Fact check: ಪಾವಗಡ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ! ಎಷ್ಟು ನಿಜ?

ಜಗವೇ ಪ್ಲಾಸ್ಟಿಕ್ ಮಯ, ಬುದ್ದ ಒಂದು ಪ್ರಸಂಗದಲ್ಲಿ ಮಗುವನ್ನು ಕಳೆದುಕೊಂಡು ರೋದಿಸುವ ಒಬ್ಬ ತಾಯಿಗೆ ಸಾವಿಲ್ಲದ ಮನೆಯಲ್ಲಿ ಸಾಸಿವೆ ತಾ. ಎಂದಿದ್ದರಂತೆ ಈಗ ನಾವು ಅದನ್ನೆ ಸ್ವಲ್ಪ ಬದಲಾವಣೆ ಮಾಡಿ ಪ್ಲಾಸ್ಟಿಕ್ ಇಲ್ಲದ ಮನೆಯಿಂದ ಪದಾರ್ಥ ತಾ ಎನ್ನುವಂತಾಗಿದೆ. ಏನಿದು ಫ್ಯಾಕ್ಟ್ ಚೆಕ್‌ಗೂ ಪ್ಲಾಸ್ಟಿಕ್‌ಗೂ ಏನು ಸಂಬಂಧ..? ಯಾಕೆ ಪ್ಲಾಸ್ಟಿಕ್ ಬಗ್ಗೆ ಹೇಳ್ತಿದ್ದೀವಿ ಅನ್ಕೊಂಡ್ರಾ ಅದಕ್ಕೆ ಕಾರಣ ಇದೆ.

ಇತ್ತೀಚಿನ ಕೆಲ ವರ್ಷಗಳಿಂದ ಪ್ಲಾಸ್ಟಿಕ್ ಅಕ್ಕಿ ಎಂಬುದರ ಬಗ್ಗೆ ಸಾಕಷ್ಟು ವಿಡಿಯೋಗಳು, ಸುದ್ದಿಗಳು ಪತ್ರಿಕೆಯಲ್ಲಿ ಟಿವಿಗಳಲ್ಲಿ ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದ್ದನ್ನು ಕಂಡಿದ್ದೇವೆ. ಈಗ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆಯಾಗುತ್ತಿದೆ ಎಂಬ ಆರೋಪಗಳು ಮತ್ತೆ ಕೇಳಿಬರುತ್ತಿವೆ. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಮಲ್ಲಮ್ಮನಹಳ್ಳಿ ಎಂಬ ಗ್ರಾಮದ ಭಾಗ್ಯಮ್ಮ ಎಂಬುವವರ ಮನೆಯಲ್ಲಿ ಈ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿವೆ ಎಂದು ಪ್ರಜಾ ಪ್ರಗತಿ ಎಂಬ ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು ಹೇಗೆ?

ಪಾವಗಡ ತಾಲ್ಲೂಕಿನ ಸಾಸಲಕುಂಟೆಯ ನ್ಯಾಯಬೆಲೆ ಅಂಗಡಿಯಲ್ಲಿ, ಮಲ್ಲಮ್ಮನ ಹಳ್ಳಿ ಎಂಬ  ಗ್ರಾಮದ ಭಾಗ್ಯಮ್ಮ ಎಂಬುವವರು ಪಡಿತರ ಅಕ್ಕಿಯನ್ನು ತಂದಿದ್ದು, ಅಕ್ಕಿಯನ್ನು ಹಸನು ಮಾಡಲು ಮುಂದಾದಾಗ ಅಕ್ಕಿಯ ಬಣ್ಣ ಹಾಗೂ ಅದರ ಗಾತ್ರವನ್ನು ನೋಡಿ, ಅಕ್ಕಿನ್ನು ನೀರಿಗೆ ಹಾಕಿದ್ದಾರೆ ಆಗ ಅಕ್ಕಿಯಲ್ಲಿ ಯಾವ ಬದಲಾವಣೆ ಕಾಣದ ಹಿನ್ನಲೆಯಲ್ಲಿ ಅದೇ ಗ್ರಾಮದ ಇತರರಿಗೆ ಅದನ್ನು ತೋರಿಸಿದಾಗ ಅದು ಪ್ಲಾಸ್ಟಿಕ್ ಅಕ್ಕಿ ಎಂದು ಹೇಳಿದ್ದಾರೆ.

ಸಾಸಲಕುಂಟೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಗೆ 645 ಪಡಿತರ ಗ್ರಾಹಕರಿದ್ದು ಸಾಸಲಕುಂಟೆ ಹಾಗೂ ಮಲ್ಲಮ್ಮನಹಳ್ಳಿ ಈ ಎರಡೂ ಗ್ರಾಮಗಳಿಗೆ ಸಾಸಲಕುಂಟೆ  ಗ್ರಾಮದಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಪಾವಗಡ ಪಟ್ಟಣದ ಶಿರಾ ರಸ್ತೆಯಲ್ಲಿರುವ ಪಡಿತರ ಅಕ್ಕಿ ಪೂರೈಕೆ ಮಾಡುವ ಗೋದಾಮಿನಿಂದ  225 ಕ್ವಿಂಟಾಲ್  ಅಕ್ಕಿಯನ್ನು 50 ಕೆಜಿಯಂತೆ 450 ಬ್ಯಾಗ್‌ಗಳಲ್ಲಿ ಬಂದಿದ್ದ ಅಕ್ಕಿಯನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. ಅದರಲ್ಲಿ ಬೆರಕೆ ಆಗಿರುವ ಪ್ಲಾಸ್ಟಿಕ್ ಅಕ್ಕಿ ಗೋದಾಮಿನಲ್ಲೆ ಬೆರಕೆಯಾಯಿತೋ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಬೆರಕೆಯಾಯಿತೋ ಎಂಬುದು ತನಿಖೆ ನಂತರ ಮಾತ್ರ ಪ್ಲಾಸ್ಟಿಕ್ ಅಕ್ಕಿ ಮಿಶ್ರಣದ ಜಾಲ ಬಯಲಿಗೆ ಬರಲಿದೆ ಎಂದು ಪ್ರಜಾ ಪ್ರಗತಿ ವರದಿ ಮಾಡಿದೆ.

ಪ್ರಜಾ ಪ್ರಗತಿ ಪತ್ರಿಕೆಲ್ಲಿ ಬಂದ ಪ್ಲಾಸ್ಟಿಕ್ ಅಕ್ಕಿ ಸುದ್ದಿಗೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿಯ ಪಡಿತರ ವಿತರಕರಾದ ಗೋವಿಂದ ರೆಡ್ಡಿ ಎಂಬುವವರನ್ನು Ensuddi.com ನಿಂದ ಸಂಪರ್ಕಿಸಿದೆವು. ಘಟನೆಗೆ ಸಂಬಂಧಿಸಿದಂತೆ ಪ್ಲಾಸ್ಟಿಕ್ ಅಕ್ಕಿ ಹೇಗೆ ಬಂತು ಎಂದು ನಮಗೂ ತಿಳಿದಿಲ್ಲ, ಗೋದಾಮಿನಿಂದ ನೇರವಾಗಿ ಇಲ್ಲಿಗೆ ಬರುತ್ತದೆ ನಂತರ ಅದನ್ನು ಗ್ರಾಹಕರಿಗೆ ವಿತರಣೆ ಮಾಡುತ್ತೇವೆ, ಭಾಗ್ಯಮ್ಮ ಅವರು ಹೊರತುಪಡಿಸಿ ಬೇರೆ ಯಾರಿಂದಲೂ ಆ ರೀತಿ  ದೂರುಗಳು ನಮಗೆ ಬಂದಿಲ್ಲ. ಭಾಗ್ಯಮ್ಮ ಎಂಬುವವರ ಅಕ್ಕಿಯಲ್ಲಿ ಮಾತ್ರ ಪ್ಲಾಸ್ಟಿಕ್  ಕಂಡು ಬಂದಿದೆ, ಗೋದಾಮಿನಲ್ಲಿ ಅಕ್ಕಿಯನ್ನು ಚೀಲ ಮಾಡುವಾಗ ಈ ರೀತಿ ಅಂಶಗಳು ಬಂದಿರಬಹುದು ನಮ್ಮಲ್ಲಿ ಯಾವುದೇ ತಪ್ಪುಗಳು ಆಗಿಲ್ಲ, ಹಾಗಾಗಿ ನೀವು ಗೋದಾಮಿನ ಉಸ್ತವಾರಿಯನ್ನು ಸಂಪರ್ಕಿಸಿ ಎಂದರು.

ಗೋವಿಂದ ರೆಡ್ಡಿಯವರು ಮಾತನಾಡುತ್ತ ಸರ್ಕಾರ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿಯನ್ನು ನೀಡುತ್ತಿದೆ. ಅದನ್ನು ನಾವು ವಿತರಣೆ ಮಾಡುತ್ತಿದ್ದೇವೆ, ಅದನ್ನು ಬಿಟ್ಟು ಒಂದು ಕೆಜಿ ಪ್ಲಾಸ್ಟಿಕ್ ಅಕ್ಕಿಯನ್ನೊ, ಮತ್ತೆ ಏನನ್ನೋ ಉತ್ಪಾದಿಸಬೇಕೆಂದರೆ ಒಂದು ಕೆಜಿ ಪ್ಲಾಸ್ಟಿಕ್ ಅಕ್ಕಿಗೆ ಸುಮಾರು 100ರೂ ಮೇಲೆ ಖರ್ಚಾಗುತ್ತದೆ ಹಾಗಿದ್ದಾಗ ಇಂತಾದನ್ನೆಲ್ಲ ಮಾಡಲು ಸಾದ್ಯವಾ ಎಂಬ ಪ್ರಶ್ನೆ ಮಾಡುತ್ತಾರೆ.

 

ಈ ಹಿಂದೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಅಕ್ಕಿಯನ್ನು ಬೆರೆಸುತ್ತಿರುವ ಜಾಲ ಎಂಬ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಅದರ ಕುರಿತಾಗಿಯೂ ಫ್ಯಾಕ್ಟ್ ಚೆಕ್ ಮೂಲಕ ಸತ್ಯಾಸತ್ಯತೆಗಳನ್ನು ಬಹಿರಂಗ ಪಡಿಸಲಾಗಿತ್ತು.

ಅಕ್ಕಿ ಗಿರಣಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆ ಮಾಡಲಾಗುತ್ತಿರುವ ದೃಶ್ಯಗಳು ಎಂದು ಪ್ರತಿಪಾದಿಸಿ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತು. ಪ್ಲಾಸ್ಟಿಕ್ ಹಾಳೆಗಳನ್ನು ಯಂತ್ರಗಳ ಮೂಲಕ ಧಾನ್ಯಗಳ ಆಕಾರದಲ್ಲಿ ಸಣ್ಣ ಪ್ಲಾಸ್ಟಿಕ್ ಉಂಡೆಗಳಾಗಿ ಪರಿವರ್ತಿಸುವುದನ್ನು ಈ ವೀಡಿಯೊದಲ್ಲಿ ಕಾಣುತ್ತದೆ. ಪೋಸ್ಟ್‌ನಲ್ಲಿ ನೋಡಿ.

ಮೂಲಗಳ ಪ್ರಕಾರ, ಹಲವಾರು ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳು ಪ್ಲಾಸ್ಟಿಕ್ ಪೆಲೆಟೈಜರ್ ಯಂತ್ರಗಳನ್ನು ಬಳಸಿಕೊಂಡು ಈ ಮರು-ಬಳಕೆಯ ಪ್ಲಾಸ್ಟಿಕ್ ಉಂಡೆಗಳನ್ನು ಉತ್ಪಾದಿಸುತ್ತವೆ. ಈ ಅರೆ-ಸಿದ್ಧಪಡಿಸಿದ ಕಚ್ಚಾ ಪ್ಲಾಸ್ಟಿಕ್ ಕಣಗಳನ್ನು ಸಾಮಾನ್ಯವಾಗಿ ಸಂಗ್ರಹಣೆ ಮತ್ತು ಸಾಗಣೆಯ ಸಮಯದಲ್ಲಿ ವಸ್ತುಗಳನ್ನು ಒಡೆಯದೇ ಇರಲು ಅಥವಾ ಮುರಿಯದೇ ಇರಲು ಕುಶನ್ ಮಾಡಲು ಬಳಸಲಾಗುತ್ತದೆ. ಪ್ಲಾಸ್ಟಿಕ್ ಉತ್ಪಾದನಾ ಕಂಪನಿಯಲ್ಲಿ ಪ್ಲಾಸ್ಟಿಕ್ ಕಣಗಳ ಉತ್ಪಾದನೆ ಮಾಡುತ್ತಿರುವ ಇದೇ ರೀತಿಯ ವೀಡಿಯೊವನ್ನು ಇಲ್ಲಿ ನೋಡಬಹುದು.

2016 ರಲ್ಲಿ ನೈಜೀರಿಯಾ ಕಸ್ಟಮ್ಸ್ ಅಧಿಕಾರಿಗಳು 25 ಕೆಜಿಯ 102 ಅಕ್ಕಿ ಚೀಲಗಳನ್ನು “ಪ್ಲಾಸ್ಟಿಕ್ ಅಕ್ಕಿ” ತುಂಬಿದ್ದಾರೆ ಎಂದು ಆರೋಪಿಸಿ ವಶಪಡಿಸಿಕೊಂಡಿದ್ದರು. ನಂತರ, ನೈಜೀರಿಯಾ ಸರ್ಕಾರವು ವಶಪಡಿಸಿಕೊಂಡ ಅಕ್ಕಿ ಚೀಲಗಳಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಹೊಂದಿಲ್ಲ ಎಂದು ಅಧಿಕೃತವಾಗಿ ಘೋಷಿಸಿತು. ಹಲವಾರು ಸುದ್ದಿ ವೆಬ್‌ಸೈಟ್‌ಗಳು ‘ಪ್ಲಾಸ್ಟಿಕ್ ಅಕ್ಕಿ’ ಪರಿಕಲ್ಪನೆಯು ಸುಳ್ಳು ಎಂದು ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಪ್ಲಾಸ್ಟಿಕ್ ಕಣಗಳ ಉತ್ಪಾದನಾ ಪ್ರಕ್ರಿಯೆಯನ್ನು ತೋರಿಸುತ್ತದೆಯೇ ಹೊರತು ಪ್ಲಾಸ್ಟಿಕ್ ಅಕ್ಕಿ ಅಲ್ಲ ಎಂದು ತೀರ್ಮಾನಿಸಬಹುದು

ಒಟ್ಟಾರೆ ಹೇಳುವುದಾದರೆ ಪಡಿತರ ಅಥವಾ ಅಂಗಡಿಯಲ್ಲಿ ಕೊಂಡು ತರುವ ಯಾವ ಅಕ್ಕಿಯಲ್ಲೂ ಪ್ಲಾಸ್ಟಿಕ್ ಅಕ್ಕಿಯ ಮಿಶ್ರಣವನ್ನು ಮಾಡಿರುವುದಿಲ್ಲ. ಯಾಕೆಂದರೆ ಒಂದು ಕೆಜೆ ಅಕ್ಕಿ (ಭತ್ತವನ್ನು ಅಕ್ಕಿಯಾಗಿ  ಪರಿವರ್ತಿಸುವ ಹಂತ) ಉತ್ಪಾದನೆ ವೆಚ್ಚಕೂ, ಒಂದು ಕೆಜಿ ಪ್ಲಾಸ್ಟಿಕ್ ಅಕ್ಕಿಯನ್ನು ಉತ್ಪಾದಿಸುವ ವೆಚ್ಚಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅಷ್ಟೊಂದು ಖರ್ಚು ಮಾಡಿ ಪ್ಲಾಸ್ಟಿಕ್ ಅಕ್ಕಿಯನ್ನು ಉತ್ಪಾದಿಸುವುದರಿಂದ ಅವರಿಗೆ ಲಾಭವೇನು ಇಲ್ಲ. ಹಾಗಾಗಿ ಪ್ಲಾಸ್ಟಿಕ್ ಅಕ್ಕಿ ಎಂಬ ಸುದ್ದಿಗಳು ಯಾವಾಗಲೂ ಸುಳ್ಳಾಗಿರುತ್ತವೆ ಹಾಗೊಂದು ವೇಳೆ ಅದರ ಜಾಲ ಇದೆ ಎಂದಾದರೆ ಇಷ್ಟರಲ್ಲಿ ಆಹಾರ ಇಲಾಖಾ ಅಧಿಕಾರಿಗಳು ದಾಳಿ ಮಾಡಿ ಅದನ್ನು ವಶಪಡಿಸಿಕೊಂಡ ಸುದ್ದಿಗಳು ಬರಬೇಕಿತ್ತು. ಆದರೆ ಅಂತಹ ದಾಳಿ ನಡೆದ ಯಾವ ಉದಾಹರಣೆಗಳೂ ಇಲ್ಲಿಯವರೆಗೆ ಕಂಡುಬಂದಿಲ್ಲ, ಆದ್ದರಿಂದ ಈ ರೀತಿ ಸುದ್ದಿ ಮಾಡುವಾಗ ಎಚ್ಚರಿಕೆ ಇರಬೇಕೆಂಬುದು ನಮ್ಮ ಫ್ಯಾಕ್ಟ್ ಚೆಕ್ ನ ಆಶಯ.


ಇದನ್ನು ಓದಿರಿ: fact check: ಚೈನಾ ಗಡಿಯಲ್ಲಿ ಭಾರತೀಯ ಸೇನೆಯು ಸಿಖ್ ಧ್ವಜ ಹಾರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights