ಬಿಜೆಪಿ ಸದಸ್ಯರು 22, ಸಂಸದ 1, ಶಾಸಕರ ಸಂಖ್ಯೆ 2,  ಕಾಂಗ್ರೆಸ್ ಸದಸ್ಯರು 19, ಶಾಸಕರ ಸಂಖ್ಯೆ 1, ಜೆಡಿಎಸ್​ ಸದಸ್ಯರು 17, ಶಾಸಕ 1, ಎಂಎಲ್‌ಸಿ 3, ಪಕ್ಷೇತರ ಸದಸ್ಯರು 5, ಬಿಎಸ್‌ಪಿ ಸದಸ್ಯ 1. ಇನ್ನು ಈಗಾಗಲೇ ಇಬ್ಬರು ಪಕ್ಷೇತರರು ಜೆಡಿಎಸ್ ಸೇರ್ಪಡೆಗೊಂಡಿದ್ದು, ಒಬ್ಬ ಪಕ್ಷೇತರ ಸದಸ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ ಅಧಿಕಾರ ಪಡೆದುಕೊಳ್ಳಲಾಗಿತ್ತು. ಈ ಬಾರಿ ಪೈಪೋಟಿ ಜೋರಾಗಿದ್ದು ಯಾರಿಗೆ ಸ್ಥಾನ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ. ಈ ನಡುವೆ ಬಿಜೆಪಿ ಕೂಡ ಪಟ್ಟಕ್ಕೇರಲು ಹವಣಿಸುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights