ಬಾಲ್ಕನಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಲು ಪ್ರಯತ್ನಿಸಿದ್ದ ರಾಬಿನ್ ಉತ್ತಪ್ಪ!
ಖಿನ್ನತೆಗೆ ಒಳಗಾಗಿ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದರ ಬಗ್ಗೆ ಹೇಳಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ ಕ್ರಿಕೆಟಿಗ ರಾಬಿನ್ ಉತ್ತಪ್ಪ.
ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಖಿನ್ನತೆಗೆ ಒಳಗಾಗಿದ್ದರ ಬಗ್ಗೆ ರಾಯಲ್ ರಾಜಸ್ಥಾನ್ ಫೌಂಡೇಶನ್ ವೇದಿಕೆ ‘ಮೈಂಡ್, ಬಾಡಿ ಅಂಡ್ ಸೋಲ್’ ನಲ್ಲಿ ಮಾತನಾಡುವಾಗ ತೆರೆದಿಟ್ಟಿದ್ದಾರೆ.

34 ರ ಹರೆಯದ ರಾಬಿನ್ ಉತ್ತಪ್ಪ ಅವರಿಗೆ 2009 ಮತ್ತು 2011 ರ ನಡುವಿನ ವರ್ಷಗಳು ಕಠಿಣವಾಗಿದ್ದರಿಂದ ಇಂತಹ ಆಲೋಚನೆಗಳನ್ನು ಮಾಡಿದ್ದರಂತೆ. ಆದರೆ ಕ್ರಿಕೆಟ್ ಇದರಿಂದ ಹೊರಬರಲು ಸಹಾಯ ಮಾಡಿದೆಯಂತೆ. ಉತಪ್ಪ 2006 ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಪಾದಾರ್ಪಣೆ ಮಾಡಿದರು. ಇದುವರೆಗೂ 46 ಏಕದಿನ ಮತ್ತು 13 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಕೆಲವೊಂದು ಕೆಟ್ಟ ಗಳಿಗೆಗಳು ಇವರ ಜೀವನದಲ್ಲೂ ನಡೆದಿವೆ. ಅವುಗಳಿಂದ ಹೊರಬಂದ ಪರಿಯನ್ನು ಹಂಚಿಕೊಂಡ ರಾಬಿನ್ ಕಷ್ಟದ ಜೀವನ ಗೆಲ್ಲಲು ಮಾದರಿಯಾಗಿದ್ದಾರೆ.
“ನಾನು 2006 ರಲ್ಲಿ ಪಾದಾರ್ಪಣೆ ಮಾಡಿದಾಗ, ನನ್ನ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಅಂದಿನಿಂದ ಇಂದಿನವರೆಗೆ ಸಾಕಷ್ಟು ಕಲಿಕೆ ಮತ್ತು ಅಭಿವೃದ್ಧಿ ಸಂಭವಿಸಿದೆ. ಇದೀಗ, ನನ್ನ ಬಗ್ಗೆ ನನಗೆ ತುಂಬಾ ತಿಳಿದಿದೆ ನನ್ನ ಆಲೋಚನೆಗಳು ಮತ್ತು ನನ್ನ ಬಗ್ಗೆ ಸ್ಪಷ್ಟವಾಗಿದ್ದೇನೆ. ನಾನು ಎಲ್ಲೋ ಒಂದು ಸ್ಥಳದಲ್ಲಿ ಜಾರಿಬಿದ್ದರೆ ಈಗ ನನ್ನನ್ನು ಹಿಡಿಯಲು ತುಂಬಾ ಜನರಿದ್ದಾರೆ ” ಎಂದು ಉತ್ತಪ್ಪ ಹೇಳಿದ್ದಾರೆ.

“ನಾನು ಒಂದು ಹಂತಕ್ಕೆ ತಲುಪಿದ್ದೇನೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ನಾನು ಆ ಕಠಿಣ ಹಂತಗಳನ್ನು ಕಳೆದಿದ್ದೇನೆ, ನಾನು ಖಿನ್ನತೆಗೆ ಒಳಗಾಗಿದ್ದೆ ಮತ್ತು ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿದ್ದೆ. ಈಗ 2009 ರಿಂದ 2011 ರವರೆಗೆ ಕಳೆದ ಪ್ರತಿದಿನವೂ ನಾನು ನೆನಪಿಸಿಕೊಳ್ಳುತ್ತೇನೆ. ಕ್ರಿಕೆಟ್ ಈ ಆಲೋಚನೆಗಳಿಂದ ನನ್ನ ಮನಸ್ಸನ್ನು ದೂರವಿಟ್ಟಿತ್ತು” ಎಂದರು.
“ನಾನು ದಿನಚರಿಯಲ್ಲಿ ನನ್ನ ಬಗ್ಗೆ ಇದನ್ನು ಹೇಳಲು ಪ್ರಾರಂಭಿಸಿದಾಗ ಮತ್ತು ಒಬ್ಬ ವ್ಯಕ್ತಿಯಾಗಿ ನನ್ನನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ, ನನ್ನ ಜೀವನದಲ್ಲಿ ನಾನು ಮಾಡಲು ಬಯಸಿದ ಆ ಬದಲಾವಣೆಗಳಿಗಾಗಿ ನಾನು ಹೊರಗಿನ ಸಹಾಯವನ್ನು ಪಡೆಯಲು ಪ್ರಾರಂಭಿಸಿದೆ” ಎಂದು ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ ತಮ್ಮ ಅನುಭವಗಳ ಬಗ್ಗೆ ಹೇಳಿ ತಮ್ಮ ಜೀವನದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ.

“ಕೆಲವೊಮ್ಮೆ ನಕಾರಾತ್ಮಕವಾಗಿರುವುದು ಅವಶ್ಯಕ ಎಂದು ನಾನು ಭಾವಿಸುತ್ತೇನೆ. ನಾನು ಜೀವನದ ಸಮತೋಲನವನ್ನು ನಂಬುವವನು. ಜೀವನದಲ್ಲಿ ಎಲ್ಲ ಸಮಯದಲ್ಲೂ ಸಕಾರಾತ್ಮಕವಾಗಿರಲು ಸಾಧ್ಯವಿಲ್ಲ ಎಂದು ನಾನು ನಂಬುತ್ತೇನೆ. ಸ್ವಂತ ಬೆಳವಣಿಗೆಗೆ ನಕಾರಾತ್ಮಕವಾಗಿರುವುದು ಅಥವಾ ನಕಾರಾತ್ಮಕ ಅನುಭವಗಳನ್ನು ಹೊಂದಿರುವುದು, ಪ್ರಯೋಗಗಳು ಮತ್ತು ಕ್ಲೇಶಗಳನ್ನು ಅನುಭವಿಸುವುದು ಅಗತ್ಯವಾಗಿರುತ್ತದೆ ” ಎಂದು ಉತ್ತಪ್ಪ ಸ್ಪೂರ್ಥಿದಾಯಕ ಮಾತುಗಳನ್ನ ಆಡಿದ್ದಾರೆ.

