ಮುಸ್ಲಿಂ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಬರ್ಬರ ಕೊಲೆ: ನ್ಯಾಯಕ್ಕಾಗಿ ತಾಯಿಯ ಆಕ್ರಂದನ

ಎರಡು ದಿನಗಳಿಂದ ಕಾಣೆಯಾಗಿದ್ದ ಮುಸ್ಲಿಂ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯನ್ನು ಕಾಮುಕರು ಅಪಹರಿಸಿ, ಅತ್ಯಾಚಾರಗೈದು, ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್‌ ಮತ್ತು ಪೋಸ್ಟ್‌ಮಾರ್ಟ್‌ಂ ವರದಿಗಳು ದೃಢಪಡಿಸಿವೆ.

ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಂತ್‌ನಲ್ಲಿ ಘಟನೆ ನಡೆದಿದ್ದು, ಅಲ್ಲಿನ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಡಿಸೆಂಬರ್ 22 ರಂದು ಬಾಲಕಿ ತನ್ನ ಮನೆಯ ಹೊರಗೆ ಆಟವಾಡಲು ಹೋಗಿದ್ದವಳು. ಮರಳಿ ಮನೆಗೆ ಹಿಂದಿರುಗಿರಲಿಲ್ಲ. ಬಾಲಕಿ ಕಾಣಿಸದಿದ್ದಾಗ ಆಕೆಯ ಕುಟುಂಬದವರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಆಕೆ ಸಿಗದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರ ಎರಡು ತಂಡಗಳು ಶೋಧ ಕಾರ್ಯ ನಡೆಸಿದ್ದರೂ ಬಾಲಕಿ ಪತ್ತೆಯಾಗಿರಲಿಲ್ಲ. ಡಿಸೆಂಬರ್ 24 ರಂದು ಆಕೆಯ ನಿವಾಸದಿಂದ ಎರಡು ಕಿಲೋಮೀಟರ್ ದೂರದಲ್ಲಿದ್ದ ಕಬ್ಬಿನ ಗದ್ದೆಯಲ್ಲಿ ಆಕೆಯ ಶವ ಪತ್ತೆಯಾಗಿದೆ.

ಐಪಿಸಿ ಮತ್ತು ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರ, ಅಪಹರಣ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. “ನಮ್ಮ ತಂಡಗಳು ತನಿಖೆಯನ್ನು ಪೂರ್ಣಗೊಳಿಸಿವೆ ಮತ್ತು ಶೀಘ್ರದಲ್ಲೇ ಅಪರಾಧಿಗಳನ್ನು ಬಂಧಿಸಲಾಗುತ್ತದೆ” ಎಂದು ಕಾಂತ ವೃತ್ತ ಸರ್ಕಲ್ ಅಧಿಕಾರಿ ಮಹೇಶ್ ಗೌತಮ್ ತಿಳಿಸಿದ್ದಾರೆ.

“ನಾನು ನನ್ನ ಮಗಳಿಗಾಗಿ ಎಲ್ಲೆಡೆ ಹುಡುಕಿದೆ. ಆದರೆ ಆಕೆ ಪತ್ತೆಯಾಗಲಿಲ್ಲ. ಎರಡು ದಿನಗಳ ಬಳಿಕ ಅವಳ ಮೃತ ದೇಹವು ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ ಎಂದು ನನಗೆ ತಿಳಿಯಿತು. ನನ್ನ ಮಗಳಿಗೆ ನ್ಯಾಯ ಬೇಕು” ಎಂದು ಸಂತ್ರಸ್ತೆಯ ಅಸಹಾಯಕ ತಾಯಿ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮೊರಾದಾಬಾದ್ ಸಂಸದ ಡಾ.ಎಸ್.ಟಿ.ಹಸನ್, ಅಖಿಲ ಭಾರತ ಅಲ್ಪಸಂಖ್ಯಾತರ ಕಾಂಗ್ರೆಸ್‌ನ ಸಂಯೋಜಕ ಅಹ್ಮದ್ ಖಾನ್ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಸ್ಲಂ ಖುರ್ಷೀದ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಕೃತ್ಯದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಶೀಘ್ರ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಶಾಲೆಯ ದಲಿತ ಅಡುಗೆ ಮಹಿಳೆ ವಜಾ: ಮಧ್ಯಾಹ್ನದ ಊಟ ನಿರಾಕರಿಸಿದ ದಲಿತ ವಿದ್ಯಾರ್ಥಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights