ಬಿಜೆಪಿ ಕಚೇರಿ ಎದುರು ಪ್ರತಿಭಟನೆ: 10 ವಿದ್ಯಾರ್ಥಿಗಳನ್ನು 4 ದಿನ ಜೈಲಿನಲ್ಲಿಟ್ಟ ಪೊಲೀಸರು!
ಸರ್ಕಾರಿ ಮುಖ್ಯ ಗುಮಾಸ್ತರ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕನಿಷ್ಠ ಹತ್ತು ವಿದ್ಯಾರ್ಥಿಗಳನ್ನು ನಾಲ್ಕು ದಿನಗಳ ಕಾಲ ಪೊಲೀಸರು ಜೈಲಿನಲ್ಲಿಟ್ಟ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಪರೀಕ್ಷಾ ಪತ್ರಿಕೆ ಸೋರಿಕೆ ಆರೋಪದ ವಿರುದ್ಧ ವಿದ್ಯಾರ್ಥಿಗಳು ಅಹಮದಾಬಾದ್‌ನ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಬರಮತಿ ಕೇಂದ್ರ ಕಾರಾಗೃಹದಲ್ಲಿ ನಾಲ್ಕು ದಿನಗಳ ಕಾಲ ಇರಿಸಲಾಗಿತ್ತು.
ಆಮ್ ಆದ್ಮಿ ಪಕ್ಷದ ನಾಯಕರು ಮತ್ತು ನ್ಯಾಯಾಲಯದ ದಾಖಲೆಗಳ ಪ್ರಕಾರ, ಅಹಮದಾಬಾದ್‌ನ ಜೈಲಿನಲ್ಲಿರುವ 93 ಎಎಪಿ ಸದಸ್ಯರಲ್ಲಿ ಹತ್ತು ವಿದ್ಯಾರ್ಥಿಗಳು ಸೇರಿದ್ದಾರೆ.
ಎಲ್ಲಾ ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಕ್ರಿಮಿನಲ್ ಪಿತೂರಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಸೆಕ್ಷನ್‌ಗಳು ಸೇರಿದಂತೆ 22 ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವರದಿಯ ಪ್ರಕಾರ, ಹತ್ತು ವಿದ್ಯಾರ್ಥಿಗಳಲ್ಲಿ ಆರು ಮಂದಿ 18 ರಿಂದ 19 ವರ್ಷದೊಳಗಿನವರು. ನಾಲ್ವರು 19 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಇವರೆಲ್ಲರೂ ಎಎಪಿಯ ವಿದ್ಯಾರ್ಥಿ ವಿಭಾಗ – ಛಾತ್ರ ಯುವ ಸಂಘರ್ಷ ಸಮಿತಿ (ಸಿವೈಎಸ್ಎಸ್) ಸದಸ್ಯರಾಗಿದ್ದಾರೆ.
ಇದನ್ನೂ ಓದಿ; ಶಾಲೆಯ ದಲಿತ ಅಡುಗೆ ಮಹಿಳೆ ವಜಾ: ಮಧ್ಯಾಹ್ನದ ಊಟ ನಿರಾಕರಿಸಿದ ದಲಿತ ವಿದ್ಯಾರ್ಥಿಗಳು!
ಗುಜರಾತ್‌ನಲ್ಲಿ ಡಿಸೆಂಬರ್ 12 ರಂದು ಸರ್ಕಾರಿ ಮುಖ್ಯ ಗುಮಾಸ್ತರ ನೇಮಕಾತಿಗಾಗಿ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಒಟ್ಟು 18 ಜನರನ್ನು ಬಂಧಿಸಲಾಗಿದೆ. ಗುಜರಾತ್‌ನ ಸಬರಕಾಂತ ಪೊಲೀಸರು ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಇನ್ನೂ ನಾಲ್ವರನ್ನು ಬುಧವಾರ ಬಂಧಿಸಿದ್ದಾರೆ. ಬುಧವಾರ ಬಂಧಿಸಲ್ಪಟ್ಟವರನ್ನು ದಾನಾಭಾಯಿ ದಂಗರ್, ಕೆಯೂರ್ ಪಟೇಲ್, ಕೃಪಾಲಿ ಪಟೇಲ್ ಮತ್ತು ಹಿಮಾನಿ ದೇಸಾಯಿ ಎಂದು ಗುರುತಿಸಲಾಗಿದೆ.
ಅಲ್ಲದೆ, ಈಗಾಗಲೇ ಬಂಧಿತರಾಗಿರುವ ಪ್ರಮುಖ ಆರೋಪಿಗಳನ್ನು ಜಯೇಶ್ ಪಟೇಲ್ ಮತ್ತು ಆತನ ಸಹಾಯಕ ದೀಪಕ್ ಪಟೇಲ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 78.46 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಬರಕಾಂತ ಜಿಲ್ಲಾ ಎಸ್‌ಪಿ ನೀರಜ್ ಬದ್ಗುಜಾರ್ ತಿಳಿಸಿದ್ದಾರೆ.
186 ಮುಖ್ಯ ಗುಮಾಸ್ತರ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ಡಿಸೆಂಬರ್ 12 ರಂದು ಗುಜರಾತ್‌ನಾದ್ಯಂತ ಗುಜರಾತ್ ಅಧೀನ ಸೇವಾ ಆಯ್ಕೆ ಮಂಡಳಿ (GSSSB) ನಡೆಸಿದೆ. ಸುಮಾರು 88,000 ಆಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ನಂತರ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಬೆಳಕಿಗೆ ಬಂದ ನಂತರ, ಸಬರಕಾಂತ ಜಿಲ್ಲೆಯ ಪ್ರಂತಿಜ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ವಂಚನೆ (420), ಕ್ರಿಮಿನಲ್ ನಂಬಿಕೆ ಉಲ್ಲಂಘನೆ (409) ಮತ್ತು ಕ್ರಿಮಿನಲ್ ಪಿತೂರಿ (120-ಬಿ) ಎಫ್‌ಐಆರ್ ಅನ್ನು ದಾಖಲಿಸಲಾಗಿದೆ.
ಪ್ರಂತಿಜ್ ತಾಲೂಕಿನ ಉಂಚಾ ಗ್ರಾಮದವರಾದ ಜಯೇಶ್ ಪಟೇಲ್ ಮತ್ತು ಇತರ ಆರೋಪಿಗಳು ಪ್ರಿಂಟಿಂಗ್ ಪ್ರೆಸ್‌ನ ಮೇಲ್ವಿಚಾರಕರಿಂದ ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡು ವಿವಿಧ ಸ್ಥಳಗಳಲ್ಲಿ 15 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಇದುವರೆಗೆ ತಿಳಿದುಬಂದಿದೆ.
ಇದನ್ನೂ ಓದಿ; ಚಂಡೀಗಢ ಪಾಲಿಕೆ ಚುನಾವಣೆ: ಹೆಚ್ಚು ಸ್ಥಾನ ಗೆದ್ದ ಎಎಪಿ; ಅಧಿಕಾರ ಕಳೆದುಕೊಂಡ ಬಿಜೆಪಿ!