ಬ್ಯಾರಿಕೇಡ್‌ ಮುರಿದು ಮುನ್ನುಗಿದ ರೈತರು; ಮೂಕ ಪ್ರೇಕ್ಷಕರಂತೆ ನಿಂತ ಪೊಲೀಸರು!

ಇಂದು (ಜ.26) ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ನಡೆಯುತ್ತಿದೆ. ಸರ್ಕಾರಕ್ಕೆ ಸೆಡ್ಡು ಹೊಡೆದಿರುವ ರೈತರು ಇಂದು ಜನಗಣರಾಜ್ಯೋತ್ಸವನ್ನು ಆಚರಿಸುತ್ತಿದ್ದು, ದೇಶಾದ್ಯಂತ ಜನಗಣರಾಜ್ಯೋತ್ಸವಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ದೆಹಲಿಗಡಿಯಲ್ಲಿ ಹೋರಾಟನಿರತ ರೈತರು ಇಂದು ಟ್ರಾಕ್ಟರ್‌ ರ್‍ಯಾಲಿಗಳ ಮೂಲಕ ರೈತರ ಗಣರಾಜ್ಯೋತ್ಸೋವ ಪರೇಡ್‌ ನಡೆಸುತ್ತಿದ್ದಾರೆ.

ಈಗಾಗಲೇ ಟ್ರಾಕ್ಟರ್‌ ಪರೇಡ್ ಪ್ರಾರಂಭವಾಗಿದ್ದು, ದೆಹಲಿಯ ಸಿಂಘುಗಡಿಯಲ್ಲಿ ರೈತರ ಟ್ರಾಕ್ಟರ್‌ಗಳು ಸಾಲು ಸಾಲಾಗಿ ಮೆರವಣಿಗೆ ಹೊರಟಿವೆ. ರೈತರ ಪರೇಡ್‌ಅನ್ನು ಅನುಮತಿಸಿ ರೂಟ್‌ ಮ್ಯಾಪ್‌ಕೂಡ ಹಾಕಿಕೊಟ್ಟಿದ್ದ ಪೊಲೀಸರೇ, ಪರೇಡ್‌ ತಡೆಯಲು ಬೆಳ್ಳಂಬೆಳಗ್ಗೆಯೇ ಬ್ಯಾರಿಕೇಟ್‌ಗಳನ್ನು ರಸ್ತೆಗೆ ಅಡ್ಡಲಾಗಿ ಜೋಡಿಸಿದ್ದಾರೆ.

ಇದರಿಂದ ಸಿಟ್ಟಾಗಿರುವ ರೈತರು 12 ಗಂಟೆಗೆ ನಿಗದಿ ಮಾಡಿದ್ದ ರ್‍ಯಾಲಿಯನ್ನು 08 ಗಂಟೆಗೇ ಆರಂಭಿಸಿದ್ದಾರೆ. ಪೊಲೀಸರ ಬ್ಯಾರಿಕೇಡ್ ಭೇದಿಸಿ ಟ್ರಾಕ್ಟರ್‌ ರ್‍ಯಾಲಿ ಹೊರಟಿದ್ದಾರೆ. ಶಾಂತಿಯುತವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಎಡೆ ಮಾಡಿಕೊಡದೆ ಪರೇಡ್‌ ಆರಂಭವಾಗಿದೆ. ಸಾವಿರಾರು ಟ್ರಾಕ್ಟರ್‌ಗಳು ಇಂದು ದೆಹಲಿಯ ಐದು ಗಡಿಭಾಗಗಳಿಂದ ರಾಜಧಾನಿಯ ಸುತ್ತಲೂ ಇರುವ ಹೆದ್ದಾರಿಯಲ್ಲಿ ಪರೇಡ್‌ ನಡೆಸುತ್ತಿವೆ.

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದ್ದು, ನೂರಾರು ಟ್ರಾಕ್ಟರ್‌ಗಳು ನಿನ್ನೆ (ಸೋಮವಾರ) ರಾತ್ರಿ ದೆಹಲಿ ಗಡಿ ತಲುಪಿವೆ. ಕರ್ನಾಟಕದಿಂದಲೇ ನೂರಾರು ರೈತ-ಹೋರಾಟಗಾರರು ದೆಹಲಿ ಗಡಿಗೆ ತೆರಳಿದ್ದಾರೆ. ಇಂದಿನ ಗಣರಾಜ್ಯದ ಆಚರಣೆಯ ದಿನ ರೈತರು ಸರ್ಕಾರಕ್ಕೆ ತಮ್ಮ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.

ಕರ್ನಾಟಕದಲ್ಲಿಯೂ ರೈತರ ಟ್ರಾಕ್ಟರ್‌ ಪರೇಡ್‌ ನಡೆಯಲಿದೆ. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹಲವಾರು ರೈತ ಹೋರಾಟಗಳು ನಡೆಯುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್‌ ಟ್ರಾಕ್ಟರ್‌ ರ್‍ಯಾಲಿ ನಡೆಯಲಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಐದು ಹೆದ್ದಾರಿಗಳಿಂದ ಟ್ರಾಕ್ಟರ್‌ ರ್‍ಯಾಲಿ ಫ್ರೀಡಂ ಪಾರ್ಕ್‌ ಕಡೆಗೆ ಹೊರಡಲಿವೆ.

Read Also: ರೈತರಿಗೆ ಹೆದರಿದ ಸರ್ಕಾರ; ಉತ್ತರ ಪ್ರದೇಶದಲ್ಲಿ ಟ್ರಾಕ್ಟರ್‌ಗಳಿಗೆ ಡೀಸೆಲ್‌ ಹಾಕದಂತೆ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights