Fact check: ಮುಂಬೈ ಅವಘಡದ ವೈರಲ್ ವಿಡಿಯೊದ ವಾಸ್ತವವೇನು?

ಜನವರಿ 22 ರ ಶನಿವಾರ ಬೆಳಿಗ್ಗೆ ಮಧ್ಯ ಮುಂಬೈನ ತಾರ್ಡಿಯೊ ಪ್ರದೇಶದ ವಸತಿ ಕಟ್ಟಡದ 18 ನೇ ಮಹಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಈ ಅಗ್ನಿ ಅವಘಡದಲ್ಲಿ ಕನಿಷ್ಠ 6 ಜನರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು. ತಾರ್ಡಿಯೊದಲ್ಲಿ ನಡೆದ ಈ ದುರಂತದ ಸ್ಥಳದಿಂದ ವ್ಯಕ್ತಿಯೊಬ್ಬರು ಬಹುಮಹಡಿ ಕಟ್ಟಡದಿಂದ ಬೀಳುತ್ತಿದ್ದಾರೆ ಎಂಬ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವೈರಲ್ ಆದ ಹಲವು ಫೋಟೋಗಳನ್ನು ಮತ್ತು ಪೋಸ್ಟ್‌ಗಳನ್ನು ಇಲ್ಲಿ ನೋಡಬಹುದು.

ಅಗ್ನಿ ದುರಂತದ ಘಟನೆಯ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗುತ್ತಿದೆ, ವೈರಲ್ ವಿಡಿಯೊದಲ್ಲಿ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡಿದ್ದು ಆ ಬೆಂಕಿ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬರು ಬಹುಮಹಡಿ ಕಟ್ಟಡದಿಂದ ಕೆಳಗೆ  ಬೀಳುತ್ತಿರು ದೃಶ್ಯ ಸೆರೆಯಾಗಿದ್ದು ಅದನ್ನೆ ವೈರಲ್ ಮಾಡಲಾಗುತ್ತಿದೆ.

ವೈರಲ್ ವಿಡಿಯೋವನ್ನು (ನೆನ್ನೆ)  ಜನವರಿ 22 ರ ಶನಿವಾರ ಬೆಳಿಗ್ಗೆ ಮಧ್ಯ ಮುಂಬೈನ ತಾರ್ಡಿಯೊ ನಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದೆಯಾ ಅಥವಾ ಬೇರೆ ವೀಡಿಯೋವನ್ನು ಶೇರ್ ಮಾಡಲಾಗಿದೆಯಾ ಎಂದು ತಿಳಿಯಲು ಫ್ಯಾಕ್ಟ್ ಚೆಕ್ ಮಾಡಲಾಗಿದೆ.

ಗೂಗಲ್ ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ ತಿಳಿದ ಮಾಹಿತಿ ಏನೆಂದರೆ , ಅಕ್ಟೋಬರ್ 2021 ರಲ್ಲಿ ಬಹುತೇಕ ಮಾಧ್ಯಮಗಳು ಪ್ರಕಟಿಸಿದ ವರದಿಯಲ್ಲಿ ಅದೇ ವೀಡಿಯೊಗಳನ್ನು ಕಾಣಬಹುದಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ವೀಡಿಯೊ ಮುಂಬೈನ ಕರ್ರಿ ರಸ್ತೆಯಲ್ಲಿರುವ ಗಗನಚುಂಬಿ ಕಟ್ಟಡದಿಂದ ಬಂದಿದೆ. ಅಕ್ಟೋಬರ್ 22, 2021 ರಂದು, 61 ಅಂತಸ್ತಿನ ಒನ್ ಅವಿಘ್ನಾ ಪಾರ್ಕ್ ಟವರ್‌ನ 19 ನೇ ಮಹಡಿಯಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡಿತು.

ಲಭ್ವಯವಾಗಿರುವ ವರದಿಗಳ ಪ್ರಕಾರ, ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಅರುಣ್ ತಿವಾರಿ, 30 ವರ್ಷದ ಭದ್ರತಾ ಸಿಬ್ಬಂದಿ. ಬೆಂಕಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಅರುಣ್ 19 ನೇ ಮಹಡಿಯಲ್ಲಿರುವ ಫ್ಲಾಟ್‌ನ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಅವರ ಸಾವನ್ನು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದರು ಮತ್ತು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಘಟನೆಯಲ್ಲಿ ಬೇರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಗಳಾಗಿರುವುದನ್ನು ಇಲ್ಲಿ ಕಾಣಬಹುದು.

ಅಕ್ಟೋಬರ್ 22 ರಂದು ಹಿಂದೂಸ್ತಾನ್ ಟೈಮ್ಸ್ ಟ್ವೀಟ್ ಮಾಡಿದ ಘಟನೆಯ ಬಗ್ಗೆ ವೀಡಿಯೊ ವರದಿಯನ್ನು ಕೆಳಗೆ ನೋಡಬಹುದು.

ಮುಂಬೈನ ತಾರ್ಡಿಯೊದ ಕಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ 

ಮುಂಬೈನ ತಾರ್ಡಿಯೊ ಪ್ರದೇಶದ ನಾನಾ ಚೌಕ್‌ನಲ್ಲಿರುವ ಕಮಲಾ ಕಟ್ಟಡದಲ್ಲಿ ಜನವರಿ 22, 2022 ರಂದು ಬೆಳಿಗ್ಗೆ 7.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ವರದಿಗಳ ಪ್ರಕಾರ, ಘಟನೆಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 28 ಮಂದಿ ಗಾಯಗೊಂಡಿದ್ದಾರೆ. ಮುಂಬೈ ಅಗ್ನಿಶಾಮಕ ದಳ ಇದನ್ನು ಲೆವೆಲ್-3 (ಪ್ರಮುಖ) ಬೆಂಕಿ ಎಂದು ಗೊತ್ತುಪಡಿಸಿದೆ. ಕಟ್ಟಡದ ವಿದ್ಯುತ್ ಕೇಬಲ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡಿದೆ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ನಾಳದಿಂದ ಹೊಗೆಯು ಬಹು ಮಹಡಿಗಳಿಗೆ ಹರಡಿತು. ಕಟ್ಟಡದ ಅಗ್ನಿಶಾಮಕ ವ್ಯವಸ್ಥೆಯು ಕಾರ್ಯನಿರ್ವಹಿಸಲು ವಿಫಲವಾಗಿದೆ ಎಂದಿದ್ದಾರೆ.

“ಘಟನೆಯಿಂದ ರಕ್ಷಿಸಲ್ಪಟ್ಟ ಆರು ವೃದ್ಧರಿಗೆ ಆಮ್ಲಜನಕದ ಬೆಂಬಲದ ಅಗತ್ಯವಿತ್ತು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಧ್ಯ, ಬೆಂಕಿಯನ್ನು ನಿಯಂತ್ರಿಸಲಾಗಿದ್ದು ಹೊಗೆ ಇನ್ನೂ ಇದೆ. ಎಲ್ಲಾ ಜನರನ್ನು ರಕ್ಷಿಸಲಾಗಿದೆ” ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. 13 ಅಗ್ನಿಶಾಮಕ ಇಂಜಿನ್‌ಗಳು ಮತ್ತು ಏಳು ನೀರಿನ ಜೆಟ್ಟಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದವು ಎಂದು ಬೃಹತ್‌ ಮುಂಬೈ ಕಾರ್ಪೋರೇಷನ್‌‌ ಅಧಿಕಾರಿಯೊಬ್ಬರು ತಿಳಿಸಿದ್ದರು.

ಗಾಯಾಳುಗಳನ್ನು ಹತ್ತಿರದ ಮೂರು ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಐವರು ನಾಯರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ, ಒಬ್ಬರು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರು ಭಾಟಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನಡೆದ ಘಟನೆ ಬಗ್ಗೆ ವಿವರ ನೀಡಿದ್ದಾರೆ.

ಆದಾಗ್ಯೂ, ಎತ್ತರದ ಕಟ್ಟಡದಿಂದ ವ್ಯಕ್ತಿಯೊಬ್ಬರು ಬೀಳುವ ವೀಡಿಯೊ ಹಳೆಯದು ಮತ್ತು ಮುಂಬೈನ ತಾರ್ಡಿಯೊ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನು ಓದಿರಿ: Fact check: ಕೇಂದ್ರ ನಿರಾಕರಿಸಿದ ತಮಿಳುನಾಡು ಟ್ಯಾಬ್ಲೊದಲ್ಲಿ ಕರುಣಾನಿಧಿ ಅವರ ಪ್ರತಿಮೆ ಇದ್ದಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights