FACT CHECK | ಮುಸ್ಲಿಂ ದ್ವೇಷದ ಮತ್ತೊಂದು ಪೋಸ್ಟ್ ಹಂಚಿಕೊಂಡ BJP
ಹೊಸಕೋಟೆಯ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಯನ್ನು ಕಾಂಗ್ರೆಸ್ ಸರ್ಕಾರ ಅಯ್ಕೆ ಮಾಡಿದೆ. ನಮ್ಮ ದೇವಸ್ಥಾನಗಳನ್ನು ಕಾಂಗ್ರೆಸ್ ಲೂಟಿ ಮಾಡಿದ ಬಳಿಕ ಈಗ ಎಲ್ಲಾ ದೇವಸ್ಥಾನಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೋಡುತ್ತಿದೆ ಎಂದು ಆರೋಪಿಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ BJPಯು ಆರೋಪಿಸಿದೆ.
ಪ್ರಸ್ತುತ, ಎಕ್ಸ್‌ನಿಂದ BJP ತನ್ನ ಪೋಸ್ಟ್ ಡಿಲಿಟ್ ಮಾಡಿದೆ
“ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಹಕ್ಕು ಕಿತ್ತು ಒಂದು ಸಮುದಾಯಕ್ಕೆ ಕೊಡುವ ರಾಹುಲ್ ಗಾಂಧಿಯ ಕನಸಿನ ಯೋಜನೆಯನ್ನು ಜಾರಿಗೊಳಿಸುವ ತವಕದಲ್ಲಿದೆ. ಇಂದು ಇದು ಕರ್ನಾಟಕದ ಒಂದು ದೇವಸ್ಥಾನವಾಗಿರಬಹುದು. ಆದರೆ, ನಾಳೆ ಭಾರತದ ಎಲ್ಲಾ ದೇವಸ್ಥಾನಗಳಲ್ಲಿ ಆಗುತ್ತದೆ. ಕಾಂಗ್ರೆಸ್ ಬಗ್ಗೆ ಎಚ್ಚರವಾಗಿರಿ.” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿತ್ತು, ಆದರೆ ಸರ್ಕಾರದ ಸಚಿವರೇ ಇದಕ್ಕೆ ಸ್ಪಷ್ಟನೆ ನೀಡಿದ್ದು ಬಿಜೆಪಿ ಹಂಚಿಕೊಂಡ ಮಾಹಿತಿ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ. ಹಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಏನು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
BJPಯ ಆರೋಪದ ಕುರಿತು ಮೇ 8, 2024ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಸಿಎಂ ತಿಳಿಸಿದಂತೆ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವಕ್ಕೆ ಸಮಿತಿ ರಚಿಸುವಾಗ ಅನ್ಯ ಧರ್ಮದ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳುವುದು ಬಹಳ ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಅದರಂತೆ ಈ ಬಾರಿಯೂ ಸರ್ಕಾರ ಮುಸ್ಲಿಂ ವ್ಯಕ್ತಿಯನ್ನು ಸದಸ್ಯನಾಗಿ ನೇಮಿಸಿದೆ.
ಗಮನಾರ್ಹವಾಗಿ, ಈ ಹಿಂದೆ (2021-22) ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗಲೂ ದೇವಸ್ಥಾನ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿಗಳಿಗೆ ಸ್ಥಾನ ನೀಡಲಾಗಿತ್ತು. 2020ರಲ್ಲಿ ಇಮ್ತಿಯಾಝ್ ಪಾಷಾ ಎಂಬವರನ್ನು ಸದಸ್ಯರನ್ನಾಗಿ ನೇಮಿಸಿತ್ತು. 2022ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಈ ಸಮಿತಿಗೆ ಅಪ್ಸರ್ ಎಂಬವರನ್ನು ಸದಸ್ಯರನ್ನಾಗಿ ಮಾಡಿತ್ತು. ಈ ಕುರಿತ ಸರ್ಕಾರದ ಆದೇಶ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
“ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನ ಸರ್ವಧರ್ಮಗಳನ್ನು ಸಮಭಾವದಿಂದ ಕಾಣುವ ಹಿಂದು ಧರ್ಮದ ಪರಂಪರೆಗೆ ಸಾಕ್ಷಿಯಾಗಿದೆ. ಅಲ್ಲಿನ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಎಲ್ಲ ಧರ್ಮಗಳ ಜನತೆ ಭಕ್ತಿ-ಗೌರವದಿಂದ ಭಾಗವಹಿಸುತ್ತಾರೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿಯವರು ಕೂಡ ಎಕ್ಸ್‌ನಲ್ಲಿ ದಾಖಲೆಗಳನ್ನು ಹಂಚಿಕೊಂಡಿದ್ದು, “ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರನ್ನು ನೇಮಕಗೊಳಿಸುವುದು ದೇಗುಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಆಡಳಿತಾವದಿಯಲ್ಲೂ ಮುಸ್ಲಿಂ ಸದಸ್ಯರನ್ನು ನೇಮಕ ಮಾಡಿರುವ ಕುರಿತು ಸಚಿವ ರಾಮಲಿಂಗರೆಡ್ಡಿಯವರು ದಾಖಲೆ ಒದಗಿಸುತ್ತಿದ್ದಂತೆ, BJPಯು ತನ್ನ ಎಕ್ಸ್ ಖಾತೆಯಲ್ಲಿ ಮಾಡಿದ ಟ್ವಿಟ್ ಡಿಲಿಟ್ ಮಾಡಿದೆ. ಆದ್ದರಿಂದ ಈ ರೂಢಿಯನ್ನು ಹಿಂದಿನಿಂದಲೂ ಅನುಸರಿಸುತ್ತಿದ್ದು ಅನಗತ್ಯ ಗೊಂದಲ ಸೃಷ್ಟಿಸಲು ಬಿಜೆಪಿ ಮುಂದಾಗಿದ್ದು ಮಾತ್ರ ಅದರ ಮುಸ್ಲಿಂ ದ್ವೇಷದ ರಾಜಕಾರಣಕ್ಕೆ ಹಿಡಿದ ಕನ್ನಡಿಯಂತಿದೆ.
ಇದನ್ನು ಓದಿರಿ : FACT CHECK | ಸುಕನ್ಯಾ ದೇವಿ ಎಂಬ ಯುವತಿಯ ಅತ್ಯಾಚಾರದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದರು ಎಂಬುದು ನಿಜವೇ?