ಮೋದಿ ಅಮೆರಿಕಾ ಭೇಟಿ: ಮೋದಿ ಎದುರೇ ಗಾಂಧಿ ತತ್ವಗಳನ್ನು ಸ್ಮರಿಸಿದ ಯುಎಸ್‌ ಅಧ್ಯಕ್ಷ ಬೈಡನ್!

ಜೋ ಬೈಡನ್‌ ಅವರು ಅಮೆರಿಕಾ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾಗೆ ಭೇಟಿ ನೀಡಿದ್ದಾರೆ. ಮೋದಿ ಮತ್ತು ಬೈಡನ್‌ ಭೇಟಿ ವೇಳೆ ಮಾತನಾಡಿರುವ ಬೈಡನ್‌ ಅವರು ಗಾಂಧಿ ತತ್ವದ ಅಗತ್ಯತೆಗಳನ್ನು ಸ್ಮರಿಸಿದ್ದಾರೆ.

“ಅಹಿಂಸೆ, ಸಹಿಷ್ಣುತೆ, ವೈವಿಧ್ಯತೆ” ಕುರಿತು ಮಾತನಾಡಿರುವ ಬೈಡನ್‌, “ಎರಡೂ ದೇಶಗಳು ಜೊತೆಯಾಗಿ ನಡೆದು ಗಟ್ಟಿಯಾಗಬೇಕಿದೆ” ಎಂದು ತಿಳಿಸಿದ್ದಾರೆ.

ಬೈಡನ್‌ ಅವರ ಹೇಳಿಕೆಯಿಂದಾಗಿ ಮೋದಿಯವರೊಂದಿಗೆ ಅಮೆರಿಕ ದೇಶವು ಪ್ರಜಾಪ್ರಭುತ್ವದ ಅಗತ್ಯತೆ ಕುರಿತು ಎರಡನೇ ಬಾರಿಗೆ ಸಾರ್ವಜನಿಕವಾಗಿ ಪ್ರಸ್ತಾಪಿಸಿದಂತಾಗಿದೆ. “ನಮ್ಮ ದೇಶಗಳಲ್ಲಿ ಪ್ರಜಾಪ್ರಭುತ್ವ ತತ್ವಗಳನ್ನು ಮತ್ತು ಸಂಸ್ಥೆಗಳನ್ನು ರಕ್ಷಿಸುವುದು ಅತ್ಯಗತ್ಯ” ಎಂದು ಗುರುವಾರ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹೇಳಿದ್ದರು.

ಭಾರತದಲ್ಲಿ ಮುಸ್ಲಿಂ ವಿರೋಧಿ ಧೋರಣೆಯ ಏರಿಕೆ ಮತ್ತು ಭಿನ್ನಾಭಿಪ್ರಾಯಗಳ ಮೇಲೆ ಕಡಿವಾಣ ಹಾಕುವ ಪ್ರವೃತ್ತಿಯ ಹಿನ್ನೆಲೆಯಲ್ಲಿ ವಿದೇಶಗಳು ತೋರುತ್ತಿರುವ ಕಾಳಜಿಯನ್ನು ಇಂತಹ ಬೆಳವಣಿಗೆಗಳು ತೋರುತ್ತವೆ.

“ಐತಿಹಾಸಿಕ ಭೇಟಿಯಲ್ಲಿ ಮಾನವ ಹಕ್ಕುಗಳ ಬಗ್ಗೆ ಮೋದಿಯವರಿಗೆ ಕಮಲಾ ಹ್ಯಾರೀಸ್‌ ಒತ್ತಿ ಹೇಳಿದರು” ಎಂದು ‘ಲಾಸ್‌ ಏಂಜೆಲ್ಸ್‌ ಟೈಮ್ಸ್‌’ನ ವರದಿಯ ತಲೆಬರಹವಿದೆ.

ಅಮೆರಿಕದ ನಾಯಕತ್ವ ಬದಲಾದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಬೈಡನ್‌ ಅವರು ಭಾರತದ ಪ್ರಧಾನಿ ಮೋದಿಯವರನ್ನು ವೈಟ್‌ ಹೌಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಭೇಟಿಯಾದರು. ಎರಡು ವರ್ಷಗಳ ಬಳಿಕ ಮೋದಿ ಅಮೆರಿಕಕ್ಕೆ ಭೇಟಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ಅಂದಿನ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ ಅವರನ್ನು ಹೌಸ್‌ ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಶುಕ್ರವಾರದ ಭೇಟಿಯಲ್ಲಿ ಎರಡೂ ದೇಶದ ನಾಯಕರು ಒಟ್ಟಿಗೆ ಮುನ್ನಡೆಯುವ ಮಾತುಕತೆ ನಡೆಸಿದರು.

“ಎರಡು ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಿಗೆ ಸಾಗಬೇಕಿದೆ. ಇದು ಇಡೀ ಜಗತ್ತಿಗೆ ಸಹಕಾರಿಯಾಗಲಿದೆ” ಎಂದು ಅವರು ಹೇಳಿದ್ದಾರೆ. ಕೋವಿಡ್‌‌ ಬಿಕ್ಕಟ್ಟನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಒಂದಾಗಿ ಎದುರಿಸುವ ಕುರಿತು ಮಾತನಾಡಿದರು.

ಕೋವಿಡ್‌-19, ಹವಾಮಾನ್ಯ ವೈಪರಿತ್ಯ, ಇಂಡೋ-ಫೆಸಿಪಿಕ್‌ ಇತ್ಯಾದಿ ವಿಷಯಗಳ ಕುರಿತು ಮಾತನಾಡಿದರು.

“ನಮ್ಮ ಪಾಲುದಾರಿಕೆ ನಾವು ಮಾಡಬೇಕೆಂದಿರುವುದಕ್ಕಿಂತ ಮಹತ್ವದ್ದಾಗಿದೆ. ನಾವು ಯಾರೆಂಬುದರ ಕುರಿತಾದ್ದಾಗಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು, ವೈವಿಧ್ಯತೆಯನ್ನು ಕಾಪಾಡುವ ಹೊಣೆಗಾರಿಯದ್ದಾಗಿದೆ. ಪ್ರತಿದಿನವೂ ಅಮೆರಿಕವನ್ನು ಬಲಿಷ್ಠ ಮಾಡುತ್ತಿರುವ 40 ಲಕ್ಷ ಅನಿವಾಸಿ ಭಾರತೀಯರೊಂದಿಗಿನ ಕೌಟುಂಬಿಕ ಬಾಂಧವ್ಯವಾಗಿದೆ” ಎಂದಿದ್ದಾರೆ.

ಸೌಹಾರ್ದತೆಯ ಅಗತ್ಯತೆಯ ಕುರಿತು ಹೇಳುತ್ತಾ ಮುಂದಿನ ವಾರ ಬರುವ ಗಾಂಧಿ ಜಯಂತಿಯನ್ನು ಬೈಡನ್‌ ಉಲ್ಲೇಖಿಸುತ್ತಾರೆ. “ಮುಂದಿನ ವಾರ ಇಡೀ ಜಗತ್ತು ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಗಾಂಧೀಜಿಯರ ಸಂದೇಶಗಳಾದ ಅಹಿಂಸೆ, ಗೌರವ, ಸಹಿಷ್ಣುತೆಯನ್ನು ನೆನೆಯುವುದು ಇಂದೆಂದಿಗಿಂತಲೂ ಇಂದು ಮುಖ್ಯವಾಗಿದೆ” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights