ಇತಿಹಾಸವನ್ನು ಬಳಿಸಿಕೊಂಡು ಹೈದರಾಬಾದ್‌ನಲ್ಲಿ ಲಾಭ ಗಳಿಸಿದ BJP: ಅದು ಹೇಳಿದ್ದು ಎಷ್ಟು ಸತ್ಯ?

ತೆಲಂಗಾಣ ರಾಜಧಾನಿಯ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆದ ಸಂದರ್ಭದಲ್ಲಿ ಬಿಜೆಪಿ, ಇದನ್ನು ರಾಷ್ಟ್ರೀಯ ಚುನಾವಣೆಯಂತೆ ಪರಿಗಣಿಸಿತ್ತು. ತೆಲಂಗಾಣದಲ್ಲಿ ಪಕ್ಷಕ್ಕೆ ನೆಲೆ ಕಂಡುಕೊಳ್ಳಲು ಬಿಜೆಪಿ ಇತಿಹಾಸದ ಮೊರೆ ಹೋಗಿತ್ತು.

ತೆಲಂಗಾಣದ ಆಡಳಿತಾರೂಢ ಪ್ರಾದೇಶಿಕ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಹೈದರಾಬಾದ್‌ನಲ್ಲಿ ತನ್ನ ಭದ್ರಕೋಟೆಯನ್ನು ಹೊಂದಿರುವ ಮುಸ್ಲಿಂ ಪಕ್ಷವಾದ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ ಅನ್ನು ಚುನಾವಣಾ ಕಣದಲ್ಲಿ ಎದುರಿಸಲು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಪಕ್ಷದ ರಾಷ್ಟ್ರ ನಾಯಕರುಗಳೇ ಹೈದರಾಬಾದ್‌ಗೆ ಬಂದಿದ್ದರು. ಅಲ್ಲದೆ, ಎಲ್ಲರೂ ತಮ್ಮ ಭಾಷಣದಲ್ಲಿ ಇತಿಹಾಸವನ್ನು ಕೆದಕುವ ಯತ್ನ ಮಾಡುತ್ತಿದ್ದರು.

ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಹೈದರಾಬಾಗ್‌ಗೆ “ಭಾಗ್ಯನಗರ” ಎಂದು ಹೆಸರಿಡಲಾಗುವುದು. ಈ ಚುನಾವಣೆಯು ನಗರಕ್ಕೆ “ಭಾಗ್ಯ” (ಅದೃಷ್ಟ) ವನ್ನು ಸೃಷ್ಟಿಸುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಚಾರ ಭಾಷಣದಲ್ಲಿ ಹೇಳಿದ್ದರು. ಹಾಗೆ ಹೇಳುವಾಗ ಆದಿತ್ಯನಾಥ್, 16 ನೇ ಶತಮಾನದ ಉತ್ತರಾರ್ಧದಲ್ಲಿ ಕುತುಬ್ ಶಾಹಿ ಆಳ್ವಿಕೆಯಲ್ಲಿ ನಗರದ ಹೆಸರನ್ನು ಹೈದರಾಬಾದ್ ಎಂದು ಬದಲಾಯಿಸಲಾಗಿದೆ ಎಂದು ಪುರಾವೆ ಇಲ್ಲದ ದಂತಕತೆಯನ್ನು ಹೇಳಿ ಪ್ರಚೋದಿಸಲು ಯತ್ನಿಸಿದ್ದರು.

ಎಐಎಂಐಎಂ ಅಥವಾ ತೆಲಂಗಾಣ ರಾಷ್ಟ್ರ ಸಮಿತಿಯು ಯಾವುದೇ ಪ್ರವಾಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿಲ್ಲ. ಆದರೆ, ಬಿಜೆಪಿ ಹೈದರಾಬಾದ್ ಅನ್ನು ಆಧುನಿಕ ನಗರವನ್ನಾಗಿ ಪರಿವರ್ತಿಸುತ್ತದೆ. “ನವಾಬಿ-ನಿಜಾಮಿ” ಸಂಸ್ಕೃತಿಯನ್ನು ತೊಡೆದುಹಾಕುತ್ತದೆ ಎಂದು ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಲ್ಲದೆ, 18 ನೇ ಶತಮಾನದ ಆರಂಭದಿಂದ 1948ರಲ್ಲಿ ಮಿಲಿಟರಿ ಕಾರ್ಯಾಚರಣೆಯ ನಂತರ ಭಾರತ ಒಕ್ಕೂಟಕ್ಕೆ ಸೇರುವವರೆಗೂ ಹೈದರಾಬಾದ್ ರಾಜಪ್ರಭುತ್ವವನ್ನು ಆಳಿದ ಅಸಫ್ ಜಹಿ ರಾಜವಂಶವನ್ನು ಉಲ್ಲೇಖಿಸಿ ಅವರು ಮಾತನಾಡಿದ್ದರು.

