ಮಮತಾ ಬ್ಯಾನರ್ಜಿ ಕಾಲಿಗೆ ಪೆಟ್ಟು: ಭದ್ರತಾ ನಿರ್ದೇಶಕ-ಪೊಲೀಸ್ ವರಿಷ್ಠಾಧಿಕಾರಿ ಅಮಾನತು; ಜಿಲ್ಲಾಧಿಕಾರಿ ವರ್ಗಾ!
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಪೆಟ್ಟಾಗಿರುವ ಹಿನ್ನೆಲೆಯಲ್ಲಿ, ಈ ಘಟನೆಗೆ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯವೂ ಕಾರಣ ಎಂದು ಹೇಳಾಗಿದ್ದು, ಘಟನೆ ಸಂಬಂಧ ಭದ್ರತಾ ನಿರ್ದೇಶಕ ವಿವೇಕ್ ಸಹಯ್ ಮತ್ತು ಪುರ್ಬಾ ಮೆದಿನಿಪುರದ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪ್ರಕಾಶ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವಿಭು ಗೋಯೆಲ್ ಅವರನ್ನು ಕೂಡ ಹುದ್ದೆಯಿಂದ ತೆರವುಗೊಳಿಸಲಾಗಿದ್ದು, ಚುನಾವಣೇತರ ಹುದ್ದೆಗೆ ವರ್ಗಾಯಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಮಾರ್ಚ್ 10 ರಂದು ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮಕ್ಕೆ ತೆರಳಿದ್ದ ವೇಳೆ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಅವರ ಕಾಲಿಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ವರದಿ ಮತ್ತು ವಿಶೇಷ ಸಾಮಾನ್ಯ ವೀಕ್ಷಕರಾದ ಅಜಯ್ ನಾಯಕ್ ಮತ್ತು ವಿವೇಕ್ ಡ್ಯೂಬ್ ಅವರ ಜಂಟಿ ವರದಿಯನ್ನು ಆಧರಿಸಿ ಚುನಾವಣಾ ಆಯೋಗ ಈ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 10ರಂದು ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರು ನಾಮಪತ್ರ ಸಲ್ಲಿಸಿದ ನಂತರ ಚುನಾವಣಾ ಪ್ರಚಾರದ ಸಮಯದಲ್ಲಿ ಕೆಲವು ಅಪರಿಚಿತ ಜನರು ತಳ್ಳಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಎಸ್ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಆಂಧ್ರ ಸ್ಥಳೀಯ ಚುನಾವಣೆ: ಅಷ್ಟೂ ಸಂಸ್ಥೆಗಳಲ್ಲಿ YSR ಕಾಂಗ್ರೆಸ್ ಭರ್ಜರಿ ಗೆಲುವು; ಲಿಸ್ಟ್‌ಯಿಂದ ಕಾಣೆಯಾದ BJP-ಕಾಂಗ್ರೆಸ್!

