ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಸಾಧ್ಯತೆ ತೀರಾ ಕಮ್ಮಿ – ಯಾಕೆ ಗೊತ್ತಾ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಗ್ಗಿಲ್ಲದೇ ಕೊರೊನಾ ಸೋಂಕು ಹರಡುತ್ತಿದೆ. ದಿನವೊಂದಕ್ಕೆ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗುತ್ತಿರುವುದು ಆತಂಕವನ್ನು ಹೆಚ್ಚಿಸುತ್ತಿದೆ.
ನಿನ್ನೆ 5500 ಸೋಂಕಿತರ ಸಂಖ್ಯೆ ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿದ್ದು, ಈ ಸಂಖ್ಯೆ ಇಂದಿಗೆ 7061ಕ್ಕೇರಿಕೆಯಾಗುವ ಸಾಧ್ಯತೆ ಇದೆ. ಮಾತ್ರವಲ್ಲದೇ ಸಾವಿನ ಸಂಖ್ಯೆಯೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಹೀಗಾಗಿ ರಾಜ್ಯದಲ್ಲಿ ಮತ್ತೆ ಜಾರಿಗೆ ಬರುತ್ತಾ? ಅನ್ನೋ ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್ಲ. ಯಾಕೆಂದರೆ ಕೊರೊನಾ ಹೆಚ್ಚಾಗುತ್ತಿದ್ದರೂ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡುವುದಿಲ್ಲ ಎನ್ನುವ ಮಾತನ್ನ ಒತ್ತಿ ಒತ್ತಿ ಹೇಳುತ್ತಿದೆ. ಆದರೆ ಸರ್ಕಾರ ಈ ರೀತಿ ಹೇಳುವುದರ ಹಿಂದಿರುವ ಉದ್ದೇಶ ಉಪಚುನಾವಣೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಮಾತಿಗೆ ಪುಷ್ಟಿ ನೀಡುವಂತೆ ಸರ್ವಪಕ್ಷಗಳ ಸಭೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಇದೇ ಭಾನುವಾರದಂದು (ಏಪ್ರಿಲ್ 18) ಕರೆದಿದ್ದಾರೆ. ಏಪ್ರಿಲ್ 17ಕ್ಕೆ ಉಪ ಚುನಾವಣೆಯ ಮತದಾನ ನಡೆಯಲಿದೆ. “ಸರ್ವಪಕ್ಷಗಳ ಸಭೆಗೆ ವಿರೋಧ ಪಕ್ಷದವರನ್ನು ಆಹ್ವಾನಿಸಿದ್ದೇನೆ, ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ” ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.
ಸದ್ಯ, ರಾಜ್ಯದೆಲ್ಲಡೆ ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಬಿಸಿ ಚರ್ಚೆಯ ವಿಷಯ ಏನಂದರೆ ಅದು ಲಾಕ್ ಡೌನ್. ಬೆಂಗಳೂರು ಸಂಪೂರ್ಣ ಲಾಕ್ ಡೌನ್ ಎನ್ನುವ ತರಹೇವಾರಿ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸುತ್ತಿರುವುದು ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದೆ.
ಲಾಕ್ ಡೌನ್ ವಿಚಾರದಲ್ಲಿ ಸರಕಾರ ಕೂಡಾ ಗಂಟೆಗೊಂದು ಹೇಳಿಕೆ ನೀಡುತ್ತಿರುವುದು ಸಾರ್ವಜನಿಕರನ್ನು ಇನ್ನೂ ಗೊಂದಲಕ್ಕೀಡಾಗುವಂತೆ ಮಾಡುತ್ತಿದೆ. ಆದರೂ, ಸಂಪೂರ್ಣ ಲಾಕ್ ಡೌನ್ ಅಂಥ ಕಠಿಣ ನಿರ್ಧಾರವನ್ನು ಬಿಎಸ್ವೈ ಸರಕಾರ ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಮ್ಮಿ. ಆದರೂ ಮುಂದಿನ ದಿನಗಳಲ್ಲಿ ಲಾಕ್ ಡೌನ್ ಘೋಷಣೆಯ ಬಗ್ಗೆ ಕಾದು ನೋಡಬೇಕಿದೆ. ಒಂದು ವೇಳೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಅನುಮಾನ ನಿಜವಾದರೂ ಆಶ್ಚರ್ಯ ಪಡಬೇಕಾಗಿಲ್ಲ.

