ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿ; BJPಗಿಲ್ಲ ಅಧಿಕಾರ!
ಜಮ್ಮು ಕಾಶ್ಮೀರದಲ್ಲಿ ಡಿಡಿಸಿ (ಜಿಲ್ಲಾ ಅಭಿವೃದ್ದಿ ಸಮಿತಿ) ಚುನಾವಣೆ ನಡೆದಿದ್ದು, ಆರು ಕೌನ್ಸಿಲ್‌ಗಳಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಅತಂತ್ರ ಫಲಿತಾಂಶ ಕಂಡಿರುವ ಈ ಕೌನ್ಸಿಲ್‌ಗಳ ಅಧ್ಯಕ್ಷ ಸ್ಥಾನದ ಆಯ್ಕೆಗೆ ಕಾಂಗ್ರೆಸ್, ಎನ್‌ಸಿ ಮತ್ತು ಪಿಡಿಪಿ ಪಕ್ಷಗಳು ಮೈತ್ರಿಯ ಮೊರೆಹೋಗಿದ್ದು, ಬಿಜೆಪಿಯನ್ನು ಅಧಿಕಾರದಿಂದ ಹೊರಗಿಟ್ಟಿವೆ.
ಆರು ಡಿಡಿಸಿಗಳ ಪೈಕಿ, ನಾಲ್ಕು (ಪೂಂಚ್, ರಾಜೌರಿ, ಕಿಶ್ತ್ವಾರ್ ಮತ್ತು ರಾಂಬನ್) ಜಮ್ಮು ಪ್ರದೇಶದ ವ್ಯಾಪ್ತಿಗೆ ಬಂದರೆ, ಎರಡು ಬಂಡಿಪೋರಾ ಮತ್ತು ಬಾರಾಮುಲ್ಲಾ ಕಣಿವೆಗೆ ಸೇರಿವೆ. ಜಮ್ಮುವಿನ ನಾಲ್ಕು ಡಿಡಿಸಿಗಳ ಪೈಕಿ ಮೂರರಲ್ಲಿ ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿಯು ಆಡಳಿತ ರಚಿಸಲಿದೆ. ಕಿಶ್ತ್‌ವಾರ್‌ನಲ್ಲಿ ಎನ್‌ಸಿ 06, ಕಾಂಗ್ರೆಸ್ 03 ಸ್ಥಾನಗಳನ್ನು ಪಡೆದಿವೆ. ಅದೇ ರೀತಿ, ರಾಂಬನ್‌ನಲ್ಲಿ ಎನ್‌ಸಿ 6, ಕಾಂಗ್ರೆಸ್ 2 ಮತ್ತು ರಾಜೌರಿಯಲ್ಲಿ ಎನ್‌ಸಿ 5, ಕಾಂಗ್ರೆಸ್ 3 ಸ್ಥಾನಗಳನ್ನು ಪಡೆದಿದ್ದು, ಎರಡೂ ಪಕ್ಷಗಳ ಮೈತ್ರಿಯು ಆಡಳಿತ ರಚಿಸಲು ಅಗತ್ಯ ವಿರುದ್ದ ಬಹುಮತವನ್ನು ಹೊಂದಿವೆ.
ರಾಜೌರಿಯಲ್ಲಿ ಒಂದು ಸ್ಥಾನವನ್ನು ಗೆದ್ದಿರುವ ಪಿಡಿಪಿಯ ಬೆಂಬಲಕ್ಕೂ ಈ ಮೈತ್ರಿಕೂಟ ಸಿದ್ದವಾಗಿದೆ.
ಪೂಂಚ್ ಜಿಲ್ಲೆಯಲ್ಲಿ ಸ್ವತಂತ್ರರು 14 ಸ್ಥಾನಗಳಲ್ಲಿ ಎಂಟು ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ನಾಲ್ಕು ಮತ್ತು ಎನ್‌ಸಿ ಎರಡು ಸ್ಥಾನಗಳನ್ನು ಗೆದ್ದಿದೆ.
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಅಧಿಕಾರದಿಂದ ದೂರವಿಡಲು ಎನ್‌ಸಿ ಸೇರಿದ ಸಮಾನ ಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ಕೈಜೋಡಿಸಲಿದೆ ಎಂದು ಕಾಂಗ್ರೆಸ್ ವಕ್ತಾರ ರವೀಂದ್ರ ಶರ್ಮಾ ತಿಳಿಸಿದ್ದಾರೆ.
“ಪೂಂಚ್ ಜಿಲ್ಲೆಯ ಇಬ್ಬರು ಸ್ವತಂತ್ರರು ಕಾಂಗ್ರೆಸ್ ಮೂಲದವರು ಮತ್ತು ಜಿಲ್ಲೆಯಲ್ಲಿ ನಮ್ಮ ಶಕ್ತಿ ಆರು, ಮತ್ತು ಎನ್‌ಸಿಯ ಬೆಂಬಲದೊಂದಿಗೆ ನಾವು ಆಡಳಿತ ರಚಿಸಲು ಸಾಧ್ಯವಾಗುತ್ತದೆ. ನಮ್ಮ ಪಕ್ಷವು ಸ್ವತಂತ್ರರೊಂದಿಗೆ ಮಾತುಕತೆ ನಡೆಸುತ್ತಿದೆ” ಎಂದು ಶರ್ಮಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳ ಡಿಸ್ಟ್ರಿಕ್ಟ್ ಡೆವಲಪ್‌ಮೆಂಟ್ ಕೌನ್ಸಿಲ್(ಡಿಡಿಸಿ)ನ ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ’ಗುಪ್ಕರ್’ ಮೈತ್ರಿಕೂಟವು 10 ಕೌನ್ಸಿಲ್‌ಗಳಲ್ಲಿ ಬಹುಮತ ಪಡೆದು ಅಧಿಕಾರ ರಚಿಸಿದೆ. ಅಲ್ಲದೆ, ಬಿಜೆಪಿ 03 ಕೌನ್ಸಿಲ್‌ಗಳಲ್ಲಿ, ಕಾಂಗ್ರೆಸ್ 01ರಲ್ಲಿ ಬಹುಮತ ಪಡೆದಿದ್ದು, 06 ಕೌನ್ಸಿಲ್‌ಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಇವುಗಳಲ್ಲಿ ಕಾಂಗ್ರೆಸ್ ಎನ್‌ಸಿ ಮತ್ತು ಪಿಡಿಪಿ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾಗಿದೆ.
ಒಟ್ಟು 280 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗುಪ್ಕರ್ ಮೈತ್ರಿಕೂಟ 110 ಸ್ಥಾನಗಳನ್ನು ಗೆದ್ದಿದ್ದು, ಭರ್ಜರಿ ಗೆಲುವು ಸಾಧಿಸಿದೆ. ಕಾಶ್ಮೀರದಲ್ಲಿ ಹೊಸ ಪರ್ವ ಸೃಷ್ಟಿಸುತ್ತೇವೆ ಎಂದಿದ್ದ ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 27 ಸ್ಥಾನಗಳನ್ನೂ, ಸ್ವತಂತ್ರ್ಯ ಅಭ್ಯರ್ಥಿಗಳು 49 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ ಪುನರ್ ಸಂಘಟನೆ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ!

