ಹಲ್ಲೆಗೊಳಗಾದರೂ ಮೊಬೈಲ್ ಕಳ್ಳನನ್ನು ಹಿಡಿದ 15 ವರ್ಷದ ಕುಮಾರಿ….
15 ವರ್ಷದ ಹುಡುಗಿ ತಾನು ಗಾಯಗೊಂಡರೂ ಮೊಬೈಲ್ ಕಳ್ಳರೊಂದಿಗೆ ಫೈಟ್ ಮಾಡಿ ಓರ್ವ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾದ ಘಟನೆ ಪಂಜಾಬ್ನಲ್ಲಿ ನಡೆದಿದೆ.
15 ವರ್ಷದ ಕುಸುಮ ಕುಮಾರಿ ಅವರು ಟ್ಯೂಷನ್ನಿಂದ ಮನೆಗೆ ಮರಳುತ್ತಿದ್ದಾಗ ಸೋಮವಾರ ಜಲಂಧರ್-ಕಪುರ್ಥಾಲಾ ರಸ್ತೆ ಬಳಿ ಘಟನೆ ಸಂಭವಿಸಿದೆ. ಮೋಟಾರು ಸೈಕಲ್ ಮೇಲೆ ಬಂದ ಇಬ್ಬರು ಕಳ್ಳರು ಮೊಬೈಲ್ ಕದಿಯಲು ಯತ್ನಿಸಿದ್ದಾರೆ. ತಮ್ಮ ಪ್ರಯತ್ನ ಸಾಧ್ಯವಾಗದೇ ಇದ್ದಾಗ ಕುಸುಮ ಮೇಲೆ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಾಯಗೊಂಡ ಕುಸುಮ ತನ್ನ ಮೊಬೈಲ್ ನ್ನು ರಕ್ಷಿಸಿ ಜೊತೆಗೆ ಓರ್ವ ಕಳ್ಳನನ್ನು ಬೈಕ್ ನಿಂದ ಕೆಳಗೆ ಎಳೆದಿದ್ದಾಳೆ. ಇದು ಪಂಜಾಬ್ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.
ಸವಾರಿ ಮಾಡುತ್ತಿದ್ದ ವ್ಯಕ್ತಿ ಕುಸುಮ ಕೈಯನ್ನು ಹಿಡಿದು ಫೋನ್ ತೆಗೆದುಕೊಂಡನು. ಆಗ ಅದನ್ನು ಕುಸುಮ ವಿರೋಧಿಸಿ ಅವನ ಕೈಯನ್ನು ಹಿಡಿದಿದ್ದಳು. ಬೈಕ್ ಸವಾರ ಬೈಕ್ ನಲ್ಲಿ ಮುಂದಕ್ಕೆ ಹೋದರೂ ಕುಸುಮ ಬೈಕ್ನಲ್ಲಿ ಅವರನ್ನು ಹಿಂಬಾಲಿಸಿದ್ದಾಳೆ. ಸವಾರನ ಟೀ ಶರ್ಟ್ ಅನ್ನು ಹಿಡಿದುಕೊಂಡಿದ್ದಾಳೆ. ನಂತರ ಅವನು ಕುಸುಮ ಮೇಲೆ ಹಲ್ಲೆ ಮಾಡಿದ್ದಾನೆ. ಆದರೂ ಗಾಯಗೊಂಡ ಕುಸುಮ ಹಿಂದೆ ಸರಿಯಲಿಲ್ಲ. ಅವಳು ಬೈಕ್ನ ಹಿಂದೆ ಓಡಿ ತನ್ನ ಮೊಬೈಲ್ ಫೋನ್ ಕಸಿದುಕೊಂಡು ಕಳ್ಳನನ್ನು ಬೇಕ್ ನಿಂದ ಎಳೆದಳು.
ದಾರಿಹೋಕರು ಸ್ವಲ್ಪ ಸಮಯದ ನಂತರ ಕುಸುಮಳಿಗೆ ಸಹಾಯ ಮಾಡಿದ್ದಾರೆ. ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆಗೊಳಗಾದ ಕುಸುಮಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳನ್ನು ಅವಿನಾಶ್ ಕುಮಾರ್ (22) ಎಂದು ಗುರುತಿಸಲಾಗಿದ್ದು, ಅತನನ್ನು ಬಂಧಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಜತಿಂದರ್ ಶರ್ಮಾ ತಿಳಿಸಿದ್ದಾರೆ. ಬೈಕ್ ಸವಾರಿ ಮಾಡುತ್ತಿದ್ದ ಅವರ ಸಹಚರ ಪರಾರಿಯಾಗಿದ್ದಾನೆ. ಐಪಿಸಿಯ ಸೆಕ್ಷನ್ 389 ಬಿ ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