ಚುನಾವಣೆಯ ಅಂತ್ಯದಲ್ಲಿ, ಬಿಜೆಪಿ 48 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು, ಇದು ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ ನಾಲ್ಕು ಸ್ಥಾನಗಳಿಗಿಂತ ಗಣನೀಯ ಹೆಚ್ಚಳವಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿಯು 99 ಸ್ಥಾನಗಳಿಂದ 55ಕ್ಕೆ ಕುಸಿದಿದ್ದರೆ, ಎಐಎಂಐಎಂ 44 ಸ್ಥಾನಗಳಲ್ಲಿ ತಟಸ್ಥವಾಗಿದೆ.

ಇದನ್ನೂ ಓದಿ: ಹೈದರಾಬಾದ್‌ ಚುನಾವಣೆ: ಗೆದ್ದು ಸೋತ TRS; ಸೋತು ಗೆದ್ದಿದೆ BJP

ಚುನಾವಣಾ ಫಲಿತಾಂಶವು ಹೈದರಾಬಾದ್‌ ಜನರು ಅಭಿವೃದ್ದಿ ಹೆಸರಿನ ಕೋಮುವಾದಿ ವಾಕ್ಚಾತುರ್ಯಕ್ಕೆ ಒಲಿದಿದ್ದು, ಕೋಮುವಾದಿ ರಾಜಕಾರಣವನ್ನು ಬೆಂಬಲಿಸಿದ್ದಾರೆ ಎಂಬ ಸೂಚನೆಯನ್ನು ನೀಡಿದೆ.

ಹೈದರಾಬಾದ್-ಡೆಕ್ಕನ್‌ನ ಹಿಂದೂತ್ವ ಇತಿಹಾಸ

ರಾಜ್ಯದ ಹಿಂದಿನ ಇತಿಹಾಸವನ್ನು ಬಿಜೆಪಿ ಮುನ್ನೆಲೆ ತಂದು ಪ್ರಚಾರ ಮಾಡುವ ರೀತಿ ಹೊಸದೇನೂ ಅಲ್ಲ. 1990ರ ದಶಕದಿಂದ ಸೆಪ್ಟೆಂಬರ್ 17, 1948ರ ವರೆಗೆ – ಹೈದರಾಬಾದ್-ಡೆಕ್ಕನ್‌ಅನ್ನು ಆಳಿದ ಅಸಫ್ ಜಾಹಿ ಆಡಳಿತದಿಂದ ಭಾರತ ಒಕ್ಕೂಟಕ್ಕೆ ಸೇರಿದ ದಿನ (ಸೆಪ್ಟೆಂಬರ್ 17)ವನ್ನು “ಹೈದರಾಬಾದ್‌ ವಿಮೋಚನಾ” ದಿನವನ್ನಾಗಿ ಆಚರಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಕಳೆದ ಎರಡು ದಶಕಗಳಲ್ಲಿ ಆಂಧ್ರಪ್ರದೇಶದಿಂದ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ನಡೆದ ಆಂದೋಲನದ ಸಂದರ್ಭದಲ್ಲಿ, ಅಸಫ್ ಜಹೀ ರಾಜವಂಶದ ಕೊನೆಯ ರಾಜ ನಿಜಾಮ್ ಉಸ್ಮಾನ್ ಅಲಿ ಖಾನ್ ಅವರನ್ನು ತೆಲುಗು ಭಾಷೆಯ ಮೇಲೆ ದಬ್ಬಾಳಿಕೆ ನಡೆಸಿದ ವ್ಯಕ್ತಿಯಂತೆ ಬಿಂಬಿಸಲು ಬಿಜೆಪಿ ಪ್ರಯತ್ನಿಸಿತ್ತು..

