ಅತ್ಯಾಚಾರ ಆರೋಪಿ ಮತ್ತು ಸಂತ್ರಸ್ತೆಯನ್ನು ಒಟ್ಟಿಗೆ ಕಟ್ಟಿ ಮೆರವಣಿಗೆ: 06 ಮಂದಿ ಬಂಧನ
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಹಾಗೂ ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಬಾಲಕಿಯನ್ನು ಜೊತೆಯಲ್ಲಿಯೇ ಕಟ್ಟಿಹಾಕಿ ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ರಾಜ್ಯದ ಅಲಿರಾಜ್ಪುರ ಗ್ರಾಮದಲ್ಲಿ ಹದಿನಾರು ವರ್ಷದ ಬಾಲಕಿಯ ಮೇಲೆ 21 ವರ್ಷದ ಯುವಕ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಹಗ್ಗದಲ್ಲಿ ಕಟ್ಟಿ, ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಘಟನೆ ಸಂಬಂಧ ಅತ್ಯಾಚಾರ ಆರೋಪಿ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, ಬಾಲಕಿಯನ್ನು ರಕ್ಷಿಸಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಉಪವಿಭಾಗ ಪೊಲೀಸ್ ಅಧಿಕಾರಿ ದಿಲೀಪ್ ಸಿಂಗ್ ಬಿಲ್ವಾಲ್ ತಿಳಿಸಿದ್ದಾರೆ.
ಆರೋಪಿ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡಸಂಹಿತೆ ಮತ್ತು ಪೋಕ್ಸೋ ಕಾಯ್ದೆ ಅನ್ವಯ ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿ ಯುವಕ ವಿವಾಹಿತನಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ.
ಸಂತ್ರಸ್ತೆಯನ್ನು ಹೊಡೆದು ಮೆರವಣಿಗೆ ಮಾಡಿದ್ದಕ್ಕಾಗಿ ಸಂತ್ರಸ್ತೆಯ ಕುಟುಂಬದವರು ಮತ್ತು ಗ್ರಾಮಸ್ಥರ ವಿರುದ್ಧವೂ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಸಂತ್ರಸ್ತೆಯ ಕುಟುಂಬದವರು ಮತ್ತು ಸಂಬಂಧಿಕರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 294 (ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಕ್ರಮ), 355 (ಹಲ್ಲೆ ಅಥವಾ ವ್ಯಕ್ತಿಯ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಅಪರಾಧ ಬಲಪ್ರಯೋಗ), 323 (ಘಾಸಿಗೊಳಿಸಿರುವುದು) ಮತ್ತು 342 (ಅಕ್ರಮವಾಗಿ ಕೂಡಿಹಾಕಿದ್ದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಮೇಲೆ ಗ್ಯಾಂಗ್ರೇಪ್; ಸಂಬಂಧಿಕರನ್ನೇ ಅತ್ಯಾಚಾರ ಎಸಗಲು ಬೆದರಿಕೆ; ರಣರಂಗವಾಗಿದೆ ಇಥಿಯೋಪಿಯಾ

