‘ರಾಜ್ಯದಲ್ಲಿನ ಆಕ್ಸಿಜನ್ ಕೊರತೆ ಸಾವುಗಳಿಗೆ ಸರ್ಕಾರವೇ ನೇರ ಹೊಣೆ’ ಡಿ.ಕೆ ಶಿವಕುಮಾರ್

‘ರಾಜ್ಯದ ವಿವಿಧ ಭಾಗಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸಂಭವಿಸುತ್ತಿರುವ ಸಾವುಗಳಿಗೆ ಸರ್ಕಾರವೇ ನೇರ ಹೊಣೆ. ಇದರಲ್ಲಿ ಅಧಿಕಾರಿಗಳನ್ನು ದೂರುವುದು ಸರಿಯಲ್ಲ. ಸರ್ಕಾರ ಆಕ್ಸಿಜನ್ ಪೂರೈಸದಿದ್ದರೆ ಅಧಿಕಾರಿಗಳು ಏನು ಮಾಡಲು ಸಾಧ್ಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ದುಸ್ಥಿತಿ ಕುರಿತು ಸೋಮವಾರ ಸಂಜೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:

‘ಈ ಸರ್ಕಾರ ಸತ್ತು ಹೋಗಿದೆ. ಅಷ್ಟೇ ಅಲ್ಲ ಜನಸಾಮಾನ್ಯರನ್ನು ಸಾಯಿಸುತ್ತಿದೆ. ಜನ ಹೇಗೆಲ್ಲ ಸಾಯುತ್ತಿದ್ದಾರೆ ಎಂಬುದನ್ನು ಮಾಧ್ಯಮಗಳು ತೋರಿಸುತ್ತಿವೆ. ನಮಗೆ ಅದನ್ನು ನೋಡಿ ನೋವು, ದುಗುಡ, ಪ್ರತಿ ಸಾವು ನಮ್ಮ ಕುಟುಂಬದಲ್ಲಿಯೇ ಆದಂತೆ ಭಾಸವಾಗುತ್ತಿದೆ. ಈ ನೋವು ತಾಳಲಾರದೇ, ಮುಖ್ಯಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ವಾಸ್ತವಾಂಶ ತಿಳಿಯಲು ಬಂದಿದ್ದೇವೆ.

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರುವುದನ್ನು ಮುಖ್ಯಕಾರ್ಯದರ್ಶಿ ಅವರು ಒಪ್ಪಿಕೊಂಡಿದ್ದು, ಈ ಸಮಸ್ಯೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಈಗಾಗಲೇ ಹಲವು ಮಂತ್ರಿಗಳು ಇದೇ ಮಾತು ಹೇಳಿದ್ದಾರೆ. ರಾಜ್ಯದಲ್ಲಿ 1750 ಟನ್ ಆಕ್ಸಿಜನ್ ಬೇಡಿಕೆ ಇದ್ದು, ಕೇಂದ್ರ ಸರ್ಕಾರ 850 ಟನ್ ಮಾತ್ರ ಪೂರೈಸುತ್ತಿದೆ. ಅಂದರೆ ಶೇ. 50 ರಷ್ಟು ಕೊರತೆ ಇದೆ. ಈ ಪ್ರಮಾಣ ಹೆಚ್ಚಿಸಲು ಇನ್ನೂ ಚರ್ಚೆ ನಡೆಯುತ್ತಿದೆ.

ಹೊಸದಾಗಿ ಬೆಡ್ ಸೇರಿಸಲು ಸರ್ಕಾರ ಮುಂದಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜಾಗ ಇದ್ದರೂ ಸರ್ಕಾರ ಮನಸ್ಸು ಮಾಡಿಲ್ಲ. ನಾನು 500 ಹಾಸಿಗೆ ಸಾಮರ್ಥ್ಯದ ನನ್ನ ಹಾಸ್ಟೆಲ್ ಅನ್ನು ಬಿಟ್ಟುಕೊಡುವ ಪ್ರಸ್ತಾಪವನ್ನಿಟ್ಟಿದ್ದರೂ, ನೋಡೋಣ ಎಂದು ಹೇಳಿದ್ದಾರೆ. ಅವರಿಂದ ಇದನ್ನು ಮಾಡಲು ಆಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೇ ಹಾಸಿಗೆ ಹೆಚ್ಚಿಸಿದರೆ ಆಕ್ಸಿಜನ್ ಪೂರೈಸಬೇಕಾಗುತ್ತದೆ ಅಂತಾ ಹಾಸಿಗೆ ಹೆಚ್ಚಿಸುತ್ತಿಲ್ಲ.

ಪಿಎಂ ಕೇರ್ ಮೂಲಕ ರಾಜ್ಯಕ್ಕೆ ಬಂದ ವೆಂಟಿಲೇಟರ್ ಗಳು ಇನ್ನೂ ಗೋಡೌನ್ ನಲ್ಲೇ ಇವೆ. 18 ವರ್ಷ ಮೇಲ್ಪಟ್ಟವರಿಗೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕೋವಿಡ್ ಚುಚ್ಚುಮದ್ದು ಕೊಟ್ಟಿದ್ದು ಬಿಟ್ಟರೆ ಬೇರೆಯವರಿಗೆ ಈವರೆಗೂ ನೀಡಿಲ್ಲ. ಈಗಾಗಲೇ ಮೊದಲ ಡೋಸ್ ಪಡೆದವರಿಗೇ, ಎರಡನೇ ಡೋಸ್ ಕೊಡಲು ಸಾಧ್ಯವಾಗಿಲ್ಲ. ನಮ್ಮ ಪಕ್ಷದ ಶಾಸಕರಿಗೆ ಎರಡನೇ ಡೋಸ್ ತೆಗೆದುಕೊಳ್ಳಲು ಆಗಿಲ್ಲ. ಜನಪ್ರತಿನಿಧಿಗಳಿಗೆ ತೆಗೆದುಕೊಳ್ಳಲು ಆಗಿಲ್ಲ ಎಂದರೆ, ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಮುಖ್ಯ ಕಾರ್ಯದರ್ಶಿಗಳನ್ನು ಕೇಳಿದ್ದೇವೆ.

ಸರ್ಕಾರ ಕೋವಿಡ್ ಚುಚ್ಚುಮದ್ದಿಗೆ ಆನ್ ಲೈನ್ ಮಾಡಿಕೊಳ್ಳಲಿ, ಅದರ ಜತೆಗೆ ಮನೆ, ಮನೆಗೂ ಹೋಗಿ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂದು ಕೇಳಿಕೊಂಡಿದ್ದೇವೆ. ನೀವು ಹೇಳುವುದು ಸರಿ ಇದೆ ಎಂದು ಮುಖ್ಯಕಾರ್ಯದರ್ಶಿಗಳು ತಿಳಿಸಿದ್ದಾರೆ. ಲಸಿಕೆ ಉಪಕೇಂದ್ರಗಳನ್ನು ಮತ್ತೆ ಆರಂಭಿಸಬೇಕು. ಪ್ರತಿ ಊರಿನಲ್ಲೂ ಲಸಿಕೆ ಶಿಬಿರ ಮಾಡಬೇಕು.

