ಉತ್ತರಾಖಂಡ ಹಿಮಪ್ರವಾಹ : ಬದುಕುಳಿದಿರಬಹುದಾದ ಕಾರ್ಮಿಕರಿಗಾಗಿ ಮುಂದುವರೆದ ಶೋಧ!
ಹಿಮನದಿ ದುರಂತದ ಆರು ದಿನಗಳ ನಂತರವೂ ಬದುಕುಳಿದವರನ್ನು ಹುಡುಕುವ ಭರವಸೆ ನೀಡಿ ರಕ್ಷಣಾ ಸಿಬ್ಬಂದಿಗಳು ಉತ್ತರಾಖಂಡದ ತಪೋವನ್ನಲ್ಲಿ ಹಾನಿಗೊಳಗಾದ ಸುರಂಗದೊಳಗೆ ಕಲ್ಲುಮಣ್ಣುಗಳನ್ನು ಅಗೆಯುತ್ತಲೇ ಇದ್ದಾರೆ.
ಘಟನೆಯಲ್ಲಿ ಈವರೆಗೆ ಮೂವತ್ತಾರು ಶವಗಳು ಪತ್ತೆಯಾಗಿದ್ದು, 200 ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ತಪೋವನ್ನಲ್ಲಿನ ಎನ್ಟಿಪಿಸಿಯ ಜಲ ಯೋಜನೆಯ ಸ್ಥಳದಲ್ಲಿ ಕೇಂದ್ರ ಮತ್ತು ಏಜೆನ್ಸಿಗಳು ಕೈಗೊಳ್ಳುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸುವ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಹತ್ತಿರದ ಧೌಲಿಗಂಗಾ ನದಿಯಲ್ಲಿ ನೀರಿನ ಮಟ್ಟ ಮತ್ತೆ ಏರಿಕೆಯಾಗಲು ಪ್ರಾರಂಭಿಸಿದಾಗ ಗುರುವಾರ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಹಠಾತ್ ಪ್ರವಾಹದಿಂದ ಅಲ್ಲಿ ಸಂಗ್ರಹವಾಗಿರುವ ಹೂಳು ಮತ್ತು ಕೆಸರಿನ ದಿಬ್ಬಗಳನ್ನು ಸ್ಥಳಾಂತರಿಸುವ ಬದಲು, ಚಮೋಲಿ ಜಿಲ್ಲೆಯ ಸುರಂಗದಲ್ಲಿ ಗಟ್ಟಿಯಾದ ಭಗ್ನಾವಶೇಷಗಳನ್ನು ಕೊರೆದು ಅಲ್ಲಿ ಕಾರ್ಮಿಕರಿದ್ದರೆ ಅವರನ್ನು ಬದುಕುಳಿಸಲು ರಕ್ಷಣಾ ಪಡೆ ಕಾರ್ಯ ನಿರ್ವಹಿಸುತ್ತಿದೆ.
ಹೀಗಾಗಿ ಸುರಂಗಕ್ಕೆ ಆಮ್ಲಜನಕವನ್ನು ಪಂಪ್ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ಮತ್ತು ಸೈನ್ಯವು ಬಹು-ಏಜೆನ್ಸಿ ರಕ್ಷಣಾ ಪ್ರಯತ್ನದಲ್ಲಿ ತೊಡಗಿವೆ.
ಆದರೆ ಈವರೆಗೆ ತಮ್ಮವರನ್ನು ಪತ್ತೆಯಾಗದೇ ಕುಟುಂಬಸ್ಥರು ಕಂಗಾಲಾಗಿದ್ದಾರೆ. ರಕ್ಷಣಾ ಕಾರ್ಯ ತುರ್ತಾಗಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ತಪೋವನ್-ವಿಷ್ಣುಗಡ್ ಹೈಡಲ್ ವಿದ್ಯುತ್ ಯೋಜನೆಯ 2.5 ಕಿ.ಮೀ ಉದ್ದದ ಸುರಂಗಗಳಲ್ಲಿ ಕಳೆದ ಭಾನುವಾರ ಜನರು ಕೆಲಸ ಮಾಡುತ್ತಿದ್ದಾಗ ಹಿಮನದಿ ಒಡೆದು ಅಲಕಾನಂದ ನದಿ ಮತ್ತು ಅದರ ಉಪನದಿಗಳಲ್ಲಿ ಹಠಾತ್ ಪ್ರವಾಹ ಹೈಡಲ್ ಯೋಜನೆಗೆ ಅಪ್ಪಳಿಸಿದೆ. ಪ್ರವಾಹದ ಅಲೆಗೆ ಪ್ರಾಣಕಳೆದುಕೊಂಡವರ ಕೆಲ ಮೃತದೇಹ ಪತ್ತೆಯಾಗಿದ್ದು ಇನ್ನೂ ಹಲವಾರು ಕಾರ್ಮಿಕರು ಪತ್ತೆಯಾಗಿಲ್ಲ.