ತೆಲಂಗಾಣದ ಇತಿಹಾಸದಲ್ಲಿ ತನ್ನನ್ನು ಸೇರಿಸಿಕೊಳ್ಳಲು ಬಿಜೆಪಿ, 1940 ರ ದಶಕದ ಆರಂಭದಲ್ಲಿ ಊಳಿಗಮಾನ್ಯ ಪದ್ಧತಿಯ ವಿರುದ್ಧ ರೈತರ ಹೋರಾಟವನ್ನು ಪ್ರತಿಪಾದಿಸುತ್ತಿದೆ. ರೈತ ದಂಗೆಯ ಸಮಯದಲ್ಲಿ ಹೋರಾಟದ ಕೇಂದ್ರಬಿಂದುಗಳಲ್ಲಿ ಒಂದಾಗಿದ್ದ ನಲ್ಗೊಂಡ ಜಿಲ್ಲೆಯ ಗುಂಡ್ರಂಪಳ್ಳಿಗೆ 2017 ರಲ್ಲಿ ಅಮಿತ್ ಷಾ ಅವರು ಅಲ್ಲಿಗೆ ಭೇಟಿಕೊಟ್ಟಿದ್ದರು. ಇದು ರೈತ ಹೋರಾಟದಲ್ಲಿ ಬಿಜೆಪಿ ತನ್ನನ್ನು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ಅರ್ಥಮಾಡಿಸುತ್ತದೆ.

ಬಿಜೆಪಿ ಕ್ಲೈಮ್‌ ಮಾಡಿಕೊಳ್ಳುತ್ತಿರುವುದರ ಮೂಲ

ಬಿಜೆಪಿಯ ಪ್ರತಿಪಾದನೆಯನ್ನು 1930ರ ದಶಕದಲ್ಲಿ ಹಿಂದೂ ಮಹಾಸಭಾ, ಆರ್ಯ ಸಮಾಜ ಮತ್ತು ಹೈದರಾಬಾದ್ ರಾಜ್ಯ ಕಾಂಗ್ರೆಸ್ ಸಂಘಟನೆಗಳು ಹೈದರಾಬಾದ್-ಡೆಕ್ಕನ್ ಬಗ್ಗೆ ಗಂಭೀರ ಆಸಕ್ತಿ ವಹಿಸಲು ಪ್ರಾರಂಭಿಸಿದನ್ನು ಕಾಣಬಹುದು.

ಹಿಂದೂ ಮಹಾಸಭಾ ಮತ್ತು ಆರ್ಯ ಸಮಾಜವು ಮುಸ್ಲಿಂ ಆಡಳಿತಗಾರನನ್ನು ಹಿಂದೂ ಜನರ ಮೇಲಿನ ದಬ್ಬಾಳಿಕೆಯ ಅಡಳಿತವೆಂದು ಚಿತ್ರಿಸಲು ಕೆಲಸ ಮಾಡಿದ್ದವು.

ಹೈದರಾಬಾದ್ ರಾಜ್ಯ ಕಾಂಗ್ರೆಸ್ ತನ್ನ ಸದಸ್ಯತ್ವ ಮತ್ತು ಚಟುವಟಿಕೆಗಳಲ್ಲಿ ಈ ನಿಲುವನ್ನು ನಿರಾಕರಿಸಿದರೂ ಕೋಮುವಾದವಲ್ಲದ ಸಾರ್ವಜನಿಕ ನಿಲುವನ್ನು ಉಳಿಸಿಕೊಂಡಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ಮತ್ತು ಹೈದರಾಬಾದ್ ಮೂಲದ ಪದ್ಮಜಾ ನಾಯ್ಡು ಅವರು 1938 ರ ನವೆಂಬರ್‌ನಲ್ಲಿ ಎಂ.ಕೆ.ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಹೈದರಾಬಾದ್ ರಾಜ್ಯ ಕಾಂಗ್ರೆಸ್ ಅನ್ನು ಕೋಮುವಾದಿ ಸಂಘಟನೆ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಪಕ್ಷದ “ಮೂಲ ಸಂಸ್ಥಾಪಕರು” ಸೇರಿದಂತೆ ಎಲ್ಲರೂ ಕೋಮು ಸಂಘಟನೆಗಳೊಂದಿಗೆ ಮುಕ್ತ ಒಡನಾಟವನ್ನು ಹೊಂದಿದ್ದಾರೆ ಎಂದು ಅವರು ಬರೆದಿದ್ದಾಗಿ ವರದಿ ಮಾಡಲಾಗಿದೆ.

ಈ ಮೂರು ಸಂಸ್ಥೆಗಳೂ ಅಸಫ್ ಜಹಿ ರಾಜವಂಶದ ಬಗ್ಗೆ ಸಾಮಾನ್ಯ ದ್ವೇಷವನ್ನು ಒಳಗೊಂಡಿದ್ದವು. ರಾಜ್ಯದ ವೈಫಲ್ಯಗಳನ್ನು ಅದರ “ಕೋಮುವಾದಿ” ಸ್ವಭಾವದ ಪರಿಣಾಮವಾಗಿ ಬಿಂಬಿಸಿದ್ದವು.

1938 ರ ಹೈದರಾಬಾದ್ ಸತ್ಯಾಗ್ರಹವನ್ನು  ಹಿಂದೂ ಮಹಾಸಭೆಯ ದಾಖಲೆಗಳಲ್ಲಿ “ಭಗನಗರ ಹೋರಾಟ” ಎಂದು ವಿವರಿಸಲಾಗಿದೆ.  ರಾಜ್ಯದ “ತುಳಿತಕ್ಕೊಳಗಾದ” ಹಿಂದೂಗಳಿಗೆ ಧಾರ್ಮಿಕ ಮತ್ತು ನಾಗರಿಕ ಸ್ವಾತಂತ್ರ್ಯವನ್ನು ದೊರಕಿಸಲು ಮೂರು ಸಂಘಟನೆಗಳು ಒಗ್ಗೂಡಿದ ಒಂದು ಪ್ರಮುಖ ಕ್ಷಣ ಎಂದು ಹೇಳಲಾಗಿದೆ.

ಆದರೆ, ಸತ್ಯಾಗ್ರಹದ ಪ್ರಮುಖ ಯೋಜನೆಗಳು ಅಂತಿಮಗೊಳಿಸಲಾಗಿದ್ದರೂ, ಅವರು ಕೋಮುವಾದಿ ಧೋರಣೆಗಳನ್ನು ಹೊಂದಿದ್ದಾರೆ ಎಂದು ಗಾಂಧಿ ಅವರ ಸೂಚನೆ ಮೇಲೆಗೆ ಹೈದರಾಬಾದ್ ರಾಜ್ಯ ಕಾಂಗ್ರೆಸ್ ಸಾರ್ವಜನಿಕವಾಗಿ ಪ್ರತಿಭಟನೆಯಿಂದ ಹಿಂದೆ ಸರಿಯಿತು.

ಇದನ್ನೂ ಓದಿ: ಬಿಜೆಪಿಗೆ ಹೈದರಾಬಾದ್‌ ಚುನಾವಣೆ ಗೆಲ್ಲುವುದೇ ಮುಖ್ಯ; ಏಕೆ ಮತ್ತು ಹೇಗೆ?

ನಂತರ, ಹಿಂದೂ ಮಹಾಸಭಾದಿಂದ ಪೂನಾ, ನಾಗ್ಪುರ ಮತ್ತು ಶೋಲಾಪುರದಂತಹ ನಗರಗಳಿಂದ “ನಾಗರಿಕ ಪ್ರತಿರೋಧಕಗಳ” ಬ್ಯಾಚ್‌ಗಳನ್ನು ರಾಜ್ಯಕ್ಕೆ ಕರೆತರಲು ಮಹಾಸಭಾ ಅಧ್ಯಕ್ಷ ಸಾವರ್ಕರ್ ಅವರ ಅನುಮೋದನೆಯನ್ನು ಸತ್ಯಾಗ್ರಹ ಪಡೆದುಕೊಂಡಿತು. ಸಾವರ್ಕರ್‌ ತಮ್ಮ ಒಡನಾಡಿ ಎಂ.ಜಿ.ಚಿಟ್ನಾವಿಸ್ ಅವರಿಗೆ ಬರೆದಿರುವ ಮೆಚ್ಚುಗೆಯ ಪತ್ರದಲ್ಲಿ, “ಭಾಗನಗರ ಹೋರಾಟ” ದೇಶದಲ್ಲಿ “ಹಿಂದೂ ಸಂಘತಾನ್ ಚಳವಳಿಗೆ” ವೇಗವನ್ನು ಸೃಷ್ಟಿಸಿದೆ ಎಂದು ಬರೆದಿದ್ದಾರೆ. ಮಹಾಸಭಾ ಅವರ ಈ ಪ್ರಯತ್ನಕ್ಕೆ ಮುಖ್ಯವಾದುದು ಹೈದರಾಬಾದ್-ಡೆಕ್ಕನ್ ಅನ್ನು ಮುಸ್ಲಿಂ ರಾಷ್ಟ್ರವೆಂದು ನಿರೂಪಿಸುವುದು ಮತ್ತು ಇಲ್ಲಿ ಹಿಂದೂಗಳನ್ನು “ಉಳಿಸುವ” ಅಗತ್ಯವಿತ್ತು ಎಂದು ಬಿಂಬಿಸುವುದಾಗಿತ್ತು.

ಆದರೆ, ಈ ಕೃಷಿಯಲ್ಲಿನ ಊಳಿಗಮಾನ್ಯ ಪದ್ಧತಿಯು ಕೋಮು ಸ್ವರೂಪದಲ್ಲಿರಲಿಲ್ಲ. ಹಳ್ಳಿಗಳಲ್ಲಿ-ಕೃಷಿಯಲ್ಲಿ ಮುಸ್ಲಿಮರು ದಬ್ಬಾಳಿಕೆಯನ್ನು ನಡೆಸುತ್ತಿರಲಿಲ್ಲ. ಬದಲಾಗಿ, ಹಳ್ಳಿಯ ಹೆಚ್ಚಿನ ಲಾಭದಾಯಕ ಭಾಗಗಳನ್ನು ಹಣದಾಸೆದಾರರು ಮತ್ತು ಗ್ರಾಮ ಅಧಿಕಾರಿಗಳು ನಿಯಂತ್ರಿಸುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಮುಖ್ಯವಾಗಿ ಮಾರ್ವಾರಿ ವ್ಯಾಪಾರ ವರ್ಗಗಳು ಸೇರಿದಂತೆ ಪ್ರಬಲ ಹಿಂದೂ ಜಾತಿಗಳು ಊಳಿಗಮಾನ್ಯ ಪದ್ದತಿಯ ದಬ್ಬಾಳಿಕೆಯ ವರ್ಗಗಳಾಗಿದ್ದವು.

ಆದಾಗ್ಯೂ, 1930 ಮತ್ತು 1940 ರ ಅವಧಿಯಲ್ಲಿ, ಹೈದರಾಬಾದ್-ಡೆಕ್ಕನ್ ಅನ್ನು ಮುಸ್ಲಿಂ ಕೋಮುವಾದಿ ರಾಷ್ಟ್ರವೆಂದು ನಿರಂತರವಾಗಿ ಹೀಗಳೆಯಲಾಗುತ್ತಿತ್ತು. ಹಿಂದುತ್ವ, ರಾಷ್ಟ್ರೀಯವಾದಿ ಸೈದ್ಧಾಂತಿಕ ಸಂಘಟನೆಗಳು ಮತ್ತು ವ್ಯಕ್ತಿಗಳು, ರಾಜ್ಯದಲ್ಲಿ ಉರ್ದುವನ್ನು ಅಧಿಕೃತ ಭಾಷೆಯಾಗಿಯೂ, ಬೋಧನಾ ಭಾಷೆಯಾಗಿಯೂ ಮಾಡಲಾಗುತ್ತಿದೆ. ಅದಕ್ಕಾಗಿ ಉರ್ದು ಭಾಷೆಯಲ್ಲಿ ಉಸ್ಮಾನಿಯಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ. ರಾಜ್ಯದ ಅಧಿಕಾರಶಾಹಿಯಲ್ಲಿ ಮುಸ್ಲಿಮರ ಪ್ರಾಮುಖ್ಯತೆ ಪ್ರಾಬಲ್ಯ ಪಡೆದುಕೊಳ್ಳುತ್ತಿದೆ ಎಂದು ಪ್ರಚಾರ ಮಾಡಿದರು. ಈ ಪ್ರಚಾರವು ರಾಜ್ಯದೊಳಗೆ ಮತ್ತು ಭಾರತೀಯ ಒಕ್ಕೂಟದಲ್ಲಿ ಒಮ್ಮತದ ದೃಷ್ಟಿಕೋನವನ್ನು ರೂಪಿಸಲು ಸಾಕಷ್ಟು ಶಕ್ತಿಯುತವಾಗಿ ಕೆಲಸ ಮಾಡಿತ್ತು.

ದಶಕಗಳ ನಂತರ, ಹಿಂದಿನ ರಾಜ್ಯದ ಬಗೆಗಿನ ಬರಹಗಳು ಮತ್ತು ಸಾರ್ವಜನಿಕ ಭಾಷಣಗಳು ಪ್ರಬಲ ಚೌಕಟ್ಟಾಗಿ ಮುಂದುವರೆದಿದೆ. ತೆಲಂಗಾಣಕ್ಕೆ ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯು, ಮತದಾರರನ್ನು ಧ್ರುವೀಕರಿಸುವ ಪ್ರಚಾರಕ್ಕಾಗಿ 1930ರ ದಶಕದಿಂದ ಸ್ಥಾಪಿತವಾದ ಈ ಐತಿಹಾಸಿಕ ಕತೆಯನ್ನು ಬಳಸಿಕೊಳ್ಳುತ್ತಿದೆ.

ಮೂಲ: ಸ್ಕ್ರೋಲ್.ಇನ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಬಂಗಾಳದಲ್ಲಿ ಮಮತಾ; ತಮಿಳಲ್ಲಿ ಸ್ಟ್ಯಾಲಿನ್‌ಗೆ‌ ಅಧಿಕಾರ; BJPಗೆ ಮುಖಭಂಗ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights