TMC ಭ್ರಷ್ಟಾಚಾರ ಮಾಡಿದೆ ಎಂದು BJP ಸಾಬೀತುಪಡಿಸದಿದ್ದರೆ ಮೋದಿ ಸರ್ಕಾರ ರಾಜೀನಾಮೆ ನೀಡಬೇಕು: ಮಮತಾ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ವಾಕ್ಸಮರಗಳು ಹೆಚ್ಚಾಗಿದ್ದು, ಟಿಎಂಸಿ ಭ್ರಷ್ಟಾಚಾರ ನಡೆಸಿದೆ ಎಂದು ಬಿಜೆಪಿ ಅರೋಪಿಸುತ್ತಲೇ ಇದೆ. ಹೀಗಾಗಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನೀಡಲಾದ ಹಣವನ್ನು ಟಿಎಂಸಿ ದುರುಪಯೋಗ ಮಾಡಿಕೊಂಡಿದೆ ಎಂದು ಸಾಬೀತು ಪಡಿಸಲು ವಿಫಲವಾದರೆ, ಮೋದಿ ಸರ್ಕಾರ ರಾಜೀನಾಮೆ ನೀಡಬೇಕು ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಂಗಾಳದಲ್ಲಿ ಮುಂದಿನ ಎರಡು ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಟಿಎಂಸಿ ಪಕ್ಷದ ವಿರುದ್ದ ಬಿಜೆಪಿ ನಾಯಕರು ಆರೋಪಗಳನ್ನು ಮಾಡುತ್ತಿದ್ದಾರೆ. ಮಮತಾ ಸರ್ಕಾರವು ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ನೀಡಲಾದ ಅನುದಾನವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಬಿಜೆಪಿ ನಾಯಕರು ಚುನಾವಣಾ ಪ್ರಚಾರದ ಸಮಾವೇಶಗಳಲ್ಲಿ ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿದಿರುವ ಮಮತಾ ಬ್ಯಾನರ್ಜಿ, “ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಿಜೆಪಿ ಮುಖಂಡ ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಂತೆ ವರ್ತಿಸುತ್ತಿಲ್ಲ. ಅವರ ಭಾಷೆ ಮತ್ತು ನುಡಿಗಳು ದುರಹಂಕಾರದಿಂದ ಕೂಡಿವೆ. ಬಿಜೆಪಿಗರು ಟಿಎಂಸಿ ಭ್ರಷ್ಟವಾಗಿದೆ ಎಂದು ಹೇಳುತ್ತಲೇ ಇದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರುವುದು ಮೋದಿಯ ಹಣವಲ್ಲ, ಅದು ಸರ್ಕಾರದ ಹಣ. ಒಂದು ಸರ್ಕಾರದಿಂದ ಒನ್ನೊಂದು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ನೀವು (ಅಮಿತ್ಶಾ-ಮೋದಿ) ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ನೀವು ರಾಜೀನಾಮೆ ನೀಡಬೇಕಾಗುತ್ತದೆ” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಬಲ ಕಳೆದುಕೊಳ್ಳುತ್ತಿದ್ಯಾ TMC: ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಸೇರಿ ಹಲವರು BJPಗೆ ಸೇರ್ಪಡೆ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಮಾತನಾಡಲು ಶಾ ಅವರು ಪಶ್ಚಿಮ ಬಂಗಾಳಕ್ಕೆ ಬಂದಿದ್ದಾರೆ. ಆದರೆ ಅದನ್ನು ರಾಜ್ಯದಲ್ಲಿ ಜಾರಿಗೆ ತರಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದರು.
“ನಾವು ಯಾವಾಗಲೂ ಎಲ್ಲರನ್ನು ಪಶ್ಚಿಮ ಬಂಗಾಳಕ್ಕೆ ಸ್ವಾಗತಿಸುತ್ತೇವೆ. ಆದರೆ ಇಂದು ಅಮಿತ್ ಶಾ ಅವರು ನೀಡಿದ ಹೇಳಿಕೆಗಳು ಗೃಹ ಸಚಿವ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಘನತೆಯನ್ನು ಕಾಪಾಡಿಕೊಳ್ಳಬೇಕು. ಸೌಜನ್ಯವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ. ಇದು ಎರಡೂ ಕಡೆಯಿಂದಲೂ ಇರಬೇಕು” ಎಂದು ಮಮತಾ ಹೇಳಿದ್ದಾರೆ.
ಜನರನ್ನು ದಾರಿ ತಪ್ಪಿಸಲು ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಸುದ್ದಿ ಮತ್ತು ನಕಲಿ ವಿಡಿಯೋಗಳನ್ನು ಹರಡುತ್ತಿದೆ. ಯುಪಿ, ರಾಜಸ್ಥಾನ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಗೂಂಡಾಗಿರಿ ವ್ಯಾಪಿಸಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಅದು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
“ಬಂಗಾಳವು ಶಾಂತಿಯಿಂದ ಬದುಕಬೇಕು. ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅವಕಾಶ ನೀಡಬಾರದು. ಬಂಗಾಳದ ಗೌರವವನ್ನು ಕಾಪಾಡುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ಅವರು ಹೇಳಿದರು.
ವಿಧಾನಸಭಾ ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯದಲ್ಲಿ ನಡೆಯಲಿದೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮ-ಗಾಸಿಪ್: ಟ್ರಂಪ್-ಮೋದಿಯಂತಹ ಜನರು ಪ್ರಚಾರ ಪಡೆದುಕೊಂಡಿದ್ದು ಹೇಗೆ?

