ಹಳ್ಳಿ ಮಾತು-9: ಧನ್ವಂತರಿ ಚಿಕಿತ್ಸೆಗೆ ಮೊರೆ ಇಡುತ್ತಿರುವ ಗ್ರಾಮೀಣ ನರಳಾಟ
ರಾಷ್ಟ್ರಕವಿ ಕುವೆಂಪು ವಿರಚಿತ ‘ಧನ್ವಂತರಿ ಚಿಕಿತ್ಸೆ’ ಕಥೆಯ ರೈತನ ನರಳಾಟ ಹಾಗೂ ಗೋಳಿನ ಚಿತ್ರಣ ಎಂತಹವರ ಮನಸ್ಸನ್ನು ಕರಗಿಸುವಂತಹದ್ದು. ಇದು 1940 ರ ಕಥಾ ಸಂಕಲನದ ಕಥೆ. ಆನಂತರ ಭಾರತದ ಕೃಷಿ ಹಲವು ಘಟ್ಟಗಳನ್ನು ಹಾದು ಬಂದಿದೆ. ಆದರೆ ಗೋಳಿನ ಚಿತ್ರಣ ಬದಲಾಗಲಿಲ್ಲ. ಜಾಗತೀಕರಣ ಧೋರಣೆಗಳ ನಂತರವಂತೂ ಈ ಗೋಳು ಪಡೆದುಕೊಂಡ ಆಯಾಮ ಹಲವು ಸ್ತರಗಳದ್ದು.
ಗ್ರಾಮೀಣ ಭಾರತವನ್ನು ಕಡೆಗಣಿಸಿ ಭಾರತದ ಅಭಿವೃದ್ಧಿ ಸಾಧಿಸುತ್ತೇವೆ ಎಂಬ ಜಾಗತೀಕರಣ ಧೋರಣೆಗಳ ಹುಂಬತನವು ಉಂಟು ಮಾಡಿರುವ ಅಸಮಾನತೆ ಇಡೀ ಭಾರತವನ್ನೇ ವಲಸೆ-ಮರುವಲಸೆ ಹಾಗೂ ಹತಾಶ ವಲಸೆಗಳ ಸುಳಿಗೆ ಸಿಲುಕಿಸಿದೆ. ಎಲ್ಲೆಲ್ಲೂ ಅನಾರೋಗ್ಯ-ಆತ್ಮಹತ್ಯೆಗಳ ರುದ್ರ ತಾಂಡವ.
ತೆಲುಗಿನ ಮಹಾಕವಿ ವೆಂಕಟ ಅಪ್ಪರಾವ್ ಗುರಜಾಡ್ ರವರ ಸುಪ್ರಸಿದ್ಧ ಮಾತಾದ “ದೇಶವೆಂದರೆ ಕೇವಲ ಮಣ್ಣಲ್ಲ; ದೇಶವೆಂದರೆ ಅಲ್ಲಿನ ಜನ” ಎಂಬಂತೆ ಹಳ್ಳಿಗಳೆಂದರೆ ಕೇವಲ ಸಿನಿಮಾ ದೃಶ್ಯಗಳಾಗಬಲ್ಲ ಪರಿಸರ ಮಾತ್ರವೇ ಅಲ್ಲ; ಹಳ್ಳಿಗಳೆಂದರೆ ಅಲ್ಲಿನ ರೈತ -ಕೂಲಿಕಾರ ಹಾಗೂ ದೈಹಿಕ ದುಡಿಮೆಗಾರರು.

ಹೌದು; 2011 ರ ಜನಗಣತಿ ಪ್ರಕಾರವೇ ಗ್ರಾಮೀಣ ಭಾರತದ ಎರಡು ಹೆಕ್ಟೇರ್ ಗಿಂತ ಕಡಿಮೆ ಹಿಡುವಳಿ ಭೂಮಿ ಇರುವ ಹಾಗೂ ಭೂಮಿ ಇಲ್ಲದಿರುವ ಕುಟುಂಬಗಳ ಪ್ರಮಾಣ ಶೇಕಡಾ 84.98. ಈ ಗುಂಪಿನಲ್ಲಿ ಭೂ ರಹಿತರು, ಕೃಷಿ ಕೂಲಿಕಾರರು, ದೈಹಿಕ ದುಡಿಮೆಗಾರರು ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರು ಬರುತ್ತಾರೆ. ಒಟ್ಟಾರೆ ಈ ಗುಂಪಿನ ಒಡೆತನದಲ್ಲಿ ಇರುವ ಭೂಮಿ ಪ್ರಮಾಣ ಶೇಕಡಾ 44.32 ಮಾತ್ರ.1960-61 ರಲ್ಲಿ ಈ ಗುಂಪಿನ ಕುಟುಂಬಗಳ ಪ್ರಮಾಣ ಶೇಕಡಾ 57.2 ಇದ್ದರೆ, ಒಡೆತನದಲ್ಲಿ ಇದ್ದ ಹಿಡುವಳಿ ವಿಸ್ತೀರ್ಣ ಶೇಕಡಾ 9.3 ಆಗಿತ್ತು.1971-72 ರಲ್ಲಿ ಈ ಗುಂಪಿನ ಕುಟುಂಬಗಳ ಪ್ರಮಾಣ ಶೇಕಡಾ 66 ಇದ್ದರೆ, ಒಡೆತನದಲ್ಲಿ ಇದ್ದ ಹಿಡುವಳಿ ವಿಸ್ತೀರ್ಣದ ಪ್ರಮಾಣ ಶೇಕಡಾ15.8 ಆಗಿತ್ತು. (ಕೋಹ್ಲಿ 1988).
2003-04 ರ ಅಂಕಿ ಅಂಶ ನೋಡುವುದಾದರೆ ಗ್ರಾಮೀಣ ಕರ್ನಾಟಕದ ಈ ಗುಂಪಿನ ಕುಟುಂಬಗಳ ಪ್ರಮಾಣ ಶೇಕಡಾ 85.2 ಇದ್ದರೆ, ಇವರ ಒಡೆತನದ ಹಿಡುವಳಿ ವಿಸ್ತೀರ್ಣದ ಪ್ರಮಾಣ ಶೇಕಡಾ 35.4 ಮಾತ್ರ (ರಾವಲ್ 2008). ಗ್ರಾಮೀಣ ಮಂಡ್ಯದ ಚಿತ್ರಣ ಸ್ವಲ್ಪ ಭಿನ್ನವಿದ್ದು ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿ ಕೂಲಿಕಾರರು, ದೈಹಿಕ ದುಡಿಮೆಗಾರರು ಒಟ್ಟಾರೆ ಈ ವರ್ಗಕ್ಕೆ ಸೇರಿದ ಕುಟುಂಬಗಳು ಶೇಕಡಾ 80 – 90 ರಷ್ಟಿದ್ದು, ಈ ಗುಂಪು ವರ್ಗದ ಒಡೆತನದಲ್ಲಿ ಹಿಡುವಳಿ ವಿಸ್ತೀರ್ಣದ ಶೇಕಡಾ 49 ರಿಂದ ಶೇಕಡಾ 60 ರಷ್ಷಿದೆ. ಅಂದರೆ ಗ್ರಾಮದ ಬಹುತೇಕ ಕುಟುಂಬಗಳು ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿ ಕೂಲಿಕಾರರು ಹಾಗೂ ದೈಹಿಕ ದುಡಿಮೆಗಾರರಾಗಿದ್ದಾರೆ.
ಮಹಾತ್ಮ ಗಾಂಧಿ ರವರು ಹೇಳಿದ ದೇಶದ ಉದ್ಧಾರವೆಂದರೆ ಹಳ್ಳಿಗಳ ಉದ್ಧಾರ ಎಂಬುದನ್ನು ವಿಸ್ತರಿಸಿದರೆ ಹಳ್ಳಿಗಳ ಉದ್ಧಾರವೆಂಬುದು ಸಣ್ಣ ಮತ್ತು ಅತಿ ಸಣ್ಣ ರೈತರ, ಕೃಷಿ ಕೂಲಿಕಾರರ ಹಾಗೂ ದೈಹಿಕ ದುಡಿಮೆಗಾರರ ಉದ್ಧಾರವೇ ಆಗಿದೆ. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕೃಷಿ ನೀತಿಯಲ್ಲಿ ಈ ಬಹುಸಂಖ್ಯಾತರು ಪ್ರಧಾನ ಸ್ಥಾನ ಪಡೆದಿಲ್ಲ. ಇವರ ಕೃಷಿ ಭೂಮಿ ರಕ್ಷಣೆ ಆಗುವಂತೆ, ಇವರ ಸುಸ್ಥಿರ ಬದುಕಿಗೆ ಆಧಾರವಾಗಿ ಕೃಷಿಯನ್ನು ಲಾಭದಾಯಕಗೊಳಿಸುವಂತಹ ಯಾವುದೇ ಧೋರಣೆಗಳು ಕೃಷಿ ನೀತಿಯಲ್ಲಿ ಇಲ್ಲ. ಬದಲಾಗಿ ಇವರನ್ನು ಕೃಷಿ ಭೂಮಿಯಿಂದ ಹೊರ ತಳ್ಳಲು ಹಾಗೂ ಗ್ರಾಮೀಣ ಜೀವನದಿಂದಲೇ ಹೊರಹಾಕಲು ಕಾರಣವಾಗುವ ನೀತಿಗಳನ್ನೇ ಅನುಸರಿಸುತ್ತಿವೆ.

ಕೃಷಿ ಬೇಕು, ಆದರೆ ಕೃಷಿಕ ಬೇಡ ಎನ್ನುವ ಧೋರಣೆಯ ಕೃಷಿ ನೀತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿವೆ. ಕೃಷಿಗೆ ನೀಡುತ್ತಿರುವ ಸಬ್ಸಿಡಿಗಳ ಸಿಂಹಪಾಲು ಅತಿ ಹೆಚ್ಚು ಬಂಡವಾಳ ಬಯಸುವ ರಫ್ತು ಉದ್ದೇಶದ ಹೂವು – ಹಣ್ಣು ಮುಂತಾದ ಬೇಸಾಯಗಳಿಗೆ ಹೋಗುತ್ತಿದೆ. ಕೃಷಿ ಸಲಕರಣೆಗಳ ಖಾಸಗಿ ಒಡೆತನ ಪ್ರೋತ್ಸಾಹಿಸುವ ಕೃಷಿ ನೀತಿಗಳಿಂದಾಗಿ ಬಹುತೇಕ ಕೃಷಿಕರು ಉತ್ಪಾದನಾ ಸಾಧನಗಳಿಗೆ ದುಬಾರಿ ಬಾಡಿಗೆ ತೆರುವಂತಾಗಿದೆ. ಕೃಷಿ ಉತ್ಪನ್ನಗಳ ಮಾರಾಟದ ಸಂದರ್ಭಗಳಲ್ಲಿ ಸುಲಭವಾಗಿ ದಲ್ಲಾಳಿಗಳ ಕಪಿಮುಷ್ಟಿಗೆ ಸಿಲುಕುತ್ತಾರೆ. ಈ ಶೋಷಣಾ ಮಾರಾಟ ವ್ಯವಸ್ಥೆಯಿಂದ ರಕ್ಷಿಸಲು ಸರ್ಕಾರದ ಖರೀದಿ ಕೇಂದ್ರಗಳ ನೆರವು ಇಲ್ಲದ್ದರಿಂದ ಒಂದು ಕಡೆ ಸರಾಸರಿಗಿಂತ ಹೆಚ್ಚಿನ ವೆಚ್ಚದ ಕೃಷಿ ಲಾಗುವಾಡುಗಳ ಹೊರೆ, ಇನ್ನೊಂದು ಕಡೆ ಅತ್ಯಂತ ಅಗ್ಗದ ದರಕ್ಕೆ ಹತಾಶ ಮಾರಾಟದ ಒತ್ತಡ, ಹೀಗೆ ಎರಡು ಕಡೆಯಿಂದಲೂ ದಯನೀಯವಾಗಿ ಸಣ್ಣ ಹಿಡುವಳಿದಾರ ರೈತ ಶೋಷಿಸಲ್ಪಡುತ್ತಿದ್ದಾನೆ.
ಇದಲ್ಲದೇ ಕೃಷಿಗೆ ಬೇಕಾದ ಅಗತ್ಯ ಬಂಡವಾಳಕ್ಕೆ ಮತ್ತು ಆರೋಗ್ಯ, ಶಿಕ್ಷಣ ಮುಂತಾದ ಸಾಮಾಜಿಕ ಕಲ್ಯಾಣ ಸುರಕ್ಷೆಗಳು ಇಲ್ಲದ್ದರಿಂದಾಗಿ ಏರಿರುವ ಜೀವನ ವೆಚ್ಚ ,ಇವೆಲ್ಲದಕ್ಕೂ ವಾರ್ಷಿಕ ಶೇಕಡಾ 60 ರವರೆಗಿನ ದುಬಾರಿ ಬಡ್ಡಿಯ ಖಾಸಗಿ, ಮೈಕ್ರೋ ಫೈನಾನ್ಸ್ ಗಳಂತಹವುಗಳನ್ನು ಅವಲಂಬಿಸಬೇಕಾಗಿದೆ. ಜಮೀನು ಅಳತೆ, ಋಣಭಾರರಾಹಿತ್ಯ ಪ್ರಮಾಣ ಪತ್ರ, ಖಾತೆ ಬದಲಾವಣೆ ಮುಂತಾದ ಹಲವು ಕಂದಾಯ ಮತ್ತಿತರೆ ಸೇವೆಗಳಿಗೆ ದುಬಾರಿ ಶುಲ್ಕಗಳನ್ನು ತೆರಬೇಕಾಗಿದೆ. ಈ ಯಾವುದೇ ಶುಲ್ಕಗಳು ಸರ್ವೆ ನಂಬರ್ ಗಳನ್ನು ಆಧರಿಸಿವೆಯೇ ಹೊರತು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿ ಆಧಾರವಾಗಿಲ್ಲ. ಹತ್ತು ಗುಂಟೆ ಜಮೀನು ದಾಖಲಾತಿಗಳನ್ನು ಸಮರ್ಪಕಗೊಳಿಸಲು ಆಗುವ ವೆಚ್ಚಕ್ಕೆ ಹೆದರಿ ಜಮೀನು ಮಾರಾಟ ಮಾಡಬೇಕಾದ ಪರಿಸ್ಥಿತಿಯೇ ಬಂದು ಬಿಡುತ್ತದೆ. ಏಕೆಂದರೆ ಖರೀದಿ ಮಾಡುವವನು ಆ ವೆಚ್ಚವನ್ನು ಮಿತವ್ಯಯಿಯಾಗಿ ನಿಭಾಯಿಸಲು ಸಾಧ್ಯ.

ಮಂಡ್ಯದ ಹಳ್ಳಿಗಳಲ್ಲಿ ಪ್ರಸ್ತುತ ಕೃಷಿ ಕೂಲಿಯ ದರ ಪುರುಷರಿಗೆ ಸರಾಸರಿ 300ರೂ, ಮಹಿಳೆಯರಿಗೆ ಸರಾಸರಿ 150 ರೂ ಇದೆ. ಒಂದು ಕೃಷಿ ಕೂಲಿ ಕುಟುಂಬದಲ್ಲಿ ದುಡಿಯುವ ಸಾಮಾರ್ಥ್ಯ ಇರುವವರು ಇಬ್ಬರು ಎಂದು ಭಾವಿಸಿದರೆ ಅವರ ಪ್ರತಿದಿನದ ಕೂಲಿ ಪಡೆಯಬಹುದಾದ ಮೊತ್ತ 450 ರೂ. ಕೃಷಿ ಕೂಲಿಯಲ್ಲಿ ಇರುವ ನಿರುದ್ಯೋಗವನ್ನು ಮರೆತು ತಿಂಗಳಲ್ಲಿ 25 ದಿನ ಪೂರ್ತಿ ಕೆಲಸ ಮಾಡಿದರೂ 11,250 ರೂ ದೊರಕಬಹುದು. 2016 ರ 7 ನೇ ಕೇಂದ್ರ ವೇತನ ಆಯೋಗದ ಶಿಪಾರಸ್ಸಿನ ಪ್ರಕಾರ ಕೊನೆ ಶ್ರೇಣಿಯ ಕನಿಷ್ಠ ವೇತನ 18000 ರೂಗಳು. 2020 ರ ವರೆಗಿನ ಬೆಲೆ ಏರಿಕೆ ಲೆಕ್ಕ ಹಾಕಿಕೊಂಡರೆ ಇದು 21000 ರೂಗಳಾಗಬಹುದು. ಅಂದರೆ ಒಂದು ಕುಟುಂಬದ ಇಬ್ಬರು ದುಡಿದರೂ ಸುಮಾರು ಶೇಕಡಾ 50 ರಷ್ಟು ಕಡಿಮೆ. ವರ್ಷಪೂರ್ತಿ ಈ ಕೂಲಿದರಗಳಲ್ಲಿ ದುಡಿದರೂ ಬಡತನ ರೇಖೆಗಿಂತ ಕೆಳಗೆ ಇರಬೇಕಾದ ದಾರುಣ ಸ್ಥಿತಿ ಇದೆ ಎಂಬುದನ್ನು ಯಾರೂ ನಿರಾಕರಿಸಲಾಗದ ಕಣ್ಣಿಗೆ ರಾಚುವ ಕಟು ಸತ್ಯ.
ಇಂತಹ ಒಂದು ಗ್ರಾಮೀಣ ಸನ್ನಿವೇಶಕ್ಕೆ ಬೆಂಬಲ ಬೆಲೆಗೆ ಒತ್ತಾಯಿಸಬಹುದಾದ ಕೃಷಿ ಉತ್ಪನ್ನಗಳ ಮಾರುಕಟ್ಟೆಗಳನ್ನು ಮುಚ್ಚಲು ಅವಕಾಶ ನೀಡುವ ಎಪಿಎಂಸಿ ತಿದ್ದುಪಡಿ ಕಾಯ್ದೆ 2020, ಕೃಷಿ ಭೂಮಿಯನ್ನು ಮನಸೋ ಇಚ್ಛೆ ಖರೀದಿಸಲು ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ನೀಡುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020, ವಿದ್ಯುತ್ ಅನ್ನು ಕೃಷಿಗೆ, ಗ್ರಾಮೀಣ ಕುಟುಂಬಗಳ ಗೃಹ ಬಳಕೆಗೆ ಎಟುಕದಂತೆ ಮಾಡುವ ವಿದ್ಯುತ್ ಖಾಸಗೀಕರಣದ ವಿದ್ಯುತ್ ಕಾಯ್ದೆ 2020, ಆಹಾರ ಭದ್ರತೆಯನ್ನು ನಾಶ ಮಾಡುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ 2020 ಅನ್ನು ಸುಗ್ರಿವಾಜ್ಞೆ ಗಳ ಮೂಲಕ ಜಾರಿಗೆ ತರಲಾಗುತ್ತಿದೆ. ಈ ಸುಗ್ರಿವಾಜ್ಞೆ ಗಳು ಸುಲಲಿತವಾಗಿ ಕಾಯಿದೆಯಾಗಿ ಬರಲು ಅಗತ್ಯವಾದ ರಾಜ್ಯಸಭೆಯ ಭರ್ಜರಿ ಬಹುಮತಕ್ಕಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ವಿರೋಧ ಪಕ್ಷಗಳ ಸರ್ಕಾರಗಳನ್ನೇ ಉರುಳಿಸಿ ‘ಅಸಹ್ಯ ಆಪರೇಷನ್ ಕಮಲ’ಕ್ಕೆ ಒಳಪಡಿಸಲಾಗುತ್ತಿದೆ.
ಕೃಷಿ ಬಿಕ್ಕಟ್ಟಿನ ಇವತ್ತಿನ ಸ್ವರೂಪವನ್ನು ಮರೆಮಾಚಲು, ನೈಜ ಪರಿಹಾರಗಳನ್ನು ಹುಡುಕಲು ನಿರಾಕರಿಸುವ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ರೈತ ಸಂಘಟನೆಗಳು, ಸಣ್ಣ ಸಣ್ಣ ಹಿಡುವಳಿ ಕೃಷಿಯನ್ನು ವೈಭವೀಕರಿಸುತ್ತಿವೆ. ಇನ್ನೊಂದು ಕಡೆ ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಧ್ಯಮ ಹಿಡುವಳಿದಾರರನ್ನು ಕೃಷಿಯಿಂದ ಮುಕ್ತಗೊಳಿಸಿ ಭೂಮಿಯನ್ನು ಕ್ರೋಢೀಕರಿಸಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ ಉತ್ಪಾದಕತೆ ಹೆಚ್ಚಿಸುವ ಕೃಷಿ ಪದ್ದತಿ ಬೇಕು ಎಂದು ಪ್ರತಿಪಾದಿಸಲಾಗುತ್ತಿದೆ. ಈ ಎರಡೂ ವಿಧಾನಗಳು ಇವತ್ತಿನ ಗ್ರಾಮೀಣ ಭಾರತದ ಕೃಷಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಕಾರಿ ಆಗುವುದಿಲ್ಲ.
ಉಳುವವನಿಗೆ ಭೂಮಿ ಖಾತರಿಪಡಿಸುವ ಒಂದು ಅಮೂಲಾಗ್ರ ಭೂ ಸುಧಾರಣೆ, ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆಯ ಗಣನೀಯ ಹೆಚ್ಚಳ, ಕೃಷಿ ಸೇರಿದಂತೆ ಗ್ರಾಮೀಣ ಜನ ಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲಿ ಸಹಕಾರಿ ರಂಗಗಳನ್ನು ನಿರ್ಮಿಸಿ ಬಲಿಷ್ಠಗೊಳಿಸುವ ಧೋರಣೆಗಳುಳ್ಳ ಒಂದು ಪರ್ಯಾಯ ಕೃಷಿ ನೀತಿಯಿಂದ ಮಾತ್ರ ವಲಸೆ ಹಾಗೂ ಆತ್ಮಹತ್ಯೆಯಂತಹ ಭೀಕರ ಸಮಸ್ಯೆಗಳನ್ನು ಒಳಗೊಂಡ ಕೃಷಿ ಬಿಕ್ಕಟ್ಟನ್ನು ನಿವಾರಿಸಿ ಕೃಷಿ ಕ್ಷೇತ್ರದ ದುಡಿಮೆ ನಂಬಿರುವ ಕೋಟ್ಯಾಂತರ ರೈತಾಪಿ ಸಮುದಾಯವನ್ನು ನಿರುದ್ಯೋಗ-ಹಸಿವಿನಿಂದ ಮುಕ್ತಗೊಳಿಸಬಹುದು.

ಕೋವಿಡ್ 19 ಕೂಡ ಜೊತೆಯಾಗಿ ಹಿಂದೆಂದೂ ಕಂಡರಿಯದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವ್ಯಾಪಕವಾಗಿ ಹಳ್ಳಿಗಳಿಗೆ ಬರುತ್ತಿರುವ ದುಡಿಮೆಗಾರರು, ಗ್ರಾಮೀಣ ಶ್ರಮಶಕ್ತಿ ಮೇಲೆ, ಕೃಷಿ ಭೂಮಿ ಮೇಲೆ ಉಂಟು ಮಾಡುವ ಒತ್ತಡಗಳನ್ನು ಅರ್ಥ ಮಾಡಿಕೊಂಡು, ವ್ಯಾಪಕವಾದ ಕ್ರಮಗಳನ್ನು ತುರ್ತಾಗಿ ಮಾಡಬೇಕಿದೆ. ಈಗಾಗಲೇ ಕೋವಿಡ್ 19 ಸೋಂಕು ನಿಯಂತ್ರಣದಲ್ಲಿ ಮಾದರಿಯಾಗಿರುವ ಕೇರಳ, ಮುಂಬರುವ ಆಹಾರ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಸಹಕಾರಿ ಬೇಸಾಯವನ್ನು ಉತ್ತೇಜಿಸಲು ಅಗತ್ಯ ಶಾಸನವನ್ನು ಅಂಗೀಕರಿಸಿ ಕಾರ್ಯನ್ಮೋಖವಾಗಿದೆ.
ಮೋದಿರವರು ಕರೆ ನೀಡಿರುವ ಆತ್ಮನಿರ್ಭರ್ ಭಾರತ್ ಸಾಧಿಸಬೇಕಾದರೆ ಗ್ರಾಮೀಣ ಜನತೆಯ ಸ್ವಾಭಿಮಾನ-ಜೀವನ ಭದ್ರತೆಯ ರಕ್ಷಣೆ ತುಂಬಾ ಮುಖ್ಯ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ಸುಗ್ರೀವಾಜ್ಞೆ ಗಳನ್ನು ಕೈ ಬಿಟ್ಟು ಅಗತ್ಯ ಕಾನೂನು-ಧೋರಣೆಗಳನ್ನು ರೂಪಿಸಲು ಮುಂದಾಗುವಂತೆ ಆಗ್ರಹಿಸೋಣ!
(ಎಲ್ಲ ಅಭಿಪ್ರಾಯಗಳು ಲೇಖಕರದ್ದೆ)
- ಟಿ ಯಶವಂತ, ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಈ ಸರಣಿ ಬರೆಯುತ್ತಿದ್ದಾರೆ.
- ನಿಮ್ಮ ಪ್ರತಿಕ್ರಿಯೆಗಳನ್ನು ಈ ಈಮೇಲ್ ಐಡಿಗಳಿಗೆ t@gmail.com , ensuddii@gmail.com ಕಳುಹಿಸಿ ಅಥವಾ 9448572764 ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.

