Fact check: ಕೇಂದ್ರ ನಿರಾಕರಿಸಿದ ತಮಿಳುನಾಡು ಟ್ಯಾಬ್ಲೊದಲ್ಲಿ ಕರುಣಾನಿಧಿ ಅವರ ಪ್ರತಿಮೆ ಇದ್ದಿದ್ದು ನಿಜವೆ?

ಗಣರಾಜ್ಯೋತ್ಸವ ಪರೇಡ್‌ಗಾಗಿ ನಿರ್ಮಿಸಿದ್ದ ತಮಿಳುನಾಡಿನ ಟ್ಯಾಬ್ಲೊವನ್ನು ಒಕ್ಕೂಟ ಸರ್ಕಾರದ ತಜ್ಞರ ಸಮಿತಿಯು ತಿರಸ್ಕರಿಸಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪ್ರತಿಮೆ ಕೂಡ  ಸ್ತಬ್ದಚಿತ್ರದಲ್ಲಿ ಸೇರಿಸಲಾಗಿತ್ತು ಹಾಗಾಗಿ ಅದನ್ನು ನಿರಾಕರಿಸಲಾಗಿದೆ ಎಂದು ಹೇಳುತ್ತಿರುವ ಸುದ್ದಿ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಗಣರಾಜ್ಯೋತ್ಸವದ ಪರೇಡ್-2022 ಗಾಗಿ ತಮಿಳುನಾಡು ಸರ್ಕಾರವು ತಮಿಳುನಾಡಿನ ಸ್ವಾತಂತ್ರ್ಯ ಚಳವಳಿ ಕುರಿತು ಸ್ತಬ್ದ ಚಿತ್ರವನ್ನು ನಿರ್ಮಿಸಿತ್ತು. ಅದರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಪ್ರತಿಮೆ ನಿಜವಾಗಿಯೂ ಇತ್ತಾ? ಅದೇ ಕಾರಣಕ್ಕೆ ತಜ್ಞರ ಸಮಿತಿಯು ತಮಿಳುನಾಡು ಸ್ತಬ್ದ ಚಿತ್ರವನ್ನು ತಿರಸ್ಕರಿಸಿತ್ತಾ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್:

 

ತಮಿಳುನಾಡು ಸರ್ಕಾರ ನಿರ್ಮಿಸಿದ  ಟ್ಯಾಬ್ಲೊದಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳು ಇವೆ. ವಿಒ ಚಿದಂಬರನಾರ್, ಸುಬ್ರಮಣ್ಯ ಭಾರತಿ, ರಾಣಿ ವೇಲು ನಾಚಿಯಾರ್, ಮರುತು ಸಹೋದರರು, ಪೂಲಿತೇವನ್, ವೀರಪಾಂಡಿಯ ಕಟ್ಟಬೊಮ್ಮನ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಎಲ್ಲಿಯೂ ಎಂ.ಕರುಣಾನಿಧಿ ಅವರ ಪ್ರತಿಮೆ ಇರಲಿಲ್ಲ. ಆದರೆ ಕಿಡಿಗೇಡಿಗಳು ಹಳದಿ ವಸ್ತ್ರದಲ್ಲಿದ್ದ ಹೋರಾಟಗಾರನ ತಲೆಯ ಮೇಲೆ ಕರುಣಾನಿಧಿಯವರು ಧರಿಸುತ್ತಿದ್ದ ಟೋಪಿ ಚಿತ್ರವನ್ನು ಸೇರಿಸಿ ಎಟಿಡ್ ಮಾಡಿದ್ದಾರೆ. ನಂತರ ಅದು ಕರುಣಾನಿಧಿಯ ಪ್ರತಿಮೆ ಎಂದು ಸುಳ್ಳು ಹಬ್ಬಿಸಿದ್ದಾರೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುತ್ತಿರುವ ಫೋಟೋ ಎಡಿಟೆಡ್ ಎಂದು ಖಚಿತವಾಗಿದೆ.

ತಮಿಳುನಾಡು ಸರ್ಕಾರದ ಸ್ತಬ್ದಚಿತ್ರ ನಿರಾಕರಿಸಿರುವ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌‌ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರ ಆಯೋಜಿಸಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೇಂದ್ರ ನಿರಾಕರಿಸಿದ ಟ್ಯಾಬ್ಲೊವನ್ನು ಪ್ರದರ್ಶಿಸಲಾಗುವುದು ಎಂದು ಚೆನ್ನೈನಲ್ಲಿ ಮಂಗಳವಾರ ಘೋಷಿಸಿದ್ದಾರೆ. ಇಷ್ಟೇ ಅಲ್ಲದೆ, ಈ ಟ್ಯಾಬ್ಲೊವನ್ನು ರಾಜ್ಯದ ಪ್ರಮುಖ ಸ್ಥಳಗಳಿಗೆ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ‘ಸ್ವಾತಂತ್ರ್ಯ ಹೋರಾಟದಲ್ಲಿ ತಮಿಳುನಾಡು’ ಎಂಬ ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನವನ್ನು ದೇಶದ ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿದೆ ಎಂದು ತಮಿಳುನಾಡು ಈ ಹಿಂದೆಯೆ ಘೊಷಿಸಿತ್ತು. ಸ್ವಾತಂತ್ರ್ಯ ಹೋರಾಟಕ್ಕೆ ತಮಿಳುನಾಡಿನ ಕೊಡುಗೆಯು 1857 ರ ದಂಗೆಗೆ ಮುಂಚಿತವಾಗಿತ್ತು ಎಂದು ಸೂಚಿಸಿರುವ ಸ್ಟಾಲಿನ್, “ರಾಜ್ಯದ ಸ್ವಾತಂತ್ಯ್ರ ಹೋರಾಟಗಾರರ ಪಾತ್ರವು ಇತರ ಯಾವುದೆ ರಾಜ್ಯಗಳಿಗಿಂತ ಕಡಿಮೆಯಲ್ಲ” ಎಂದು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ವಾಲಿನ್‌ ಅವರಿಗೆ ಪತ್ರ ಬರೆದ ಕೆಲವೆ ಗಂಟೆಗಳ ನಂತರ ಮುಖ್ಯಮಂತ್ರಿ ಈ ನಿರ್ಧಾರ ಮಾಡಿದ್ದಾರೆ. ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಟ್ಯಾಬ್ಲೊವನ್ನು ಆಯ್ಕೆ ಮಾಡಲಾಗಿದೆ ಎಂದು ರಾಜನಾಥ್‌ ಸಿಂಗ್ ಪತ್ರದಲ್ಲಿ ಹೇಳಿದ್ದರು. ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ರಾಜನಾಥ್‌ ಸಿಂಗ್ ಅವರ ಪತ್ರದಲ್ಲಿ ಅವರು ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಆಘಾತ ಮತ್ತು ವಿಷಾದ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ಪತ್ರಕರ್ತರೊಬ್ಬರು ಹಂಚಿಕೊಂಡ ಮೂಲ ಟ್ಯಾಬ್ಲೋ ಮಾದರಿಯ ಚಿತ್ರ

ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕರುಣಾನಿಧಿ ಎಂದು ಹೇಳಲಾಗುತ್ತಿರುವ ಫೋಟೋ ಎಡಿಟ್ ಮಾಡಲಾಗಿದ್ದು ತಮಿಳುನಾಡು ಸರ್ಕಾರ ನಿರ್ಮಿಸಿರುವ ಟ್ಯಾಬ್ಲೋದಲ್ಲಿ ಕರುಣಾನಿಧಿ ಇರುವ ಪ್ರತಿಮೆ ಇಲ್ಲ ಎಂದು ಖಾತ್ರಿಯಾಗಿದೆ. ಆದರೆ ಕೆಲವರು ಈ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.


ಇದನ್ನು ಓದಿರಿ: Fact check: ಕಾಶ್ಮೀರದಲ್ಲಿ ರಾಷ್ಟ್ರಗೀತೆ ಹಾಡುವಂತೆ ಸೈನಿಕರು ಯುವಕರಿಗೆ ಹಲ್ಲೆ ಮಾಡಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights