Fact check: ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಯೋಗಿ ಆದಿತ್ಯನಾಥ್‌ಗೆ ಬೆಂಬಲ ನೀಡುತ್ತೇವೆ ಎಂದು ಹೇಳಿಲ್ಲ

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಉತ್ತರ ಪ್ರದೇಶದಲ್ಲಿ ತನ್ನದೇ ಆದ ಸೋಷಿಯಲ್ ಎಂಜಿನಿಯರಿಂಗ್ ನಡೆಸಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಈ ಬಾರಿ ಬಿಜೆಪಿಯ ತಂತ್ರವನ್ನು ಬಿಜೆಪಿಯ ವಿರುದ್ಧವೇ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಬಳಸುತ್ತಿದ್ದಾರೆ.  ಕಾಂಗ್ರೆಸ್  ಕೂಡ  ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ ಪ್ರಿಯಾಂಕಾ ಗಾಂಧಿ ಈ ಬಾರಿಯ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 40 ರಷ್ಟು ಟಿಕೆಟ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಮತ್ತೊಂದು ಮಹತ್ವದ ಘೋಷಣೆಯನ್ನು ಪ್ರಿಯಾಂಕಾ ಗಾಂಧಿ ಮಾಡಿದ್ದು, 2017ರಲ್ಲಿ ಉನ್ನಾವೋದಲ್ಲಿ ಬಿಜೆಪಿ ಶಾಸಕನಿಂದ ನಡೆದಿದ್ದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ಆಶಾ ಸಿಂಗ್‌ರವರಿಗೆ ಈ ಬಾರಿ ಕಾಂಗ್ರೆಸ್​ ಟಿಕೆಟ್ ನೀಡಿದೆ.

ಈ ಸಮಯದಲ್ಲಿ  ಫೇಸ್‌ಬುಕ್ ಪೋಸ್ಟ್‌ ಒಂದು ಹರಿದಾಡುತ್ತಿದೆ. ಉತ್ತರ ಪ್ರದೇಶದ ಹತ್ರಾಸ್ ಕುಟುಂಬವು ಕಾಂಗ್ರೆಸ್ ಟಿಕೆಟ್ ಅನ್ನು ನಿರಾಕರಿಸಿ ಯೋಗಿ ಅವರಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದಾರೆ ಎಂದು ವೈರಲ್ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. “ನಮಗೆ ಕಾಂಗ್ರೆಸ್ ಎಂ.ಎಲ್.ಎ. ಟಿಕೆಟ್ ಅವಶ್ಯಕತೆ ಇಲ್ಲ. ನಮಗೆ ಯೋಗಿ ಮೇಲೆ ಪೂರ್ತಿಯಾಗಿ ನಂಬಿಕೆ ಇದೆ ಎಂದು ಕಾಂಗ್ರೆಸ್ ಟಿಕೆಟ್ ಅನ್ನು ತಿರಸ್ಕರಿಸಿದ ಹತ್ರಾಸ್ ರೇಪ್ ಸಂತ್ರಸ್ತೆಯ ಕುಟುಂಬ”. ಎಂಬ ಹೇಳಿಕೆಯನ್ನು ಶೇರ್ ಮಾಡುತ್ತಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಪೋಸ್ಟ್

ಬಲಪಂಥಿಯ ಸಿದ್ದಾಂತದ ಪ್ರತಿಪಾದಕರ ಫೇಸ್‌ಬುಕ್ ಅಕೌಂಟ್‌ನಿಂದ ವೈರಲ್ ಆಗುತ್ತಿರುವ ಪೋಸ್ಟ್.

ಉತ್ತರ ಪ್ರದೇಶದಲ್ಲಿ ಕಳೆದ 5 ವರ್ಷದಲ್ಲಿ ಅಂದರೆ ಯೋಗಿ ಆದಿತ್ಯನಾಥ್ ಆಡಳಿತಾವಧಿಯಲ್ಲಿ ಸಾಕಷ್ಟು ಹಿಂಸಾಚಾರ ಮತ್ತು ಅತ್ಯಾಚಾರ ಪ್ರಕರಣಗಳು ನಡೆದಿವೆ. ಅದರಲ್ಲೂ ಮುಖ್ಯವಾಗಿ ದೇಶದ ಜನ ಮರುಗುವಂತೆ ಮಾಡಿದ್ದು ಉನ್ನಾವೊ ಮತ್ತು ಹತ್ರಾಸ್ ಅತ್ಯಾಚಾರ ಪ್ರಕರಣ. ಉನ್ನಾವೋದ ಸಂತ್ರಸ್ತೆಯ ತಾಯಿ  ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ ಹತ್ರಾಸ್ ಸಂತ್ರಸ್ತೆಯ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಘೋಷಿಸಿರುವುದರ ಬಗ್ಗೆ ಅಧಿಕೃತ ವರದಿಗಳು ಲಭ್ಯವಿಲ್ಲ.

ಉನ್ನಾವೋ ಮತ್ತು ಹತ್ರಾಸ್ ಘಟನೆಗಳು

ಅಂದಾಹಾಗೆ, ಉನ್ನಾವೋದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ತಾಯಿಯ ಹೆಸರು ಆಶಾ ಸಿಂಗ್​. ಇವರನ್ನು ಉನ್ನಾವೋದ ಬಂಗಾರ್ಮೌದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇವರ ಮಗಳನ್ನು ಅತ್ಯಾಚಾರಗೈದಿದ್ದ ಅಪರಾಧಿ, ಬಿಜೆಪಿಯಿಂದ ಉಚ್ಚಾಟಿತಗೊಂಡ ಕುಲ್​ದೀಪ್​ ಸಿಂಗ್​ 2017ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕ್ಷೇತ್ರ ಇದು. ಈತನನ್ನು ಉಚ್ಚಾಟನೆ ಮಾಡಿದ ಬೆನ್ನಲ್ಲೇ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಗಿತ್ತು. ಅದರಲ್ಲಿ ಕೂಡ ಬಿಜೆಪಿಯೇ ಗೆದ್ದಿತ್ತು.   ಆಶಾ ಸಿಂಗ್​ ಹೆಸರನ್ನು ಪ್ರಕಟಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಯಾರೇ ಚಿತ್ರಹಿಂಸೆಗೆ ಒಳಗಾಗಿದ್ದರೂ, ಅವರಿಗೆ ಕಾಂಗ್ರೆಸ್​ ನ್ಯಾಯ ಒದಗಿಸುತ್ತದೆ ಎಂಬ ಸಂದೇಶವನ್ನು ಕಾಂಗ್ರೆಸ್​ ತನ್ನ ಚುನಾವಣಾ ಅಭ್ಯರ್ಥಿಗಳ ಪಟ್ಟಿಯ ಮೂಲಕ ನೀಡಲು ಬಯಸುತ್ತದೆ ಎಂದು ಹೇಳಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷ ಹತ್ರಾಸ್ ಸಂತ್ರಸ್ತೆಯ ಕುಟುಂಬಕ್ಕೆ ಮನವಿ ಮಾಡಿದ ಯಾವುದೇ ವರದಿಗಳು ಸಿಕ್ಕಿಲ್ಲ. ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಮಾತನಾಡಿದ ಸಂತ್ರಸ್ತೆಯ ಸಹೋದರ “ನಮಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಆಹ್ವಾನ ಬಂದಿಲ್ಲ. ಬಂದರೂ ಸಹ ಸದ್ಯಕ್ಕೆ ನಮಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ನಮಗೆ ನ್ಯಾಯ ಸಿಗಬೇಕು ಅಷ್ಟೇ. ಉನ್ನಾವೋ ಪ್ರಕರಣದಲ್ಲಿ ವಿಚಾರಣೆ ಮುಗಿದು ಅಪರಾಧಿಗೆ ಶಿಕ್ಷೆ ಘೋಷಿಸಲಾಗಿದೆ. ಹಾಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ. ಆದರೆ ನಮ್ಮ ಹತ್ರಾಸ್ ಪ್ರಕರಣ ಇನ್ನು ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಚುನಾವಣೆ ಬಗ್ಗೆ ಯೋಚಿಸುವುದಿಲ್ಲ” ಎಂದು ತಿಳಿಸಿದ್ದಾರೆ. ಆದರೆ ಆ ಕುಟುಂಬ ಎಲ್ಲಿಯೂ ತಾನು ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಸೆಪ್ಟೆಂಬರ್ 14, 2020 ರಂದು, ನಾಲ್ಕು ಮೇಲ್ಜಾತಿಯ ಪುರುಷರು  ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿದೆ. ಎರಡು ವಾರಗಳ ಕಾಲ ತನ್ನ ಪ್ರಾಣಕ್ಕಾಗಿ ಹೋರಾಡಿದ ನಂತರ, ಯುವತಿ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಇದನ್ನು ಖಂಡಿಸಿ ದೇಶಾದ್ಯಂತ ಸಾವಿರಾರು ಹೋರಾಟಗಳು ದಾಖಲಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬರಬೇಕಿದೆ.

ಒಟ್ಟಾರೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿರುವಂತೆ ಹತ್ರಾಸ್ ಕುಟುಂಬವು ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಗೆ ಈ ಚುನಾವಣೆಯಲ್ಲಿ ಬೆಂಬಲಿಸುತ್ತಿದೆ ಆದ್ದರಿಂದ ಕಾಂಗ್ರೆಸ್ ಟಿಕೆಟ್ ಅನ್ನು ನಿರಾಕರಿಸಿದೆ ಎಂಬುದು ವಾಸ್ತವವಲ್ಲ.


ಇದನ್ನು ಓದಿರಿ: Fact check: ಪಾವಗಡ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ! ಎಷ್ಟು ನಿಜ?


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights