ರಾಷ್ಟ್ರಪತಿ ಭೇಟಿಗೆ ಹೊರಟಿದ್ದ ಕಾಂಗ್ರೆಸ್‌ ನಾಯಕರು: ಪ್ರಿಯಾಂಕಾಗಾಂಧಿ ಸೇರಿ ಹಲವರ ಬಂಧನ-ಬಿಡುಗಡೆ!

ನಿಷೇಧಾಜ್ಞೆ ಉಲ್ಲಂಘನೆ ಆರೋಪದ ಮೇಲೆ ರಾಷ್ಟ್ರಪತಿ ಭವನಕ್ಕೆ ತೆರೆಳಲು ಹೊರಟಿದ್ದ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್​ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ ಘಟನೆ ನಡೆದಿದೆ.

ಕಳೆದ ಒಂದು ತಿಂಗಳಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಗಳಿಗೆ ಮಧ್ಯೆ ಪ್ರವೇಶಿಸಿ ಎಂದು ಕೋರಲು ಸುಮಾರು 2 ಕೋಟಿ ಸಹಿ ಸಂಗ್ರಹಿಸಿರುವ ಕಾಂಗ್ರೆಸ್‌ ರಾಷ್ಟ್ರಪತಿ ರಾಮ್‌ನಾಥ್‌ ಕೊವಿಂದ್‌ ಅವರನ್ನು ಭೇಟಿ ಮಾಡಲು ಹೊರಟಿತ್ತು. ಕಾಂಗ್ರೆಸ್‌ ಮುಖಂಡರಾದ ಪ್ರಿಯಾಂಕ ಗಾಂಧಿ, ಕೆ.ಸಿ.ವೇಣು ಗೋಪಾಲ್, ರಂದೀಪ್ ಸುರ್ಜೆವಾಲಾ ಮೊದಲಾದವರು ವಿಜಯ್​ ಚೌಕದಿಂದ ರಾಷ್ಟ್ರಪತಿ ಭವನಕ್ಕೆ ಹೊರಟಿದ್ದರು.

ಈ ವೇಳೆ, ಮೆರವಣಿಗೆಗೆ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್‌ ನಾಯಕರನ್ನು ತಡೆದ ಪೊಲೀಸರು, ರಾಷ್ಟ್ರಪತಿ ಭವನಕ್ಕೆ ಹೋಗಲು ಅವಕಾಶ ಕೊಡುವುದಿಲ್ಲ ಮೂವರು ನಾಯಕರಿಗೆ ಮಾತ್ರ ರಾಷ್ಟ್ರಪತಿ ಭೇಟಿಗೆ ಅವಕಾಶ ಕೊಡುವುದಾಗಿ ಪೊಲೀಸರು ಹೇಳಿದ್ದರು.

ಪೊಲೀಸರ ನಡೆಯಿಂದ ಕೆರೆಳಿದ ಕಾಂಗ್ರೆಸ್​ ನಾಯಕರು ರಾಷ್ಟ್ರಪತಿ ಭವನದೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪ್ರಿಯಾಂಕ ಗಾಂಧಿ, ಕೆ.ಸಿ.ವೇಣು ಗೋಪಾಲ್, ರಂದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವಾರು ಕೈಮುಖಂಡರನ್ನ ಪೊಲೀಸರು ವಶಕ್ಕೆ ಪಡೆದು ಮಂದಿರ್​ ಮಾರ್ಗ್​ ಠಾಣೆಗೆ ಕರೆದುಕೊಂಡು ಹೋದರು.

ನಂತರ ಹೊರ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ , ರೈತರನ್ನ ಸರ್ಕಾರ ಗೌರವದಿಂದ ಕಾಣಬೇಕು. ಆದರೆ ಕೇಂದ್ರ ಸರ್ಕಾರ ರೈತರ ವಿರುದ್ಧ ಕ್ರೂರವಾಗಿ ವರ್ತಿಸುತ್ತಿದ್ದು ದೇಶ ವಿರೋಧಿಗಳಂತೆ ಬಿಂಬಿಸುತ್ತಿದೆ. ಸ್ವಹಿತಾಸಕ್ತಿಯ ರಾಜಕೀಯ ಮಾಡುತ್ತಿದ್ದು ರೈತರು ಮತ್ತು ಜವಾನರಿಗೆ ಗೌರವ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಅನುಮತಿ ಪಡೆದುಕೊಂಡಿದ್ದ ರಾಹುಲ್​ ಗಾಂಧಿ, ಗುಲಾಂ ನಬಿ ಅಜಾದ್ , ಅಧಿರ್ ರಂಜನ್ ಚೌಧರಿ ರಾಮನಾಥ್ ಕೋವಿಂದ್ ಅವರನ್ನ ಭೇಟಿ ಮಾಡಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು.


ಇದನ್ನೂ ಓದಿ: ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights