ಬಂಗಾಳದಲ್ಲಿ BJP ಆಕ್ರಮಣ; ಗಂಟೆಗೆ 50 ಲಕ್ಷ ಮೆಸೇಜ್ ಕಳಿಸುವಂತೆ ಕಾರ್ಯಕರ್ತರಿಗೆ ಅಮಿತ್ ಶಾ ಸೂಚನೆ!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭಾರೀ ತಂತ್ರಗಳನ್ನು ಎಣೆಯುತ್ತಿರುವ ಬಿಜೆಪಿ ಸಾಮಾಜಿಕ ಜಾಲತಾಣದ ಮೂಲಕ ಮತದಾರರನ್ನು ತಲುಪಲು ಭಾರೀ ಯೋಜನೆ ರೂಪಿಸುತ್ತಿದೆ. ಇದರ ಭಾಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಗಂಟೆಗೆ 50 ಲಕ್ಷ ಸಂದೇಶಗಳನ್ನು ಜನರಿಗೆ ಕಳಿಸುವಂತೆ ರಾಜ್ಯದ ಐಟಿ ಸೆಲ್ ಕಾರ್ಯಕರ್ತರಿಗೆ ಅಮಿತ್ ಶಾ ಸೂಚಿಸಿದ್ದಾರೆ. ಮೋದಿ ಪ್ಯಾರಾ (ಮೋದಿ ಲೋಕಾಲಿಟಿ) ಎಂಬ ಹೊಸ ಆ್ಯಪ್ ಅನ್ನು ಉದ್ಘಾಟಿಸಿದ ಷಾ, 2 ಕೋಟಿ ಜನರ ಆ್ಯಪ್ ಮೂಲಕ ತಲುಪುವ ಗುರಿಯನ್ನು ಸೈಬರ್ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳುವಂತೆ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಕಂಟೆಂಟ್ ಕ್ರಿಯೇಟ್ ಮಾಡುವ, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ, ವಿಷಯವನ್ನು ರಾಜಕೀಯವಾಗಿ ವಿಶ್ಲೇಷಿಸುವ ಮತ್ತು ಜನರ ಪ್ರತಿಕ್ರಿಯೆಗಳನ್ನು ಅಧ್ಯಯನ ಮಾಡುವ ಚಟುವಟಿಕೆಗಳನ್ನು ಕೈಗೊಳ್ಳಲು ಬಂಗಾಳದ ಕೇಸರಿ ಪಡೆಯ ಸೈಬರ್ ಕಾರ್ಯಕರ್ತರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬೇಕು ಎಂದು ಅವರು ಹೇಳಿದ್ದಾರೆ.
ಬಂಗಾಳದಲ್ಲಿ ಸಾಮಾಜಿಕ ಜಾಲತಾಣದ ಮೂಲಕ 60 ಲಕ್ಷ ಜನರನ್ನು ತಲುಪುವ 40,000 ವಾಟ್ಸಾಪ್ ಗುಂಪುಗಳನ್ನು ಬಿಜೆಪಿ ಹೊಂದಿದೆ ಎಂದು ಹೇಳಲಾಗಿದೆ.
“ನೀವು ಕೇಂದ್ರದ ಯೋಜನೆಗಳನ್ನು ಮತ್ತು ಬಿಜೆಪಿಯ ಸಿದ್ಧಾಂತವನ್ನು ಬೂತ್ ಮಟ್ಟಕ್ಕೆ ಕೊಂಡೊಯ್ಯಬೇಕಾಗುತ್ತದೆ. ವಾಟ್ಸಾಪ್ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಚಿಟ್ಚಾಟ್ ಮಾಡುವ ಬದಲು ಬಿಜೆಪಿ ಕಂಟೆಂಟ್ಗಳನ್ನು ರವಾನಿಸುವ ಕೆಲಸ ಮಾಡುವುದರಲ್ಲಿ ನಿರತರಾಗಿ” ಎಂದು ಸೋಷಿಯಲ್ ಮೀಡಿಯಾ ಕಾರ್ಯಕರ್ತರಿಗೆ ಅಮಿತ್ ಶಾ ತಿಳಿಸಿದ್ದಾರೆ.
“ವಾಟ್ಸಾಪ್ನಲ್ಲಿ ಬಲವಾದ ನೆಟ್ವರ್ಕ್ ಅನ್ನು ನಿರ್ಮಿಸಬೇಕು. ಅದರ ಮೂಲಕ ನೀವು ಒಂದು ಗಂಟೆಯಲ್ಲಿ 50 ಲಕ್ಷ ಜನರಿಗೆ ಸಂದೇಶಗಳನ್ನು ಕಳಿಸಬಹುದು” ಎಂದು ಅವರು ಹೇಳಿದ್ದಾರೆ.
ಬಂಗಾಳದ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿದೆ. ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮ ಜಾಲವನ್ನು ನಕಲಿ ವಿಷಯಗಳನ್ನು ಪ್ರಸಾರ ಮಾಡಲು ಬಳಸುತ್ತಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಬಲ ಕಳೆದುಕೊಳ್ಳುತ್ತಿದ್ಯಾ TMC: ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಸೇರಿ ಹಲವರು BJPಗೆ ಸೇರ್ಪಡೆ