ಬಿಜೆಪಿ ಸಂಸದರೊಬ್ಬರು ರೆಮ್ಡಿಸಿವಿಯರ್ ತೆಗೆದುಕೊಂಡು ಹೋದ ವಿಚಾರ ಕೇಳಿದಾಗ ಮುಖ್ಯ ಕಾರ್ಯದರ್ಶಿ ಅವರು, ಸರ್ಕಾರದ್ದನ್ನೇ ತೆಗೆದುಕೊಂಡು ಹೋದರು ಎಂದು ಚಿಕ್ಕ ಮಕ್ಕಳಿಗೆ ಹೇಳಿದಂತೆ ಹೇಳುತ್ತಿದ್ದಾರೆ. ಅವರು ಹೇಳಿದ್ದನ್ನು ಕೇಳಲು ನಾವು ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ. ಸರ್ಕಾರದ ಲಸಿಕೆಯನ್ನು ಅವರು ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ? ನಮಗೂ ಸರ್ಕಾರದ ಲಸಿಕೆ ಕೊಡಿ, ನಾವೂ ತೆಗೆದುಕೊಂಡು ನಮ್ಮ ಕ್ಷೇತ್ರಗಳಿಗೆ ಹೋಗುತ್ತೇವೆ. ಅವರಿಗೆ ಯಾರ ಮೇಲೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಅದು ಸರಕಾರದ್ದು ಎಂದು ಒಪ್ಪಿಕೊಂಡರು. ಹಾಗಾದ್ರೆ ಸರ್ಕಾರದ್ದನ್ನು ಹೇಗೆ ತೆಗೆದುಕೊಂಡು ಹೋದರು, ಕಳ್ಳತನ ಆಯ್ತಾ? ಅದನ್ನು ಎಲ್ಲಿಗೆ ತೆಗೆದುಕೊಂಡು ಹೋದರು? ಹೇಗೆ ತೆಗೆದುಕೊಂಡು ಹೋದರು? ಇದು ಪಕ್ಷದ ರಾಜಕಾರಣಕ್ಕಾಗಿ ಸರ್ಕಾರ ಯಾವ ರೀತಿ ತಾರತಮ್ಯ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ.

ರೆಮ್ಡಿಸಿವಿಯರ್ ಕೊರತೆ ನೀಗಿಸುವ ಕೆಲಸ ಪ್ರಗತಿಯಲ್ಲಿದೆ. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ. ಸಣ್ಣ ಆಸ್ಪತ್ರೆಗಳು ಹಾಗೂ ಖಾಸಗಿಯವರಿಗೆ ನೀಡುತ್ತಿಲ್ಲ, ಇದನ್ನು ದಂಧೆಯಾಗಿ ಮಾಡಿಕೊಂಡಿದ್ದಾರೆ. ಅದನ್ನು ನಿಯಂತ್ರಿಸಬೇಕು. ಯಾರು ಕಾಳಸಂತೆಯಲ್ಲಿ ಮಾರುತ್ತಿದ್ದಾರೆ ಕ್ರಮಕೈಗೊಳ್ಳಿ ಎಂದು ಹೇಳಿದ್ದೇವೆ.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಸತ್ತಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ. ಆದರೆ 24 ಮಂದಿ ಸತ್ತಿಲ್ಲ, ಕೇವಲ 3 ಜನ ಸತ್ತಿದ್ದಾರೆ ಅಂತಾ ಮಂತ್ರಿಗಳು ಹೇಳುತ್ತಿದ್ದಾರೆ. 34 ಮಂದಿ ಸತ್ತಿದ್ದಾರೆ ಎಂದು ನಮ್ಮ ಶಾಸಕರು ಹೇಳುತ್ತಿದ್ದಾರೆ. ಇಲ್ಲಿ ಯಾರ ಮಾತನ್ನು ನಂಬಬೇಕು? ಮಾಧ್ಯಮಗಳನ್ನೋ, ಸಚಿವರನ್ನೋ?

ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ನಿರ್ಧರಿಸಿದ್ದೇವೆ. ಸರ್ಕಾರ ಅವರ ಕೊಲೆ ಮಾಡಿದೆ. ಕೂಡಲೇ ಅವರ ಕುಟುಂಬದವರಿಗೆ ಪರಿಹಾರ ಕೊಡಬೇಕು. ಮಾನವಹಕ್ಕು ಆಯೋಗಕ್ಕೆ ನಮ್ಮ ಕಾರ್ಯಾಧ್ಯಕ್ಷರು ದೂರು ನೀಡಿದ್ದಾರೆ.

ಎಲ್ಲರಿಗೂ ಹಾಸಿಗೆ, ಆಕ್ಸಿಜನ್ ಪೂರೈಸಬೇಕು. ಜನರಿಗೆ ಇದರ ಬಗ್ಗೆ ಭರವಸೆ ಸಿಗಬೇಕು ಎಂದು ಮುಖ್ಯಕಾರ್ಯದರ್ಶಿಗಳನ್ನು ಆಗ್ರಹಿಸಿದ್ದೇವೆ. ಈ ಸರ್ಕಾರ, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳ ಸುಳ್ಳು, ಪ್ರವಚನಗಳನ್ನು ಕೇಳುತ್ತಲೇ ಇದ್ದೇವೆ. ಹೀಗಾಗಿ ಅವರ ಮೇಲೆ ನಂಬಿಕೆ ಹೋಗಿ ಮುಖ್ಯಕಾರ್ಯದರ್ಶಿಗಳನ್ನು ಒತ್ತಾಯಿಸುತ್ತಿದ್ದೇವೆ. ಇದು ರಾಜ್ಯದ ಜನರು, ಸೋಂಕಿತರ ಪರವಾಗಿ ಸರ್ಕಾರಕ್ಕೆ ಮಾಡಿಕೊಳ್ಳುತ್ತಿರುವ ಕೊನೇ ಮನವಿ. ಈಗಲೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ನಾವು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ.

ಮುಖ್ಯಕಾರ್ಯದರ್ಶಿಗಳು ಅಸಹಾಯಕರಾಗಿದ್ದಾರೆ. ನಾವು ನಿಮಗೆ ಸಹಕಾರ ನೀಡುತ್ತೇವೆ ಎಂದು ಧೈರ್ಯ ತುಂಬಿದ್ದೇವೆ.

ನಮ್ಮ ಕಾರ್ಯಾಧ್ಯಕ್ಷರು ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಜಿಲ್ಲಾಮಂತ್ರಿಗಳಿಗೆ ಆಕ್ಸಿಜನ್ ಕೊರತೆ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆಕ್ಸಿಜನ್ ಪೂರೈಸದಿದ್ದರೆ ಜನ ಸಾಯುತ್ತಾರೆ ಎಂದಿದ್ದರು. ಆದರೂ ಕ್ರಮ ಕೈಗೊಂಡಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ಅವರಿಗೆ ಬಾಯಿ ಇರಲಿಲ್ಲ. ಅವರ ತಪ್ಪನ್ನು ಅಧಿಕಾರಿಗಳ ಮೇಲೆ ಹಾಕಿದ್ದಾರೆ. ನಾವು ಈ ವಿಚಾರದಲ್ಲಿ ಅಧಿಕಾರಿಗಳನ್ನು ದೂರುವುದಿಲ್ಲ. ಆಕ್ಸಿಜನ್ ಪೂರೈಕೆ ಸರ್ಕಾರದ ಹೊಣೆ.

ಇದು ಕೇವಲ ಚಾಮರಾಜನಗರ ಮಾತ್ರವಲ್ಲ, ಕೋಲಾರ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆ ಜನ ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ. ಇದಕ್ಕೆಲ್ಲ ಅಧಿಕಾರಿಗಳನ್ನು ಹೊಣೆ ಮಾಡಲು ಸಾಧ್ಯವಾ?’

ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು; ಡಿ.ಕೆ ಸುರೇಶ್

‘ಈ ದುರಂತಕ್ಕೆ ಆರೋಗ್ಯ ಸಚಿವರೇ ಹೊಣೆ ಹೊತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ಆಕ್ಸಿಜನ್ ಕೊಟ್ಟಿದ್ದರೆ ಸಾವು ಸಂಭವಿಸುತ್ತಿರಲಿಲ್ಲ. ಆಕ್ಸಿಜನ್ ನೀಡದೇ ತನಿಖೆ ಮಾಡುತ್ತೇವೆ ಎನ್ನುವುದು ಜನರ ಕಣ್ಣೊರೆಸುವ ತಂತ್ರ. ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲೂ ಇದೇ ಪರಿಸ್ಥಿತಿ ಇದೆ. ಈಗ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದು, ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಇದು ಸರ್ಕಾರದಲ್ಲಿ ಪೂರ್ವಸಿದ್ಧತೆ ಇಲ್ಲ ಎಂಬುದನ್ನು ತೋರಿಸುತ್ತಿದೆ. ಎರಡನೇ ಅಲೆ ನಿಯಂತ್ರಣಕ್ಕೆ ಬೇಕಾಗಿರುವುದು ಆಕ್ಸಿಜನ್ ಸೌಲಭ್ಯದ ಹಾಸಿಗೆ, ಔಷಧಿಗಳು. ಹಾಸಿಗೆ ಇದೆ ಎನ್ನುತ್ತಿದ್ದೀರಿ. ಅವರವರ ಮನೆಯ ಹಾಸಿಗೆ ಮೇಲೆ ಮಲಗಬಹುದಲ್ಲವೇ? ಆದರೆ ಜನರಿಗೆ ಬೇಕಾಗಿರುವುದು ಆಕ್ಸಿಜನ್. ನೆಗೆಟಿವ್ ವರದಿ ಬಂದಿರುವವರಿಗೂ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಈ ವಿಚಾರವನ್ನು ಮುಖ್ಯಕಾರ್ಯದರ್ಶಿಗಳೂ ಒಪ್ಪಿಕೊಂಡಿದ್ದಾರೆ. ಯುವಕರು ಸಾಯಲು ಆಕ್ಸಿಜನ್ ಕೊರತೆಯೇ ಕಾರಣ. ಈಗ ರಾಜ್ಯದಲ್ಲಿ ಆಕ್ಸಿಜನ್ ಸೌಲಭ್ಯವಿರುವ ಹಾಸಿಗೆಗಳ ಅಗತ್ಯವಿದೆ. ತುರ್ತು ಪರಿಸ್ಥಿತಿಯಲ್ಲಿ ಔಷಧ ಹಾಗೂ ಆಕ್ಸಿಜನ್ ಕೊಟ್ಟರೆ ಮಾತ್ರ ಜೀವ ಉಳಿಸಬಹುದೇ ಹೊರತು, ಬೇರೆ ಏನೇ ಮಾಡಿದರೂ ಸಾಧ್ಯವಿಲ್ಲ. ಕೇವಲ ಬೆಡ್ ಲೆಕ್ಕ ಕೊಡಲು ಹೋದರೆ ಹೆಣಗಳ ಲೆಕ್ಕ ಜಾಸ್ತಿಯಾಗುತ್ತದೆ. ಸರ್ಕಾರವೇ ಜನರ ಉಸಿರು ನಿಲ್ಲಿಸುವ ಕೆಲಸ ಮಾಡುತ್ತಿದೆ. ನಿಮಗೆ ಅವರನ್ನು ರಕ್ಷಿಸಲು ಆಗದಿದ್ದರೆ ಹೇಳಿಬಿಡಿ. ಅವರು ಎಲ್ಲೋ ಹೋಗಿ ಬದುಕಿಕೊಳ್ಳುತ್ತಾರೆ. ಆಸ್ತಿಯನ್ನೋ, ತಾಳಿಯನ್ನೋ ಮಾರಿ ತಮ್ಮ ಪ್ರಾಣ ಉಳಿಸಿಕೊಳ್ಳುತ್ತಾರೆ. ಆದರೆ ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ ಸುರೇಶ್ ಆಗ್ರಹಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights