ನಿಷ್ಟಾವಂತ ಉಪನ್ಯಾಸಕ ಕೆಎಂ‌ ವಾಸುದೇವರವರ ವರ್ಗಾವಣೆ; ಕಾಲೇಜು ವಿದ್ಯಾರ್ಥಿಗಳಿಂದ ವರ್ಗಾವಣೆ ರದ್ದತಿಗೆ ಮನವಿ!

ಸಾಕ್ಷಾಧಾರಗಳಿಲ್ಲದೆ ಮಾಡಲಾಗಿದ್ದ ಆರೋಪಗಳ ಮೇರೆಗೆ ವರ್ಗಾವಣೆ ಮಾಡಲಾಗಿರುವ ಶೀಳನೆರೆ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಎಂ.ವಾಸುದೇವ ಅವರ ವರ್ಗಾವಣೆ ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಕಾಲೇಜಿನ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಶೀಳನೆರೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಎಂ.ವಾಸುದೇವ ಮೇಲೆ ಸಾಕ್ಷಾಧಾರವಿಲ್ಲದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರ್ನಾಡ ಮುಡಿಪು ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆ ಮಾಡಲಾಗಿದೆ. ವಿಷಯ ತಿಳಿದ ಹಳೆಯ ವಿದ್ಯಾರ್ಥಿಗಳು ಮತ್ತು ಹಾಲಿ ವಿದ್ಯಾರ್ಥಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಭಾಗವಾಗಿ ಶೀಳನೆರೆಗೆ ತೆರಳಿದ್ದ ಜಿಲ್ಲಾಧಿಕಾರಿಗಳ ಮೂಲಕ ಪ್ರಾಥಮಿಕ ಮತ್ತುಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ.

’ವರ್ಗಾವಣೆಯ ವಿಚಾರದಲ್ಲಿ ವಿದ್ಯಾರ್ಥಿಗಳು, ಸ್ಥಳೀಯರು, ಹಳೆಯ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಗಣನೆಗೆ ತೆಗದುಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ. ಕೆ.ಎಂ.ವಾಸುದೇವ ಅವರು ಶೀಳನೆರೆಯ ಕಾಲೇಜಿಗೆ ಬಂದ ನಂತರ ಕಾಲೇಜು ಹಾಗೂ ವಿದ್ಯಾರ್ಥಿಗಳ ಸಾಮರ್ಥ್ಯಾಭಿವೃದ್ದಿಗಾಗಿ ಬಹಳಷ್ಟು ಶ್ರಮಿಸಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೆ.ಎಂ.ವಾಸುದೇವ ಅವರು ಈ ಕಾಲೇಜಿನ ಉಪನ್ಯಾಸಕರಾದಾಗಿನಿಂದ ಇಲ್ಲಿಯವರೆಗೂ ಪ್ರತಿ ಶೈಕ್ಷಣಿಕ ವರ್ಷದಲ್ಲಿಯು ಫಲಿತಾಂಶ ಉತ್ತಮ ರೀತಿಯಲ್ಲಿದೆ. ಅಲ್ಲದೆ, ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದಲ್ಲಿ, ವಿಶೇಷವಾಗಿ ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳ ಕಲಿಕೆ ಬಹಳಷ್ಟು ಸುಧಾರಿಸಿದೆ. ಸಮಯವನ್ನು ಲೆಕ್ಕಿಸದೆ ವಿದ್ಯಾರ್ಥಿಗಳಿಗೆ ಭೋಧನೆಯನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಬಿಡುವಿನ ಸಮಯವನ್ನೂ ಕೂಡ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗಾಗಿ ಮೀಸಲಿಟ್ಟು, ದುಡಿದಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಇನ್ನು, ಕೆ.ಆರ್.ಪೇಟೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ (ಶತಮಾನದ ಶಾಲೆ)ಯನ್ನು ಅಭಿವೃದ್ಧಿಗೊಳಿಸಲು ಕೆ.ಎಂ.ವಾಸುದೇವ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ, ಅದೇ ಶಾಲೆಗೆ ತಮ್ಮ ಮಗನಾದ ಬುದ್ದದಾಸ್ ಅವರನ್ನು ಸೇರಿಸಿದ್ದು, ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದಾರೆ. ಶೀಳನೆರೆಯಲ್ಲಿರುವ ಸರ್ಕಾರಿ ಪ್ರಥಾಮಿಕ ಶಾಲೆಯಲ್ಲಿ ಮಕ್ಕಳ ಮನೆ ( ಎಲ್.ಕೆ.ಜಿ. & ಯು.ಕೆ.ಜಿ) ತರಗತಿಗಳನ್ನ ತೆರೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಅವರ ಸೇವೆಯನ್ನು ಸಹಿಸದ ಕೆಲವು ತಿಳಿಗೇಡಿ-ಭ್ರಷ್ಟ ವ್ಯಕ್ತಿಗಳು ವಾಸುದೇವ ಅವರ ವಿರುದ್ಧ ಪದೇ-ಪದೇ ಮೂಗರ್ಜಿಗಳನ್ನು ಬರೆದಿದ್ದಾರೆ. ಯಾರೋ ಒಬ್ಬರು ದುರುದ್ದೇಶಗಳಿಂದ ಬರೆದ ಅರ್ಜಿಗೆ ಸಂಬಂಧಿಸಿದಂತೆ ಕಾಲೇಜಿನಿಂದಾಗಲಿ, ವಿದ್ಯಾರ್ಥಿಗಳಿಂದಾಗಲಿ ಅಥವಾ ಗ್ರಾಮಸ್ಥರಿಂದಾಗಲಿ ಮಾಹಿತಿಗಳನ್ನು ಪಡೆಯದೆ, ಸಮರ್ಪಕ ವಿಚಾರಣೆ ನಡೆಸದೆ ಕ್ರಮ ವಹಿಸಿರುವುದು ನಮಗೆಲ್ಲ ನೋವುಂಟುಮಾಡಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಅಲ್ಲದೆ, ಇತ್ತೀಚಿಗೆ ಸರ್ಕಾರಿ ಗ್ರಾಮೀಣ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿರುವ ಈ ಸಂಧರ್ಭದಲ್ಲಿ ಕೆ.ಎಂ. ವಾಸುದೇವ ಅವರು ನಮ್ಮೂರಿನಿಂದ ವರ್ಗಾಗೊಂಡರೆ, ಉಪನ್ಯಾಸಕರಿಲ್ಲದ ಕಾರಣ ಈ ನಮ್ಮ ಕಾಲೇಜು ಕೂಡ ಮುಂದಿನ ವರ್ಷಗಳಲ್ಲಿ ಮುಚ್ಚುವ ಸ್ಥಿತಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ಒಬ್ಬ ಉತ್ತಮ ಉಪನ್ಯಾಸಕ ವಾಸುದೇವ ಅವರನ್ನು ಯಾವುದೋ ಒಂದು ಅನಗತ್ಯ ಆರೋಪದ ಮೇಲೆ ವರ್ಗಾವಣೆ ಮಾಡಿರುವುದು ಸರ್ಕಾರದ ತಪ್ಪು ನಡೆಯಾಗಿದ್ದು, ಅವರ ವರ್ಗಾವಣೆಯನ್ನು ರದ್ದುಪಡಿಸಿ, ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯೇ ಸೇವೆಯನ್ನು ಮುಂದುವರೆಸಲು ಅನುವು ಮಾಡಿಕೊಡಬೇಕೆಂದು ನಾವು ಕೇಳಿಕೊಳ್ಳುತ್ತಿದ್ದೇವೆ ಎಂದು ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಆಂದೋಲನ್‌ಜೀವಿ ಆಗಿದ್ದ ಮೋದಿ ಈಗ ಅಂಬಾನಿಜೀವಿ ಆಗಿದ್ದಾರೆ; ಅಂಬಾನಿಗಾಗಿ ಪೆಟ್ರೋಲ್ ಬೆಲೆ 100 ರೂ.ಗೆ ಏರಿಸಿದ್ದಾರೆ: ಕಾಂಗ್ರೆಸ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights