ಟ್ರ್ಯಾಕ್ಟರ್‌ ರ್ಯಾಲಿ ನಡೆದೇ ನಡೆಯುತ್ತದೆ; ಮುಂದಿನದು ಪೊಲೀಸರಿಗೆ ಬಿಟ್ಟಿದ್ದು: ನೂರ್‌ ಶ್ರೀಧರ್

ಜನವರಿ 26ರ ಗಣರಾಜ್ಯೋತ್ಸವದಂದು ದೇಶಾದ್ಯಂತ ಟ್ರ್ಯಾಕ್ಟರ್‌ ರ್ಯಾಲಿ ನಡೆಸಲು ದೆಹಲಿ ಗಡಿಯಲ್ಲಿರುವ ಹೋರಾಟ ನಿರತ ರೈತರು ಕರೆಕೊಟ್ಟಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರ್ಯಾಲಿಗೆ ಭರ್ಜರಿ ಸಿದ್ದತೆ ನಡೆದಿದೆ. ಅದರೆ, ರೈತರ ಟ್ರಾಕ್ಟರ್‌ಗಳನ್ನು ಮಾರ್ಗ ಮಧ್ಯದಲ್ಲೇ ಪೊಲೀಸರು ತಡೆಯುತ್ತಿದ್ದಾರೆ. ಏನೇ ಆಗಲೀ ನಾಳೆ ಬೆಂಗಳೂರಿಗೆ ಟ್ರಾಕ್ಟರ್‌ಗಳು ಬಂದೇ ಬರುತ್ತವೆ. ರ್ಯಾಲಿ ನಡೆದೇ ನಡೆಯುತ್ತದೆ ಎಂದು ಹೋರಾಟಗಾರ ನೂರ್‌ ಶ್ರೀಧರ್‌ ಹೇಳಿದ್ದಾರೆ.

ಪ್ರತಿಭಟನೆಯ ವಿಚಾರವಾಗಿ ಉನ್ನತ ಪೊಲೀಸ್‌ ಅಧಿಕಾರಿಗಳ ಜೊತೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಪ್ರತಿಭಟನೆಗೆ ಪೊಲೀಸರು ಒಪ್ಪಿದ್ದಾರೆ. ಸರ್ಕಾರಿ ಪರೇಡ್‌ ನಡೆದ ನಂತರ ರೈತರ ಪರೇಡ್‌ ನಡೆಯುತ್ತಿರುವುದರಿಂದಾಗಿ ತಮಗೆ ಯಾವುದೇ ಅಡಚಣೆಯಾಗುವುದಿಲ್ಲ. ರೈತರ ಪ್ರತಿಭಟನೆಗೆ ಹಳ್ಳಿಗಳಲ್ಲೂ-ಮಾರ್ಗ ಮಧ್ಯದಲ್ಲೂ- ಬೆಂಗಳೂರಿನಲ್ಲೂ ತೊಂದರೆ ಕೊಡುವುದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿರುವುದಾಗಿ ಹೇಳಿದ್ದಾರೆ.

ಆದರೆ, ಸರ್ಕಾರವೂ ಕೂಡ ಟ್ರಾಕ್ಟರ್‌ಗಳಿಗೆ ಅನುಮತಿ ನೀಡಬಾರದು ಎಂದು ಹೇಳಿದೆ. ಬೆಂಗಳೂರಿಗೆ ಟ್ರಾಕ್ಟರ್‌ಗಳನ್ನು ತರಲು ಅನುಮತಿ ಇಲ್ಲ. ಬೆಂಗಳೂರಿನಲ್ಲಿ ಟ್ರಾಕ್ಟರ್‌ ಸಂಚಾರವನ್ನು ಬ್ಯಾನ್‌ ಮಾಡಲಾಗಿದೆ. ಹಾಗಾಗಿ ಟ್ರಾಕ್ಟರ್‌ಗಳನ್ನು ತರಬಾರದು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಈ ವಾದ ಲಾಜಿಕಲ್‌ ಪಾಯಿಂಟ್‌ ಅಲ್ಲ. ಯಾಕೆಂದರೆ, ಟ್ರಾಕ್ಟರ್‌ಗಳನ್ನು ಸಾಮಾನ್ಯ ಸಂಚಾರ, ಸರಕು ಸಾಗಾಣಿಕೆಗೆ ನಗರದಲ್ಲಿ ಬಳಸಬಾರದು ಎಂಬುದನ್ನು ನಾವೂ ಒಪ್ಪುತ್ತೇವೆ. ಅದರೆ, ಟ್ರಾಕ್ಟರ್‌ಗಳು ರೈತ ಸಂಕೇತಗಳು. ವಿಶೇಷ ಉದ್ದೇಶಕ್ಕಾಗಿ ಟ್ರಾಕ್ಟರ್‌ಗಳನ್ನು ತರಲಾಗುತ್ತಿದೆ. ಹೋರಾಟಕ್ಕೆ ಟ್ರಾಕ್ಟರ್‌ ತರಬಾರದು ಎಂಬುದನ್ನು ಒಪ್ಪಲು ಸಾಧ್ಯವೇ ಇಲ್ಲ. ಆದರೂ, ನಾವು ಟ್ರಾಲಿಗಳನ್ನು ತರುತ್ತಿಲ್ಲ. ಎಂಜಿನ್‌ಗಳನ್ನು ಮಾತ್ರ ತರುತ್ತಿದ್ದು, ಇದನ್ನು ಪೊಲೀಸರು ತಡೆಯುವಂತಿಲ್ಲ ಎಂದು ನೂರ್‌ ಶ್ರೀಧರ್‌ ಹೇಳಿದ್ದಾರೆ.

ಅಲ್ಲದೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ರೈತರ ಟ್ರಾಕ್ಟರ್‌ ಪರೇಡ್‌ಗೆ ದೆಲ್ಲಿ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಪೊಲೀಸರೇ ರೂಟ್‌ ಮ್ಯಾಪ್‌ ಹಾಕಿಕೊಟ್ಟಿದ್ದಾರೆ. ಕೇಂದ್ರ ಸರ್ಕಾರವೇ ಒಪ್ಪಿದೆ. ಹೀಗಿರುವಾಗ ರಾಜ್ಯದಲ್ಲಿ ಅನುಮತಿ ಇಲ್ಲ ಎನ್ನುವುದನ್ನು ನಾವು ಒಪ್ಪುವುದಿಲ್ಲ. ನಾಳೆ ಟ್ರಾಕ್ಟರ್‌ಗಳು ಬಂದೇ ಬರುತ್ತವೆ. ಪರೇಡ್‌ ನಡೆದೇ ನಡೆಯುತ್ತೆ. ಮುಂದಿನದು ಪೊಲೀಸರಿಗೆ ಬಿಟ್ಟಿದ್ದು ಎಂದು ಅವರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights