ಮಮತಾ-ಸುವೆಂದು ಫೈಟ್: ಮತದಾನಕ್ಕಾಗಿ ನಂದಿಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಇಡೀ ದೇಶದ ಚಿತ್ತ ನಂದಿಗ್ರಾಮ ಕ್ಷೇತ್ರದತ್ತ ನೆಟ್ಟಿದೆ. ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಆಪ್ತನಾಗಿದ್ದು, ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಈ ಕ್ಷೇತ್ರದಲ್ಲಿ ಮುಖಾಮುಖಿಯಾಗಿ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತಮ್ಮ ಟಿಎಂಸಿ ಬೆಂಬಲಿಗರ ನಡುವೆ ಹಿಂಸಾಚಾರ ನಡೆಯಬಹುದಾದ ಸಾಧ್ಯತೆಗಳಿದ್ದು, ನಂದಿಗ್ರಾಮ ಕ್ಷೇತ್ರದಾದ್ಯಂತ ಸಿಆರ್ಪಿಸಿ ಸೆಕ್ಷನ್ 144 ಅಡಿಯಲ್ಲಿ ಚುನಾವಣಾ ಆಯೋಗವು ನಿಷೇಧಾಜ್ಞೆ ಜಾರಿಗೊಳಿಸಿದೆ.
ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಏಪ್ರಿಲ್ 01ರಂದು ನಡೆಯಲಿದೆ. ನಂದಿಗ್ರಾಮದಲ್ಲೂ ನಾಳೆ (ಗುರುವಾರ) ಚುನಾವಣೆ ನಡೆಯಲಿದ್ದು, ಕ್ಷೇತ್ರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮತದಾನದ ವೇಳೆ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ನೋಡಿಕೊಳ್ಳಲು ಹಾಗೂ ಜನರು ಭಯವಿಲ್ಲದೆ ಮುಕ್ತ ವಾತಾವರಣದಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂದು ಸಂಜೆಯಿಂದಲೇ ನಿಷೇಧಾಜ್ಞಷೆ ಜಾರಿಗೆ ಬಂದಿದ್ದು, ಶುಕ್ರವಾರ ತಡರಾತ್ರಿಯವರೆಗೂ ಮುಂದುವರಿಯಲಿದೆ. ಈ ವೇಳೆ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರವ್ಯಾಪ್ತಿಗೆ ಪ್ರವೇಶಸುವುದನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐದು ಅಥವಾ ಹೆಚ್ಚಿನ ವ್ಯಕ್ತಿಗಳ ಗುಂಪು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಒಟ್ಟು 355 ಮತದಾನ ಕೇಂದ್ರಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಕೇಂದ್ರ ಪಡೆಗಳ 22 ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. ರಾಜ್ಯದ ಪೊಲೀಸರೊಂದಿಗೆ ಕೇಂದ್ರ ಪಡೆಗಳು ಈಗಾಗಲೇ ಪ್ರದೇಶದ ಪ್ರಮುಖ ಜಂಕ್ಷನ್ಗಳಲ್ಲಿ ತಪಾಸಣೆ ಪ್ರಾರಂಭಿಸಿವೆ ಎಂದು ಅವರು ಹೇಳಿದ್ದಾರೆ.
ವಾಹನಗಳನ್ನು ನಂದಿಗ್ರಾಮ ಪ್ರವೇಶಿಸಲು ಅನುಮತಿಸುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಹೊರಗಿನ ಯಾವುದೇ ವಾಹನಗಳು ಒಳಗೆ ಬರಲು ಅನುಮತಿ ನೀಡುವುದಿಲ್ಲ. ಯಾರಾದರೂ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣಾ ಪ್ರೋಮೋದಲ್ಲಿ ಶ್ರೀನಿಧಿ ಚಿದಂಬರಂ ಅವರ ವಿಡಿಯೋ ಬಳಿಸಿಕೊಂಡ ಬಿಜೆಪಿ; ಜಾಲತಾಣದಲ್ಲಿ ಟ್ರೋಲ್!

