‘ಸಿಡಿ ಫ್ಯಾಕ್ಟರಿ’ ವಿಜಯೇಂದ್ರ ಅವರ ರಾಜೀನಾಮೆ ಯಾವಾಗ ಪಡೆಯುತ್ತೀರಿ? ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ!
ಸಚಿವ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್-ಬಿಜೆಪಿ ನಡೆವೆ ವಾಕ್ಸಮರ ನಡೆಯುತ್ತಲೇ ಇದೆ. ಈ ನಡುವೆ ಈ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರು ಕೇಳಿಬರುತ್ತಿರುದೆ. ಹೀಗಾಗಿ ಡಿಕೆಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹೇಳಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಸಿಡಿ ಫ್ಯಾಕ್ಟರಿ ಹೊಂದಿರುವ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರಿಂದ ಯಾವಾಗ ರಾಜೀನಾಮೆ ಪಡೆಯುತ್ತೀರಿ ಎಂದು ಪ್ರಶ್ನಿಸಿದೆ.
ಜಾರಕಿಹೊಳಿ ಅವರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಪೋಷಕರು ಇದಕ್ಕೆಲ್ಲಾ ಕಾರಣ ಡಿಕೆ ಶಿವಕುಮಾರ್, ಅವರಿಂದ ತಮ್ಮ ಮಗಳಿಗೆ ಬೆದರಿಕೆ ಇದೆ ಎಂದು ಆರೋಪಿಸಿದ್ದರು. ಇದಾದ ನಂತರ, ಇಡೀ ಸಿಡಿ ಪ್ರಕರಣದಲ್ಲಿ ಡಿಕೆಶಿ ಅವರದ್ದೇ ಸಂಚು ಇದೆ ಎಂಬಂತೆ ಮಾಧ್ಯಮಗಳು ಸುದ್ದಿ ಹರಡುತ್ತಿವೆ.
ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರವಾಗಿ ಡಿ.ಕೆ. ಶಿವಕುಮಾರ್ ಅವರು ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.
“ಅತ್ಯಾಚಾರ ಆರೋಪಿ ತನ್ನ ರಕ್ಷಣಾತ್ಮಕ ಆಟಕ್ಕಾಗಿ ಯುವತಿ ಪೋಷಕರಿಗೆ ಬೆದರಿಕೆಯೊಡ್ಡಿ ಅವರ ಬಾಯಿಂದ ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಹೇಳಿಸಿದ ಮಾತ್ರಕ್ಕೆ ರಾಜೀನಾಮೆ ಕೇಳುವ ಬಿಜೆಪಿ, ನಿಮ್ಮದೇ ಪಕ್ಷದ ಶಾಸಕ (ಬಸನಗೌಡ ಪಾಟೀಲ್ ಯತ್ನಾಳ್) ನಿಮ್ಮದೇ ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಿಡಿ ಫ್ಯಾಕ್ಟರಿ ಬಗ್ಗೆ ನೇರವಾಗಿ ಆರೋಪಿಸಿದ್ದರು. ಅವರ ರಾಜೀನಾಮೆ ಯಾವಾಗ ಪಡೆಯುವಿರಿ’ ಎಂದು ಕಾಂಗ್ರೆಸ್ ಪ್ರಶ್ನಿಸಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಯಡಿಯೂರಪ್ಪಗೆ ಎದುರಾಯ್ತು ಸಂಕಷ್ಟ: ಸಿಎಂ ಬಿಎಸ್‌ವೈ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ!

