fact Check: ಕೊರೊನಾ ರೋಗಿಗಳನ್ನು ಆಸ್ಪತ್ರೆ ಸಿಬ್ಬಂದಿ ಕೊಲ್ಲುತ್ತಿದ್ದಾರೆ ಎಂಬುದು ಸುಳ್ಳು!

ಮಾಸ್ಕ್‌ ಧರಿಸಿರುವ ವ್ಯಕ್ತಿಯೊಬ್ಬರು ರೋಗಿಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಕೊರೊನಾ ರೋಗಿಗಳನ್ನು ದುಡ್ಡಿಗಾಗಿ ಆಸ್ಪತ್ರೆಯ ಜನರು ಕೊಲ್ಲುತ್ತಿದ್ದಾರೆ ಎಂದು ಹೇಳಿಕೊಂಡು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಆದರೆ, ಅದು ಇಬ್ಬರ ನಡುವಿನ ಜಗಳದ ವಿಡಿಯೋವಾಗಿದ್ದು, ಜಗಳದ ಒಂದು ದಿನದ ನಂತರ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ವಿಡಿಯೋದ ಸಂಪೂರ್ಣ ಅಸಲಿಯತ್ತೇನು ಎಂದು ನೋಡೋಣ.

ಮಾಸ್ಕ್‌‌ ಧರಿಸಿರುವ ವ್ಯಕ್ತಿಯೊಬ್ಬ ರೋಗಿಯೊಬ್ಬರನ್ನು ಉಸಿರುಗಟ್ಟಿಸುವ ರೀತಿಯಲ್ಲಿ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊ ಜೊತೆಗೆ,  ಎಂದು ಸಂದೇಶ ಕೂಡಾ ಹರಿದಾಡುತ್ತಿದೆ.

ಕೆಲವರು, ಕೊರೊನಾ ಸೋಗಿನಲ್ಲಿ ಭಾರಿ ಪಿತೂರಿ ನಡೆಯುತ್ತಿದೆ ಎಂದು ಪ್ರತಿಪಾದಿಸಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ಹಲವಾರು ಜನರು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಬಗ್ಗೆ ಫ್ಯಾಕ್ಟ್‌ಚೆಕ್‌‌ ವೆಬ್‌ಸೈಟ್‌‌ ಆಲ್ಟ್‌ನ್ಯೂಸ್‌‌‌‌ ವಿಡಿಯೊವನ್ನು ಇಂಟರ್‌ನೆಟ್‌‌ನಲ್ಲಿ ಹುಡುಕಾಡಿದ್ದು, ಅದು ಮೇ 19, 2020 ರಂದು ಮಾಡಿದ್ದ ಟ್ವೀಟ್‌ ಒಂದರಲ್ಲಿ ಈ ವಿಡಿಯೊ ಬಗ್ಗೆಗಿನ ವರದಿ ಇರುವುದನ್ನು ಕಂಡುಕೊಂಡಿದೆ. ಈ ವರದಿಯನ್ನು ಬಾಂಗ್ಲಾದೇಶ ಮೂಲದ ಸೊಕಲರ್‌ಸೊಂಗ್‌ಬಾದ್.ಕಾಮ್ ಬರೆದಿತ್ತು. “ಇಬ್ಬರು ವ್ಯಕ್ತಿಗಳು ಜಗಳವಾಡಿದ್ದು, ಹಿರಿಯ ವ್ಯಕ್ತಿಯಾದ ಮನ್ಸೂರ್‌ ಮೊಲ್ಲಾ ಅವರನ್ನು ಏಪ್ರಿಲ್ 21, 2020 ರಂದು ಆಸ್ಪತ್ರೆಯ ಹಾಸಿಗೆಯಲ್ಲಿ ಕತ್ತು ಹಿಸುಕಲಾಗಿದೆ. ಅವರು ಮರುದಿನ ನಿಧನರಾದರು. ಈ ಘಟನೆ ಬಾಂಗ್ಲಾದೇಶದ ಬೋಲ್‌ಮರಿಯ ಫರೀದ್‌ಪುರದ ದಾದ್ಪುರದಲ್ಲಿ ನಡೆದಿದೆ” ಎಂದು ವರದಿ ಹೇಳಿದೆ.

ಆದಾಗ್ಯೂ, ಘಟನೆಯ ಆರಂಭಿಕ ವರದಿಗಳಲ್ಲಿ ವೀಡಿಯೊ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಜೊತೆಗೆ ಘಟನೆಯ ವಿವರಗಳಿಗೆ ವೀಡಿಯೊ ಹೊಂದಿಕೆಯಾಗುವುದಿಲ್ಲ.

ಏಪ್ರಿಲ್ 22 ರಂದು ಡಾಕಾಟೈಮ್ಸ್ 24.ಕಾಂನಲ್ಲಿ ಪ್ರಕಟವಾದ ವರದಿಯ ಪ್ರಕಾರ, “ಬೋಲ್ಮರಿ ಪೊಲೀಸ್ ಅಧಿಕಾರಿ (ಒಸಿ) ಅಮಿನೂರ್ ರಹಮಾನ್ ಹೇಳುವಂತೆ, ‘ದೋಲ್ಪುರ್ ಗ್ರಾಮದ ಫಜಲ್ ಖಾರ್ ಅವರ ಪುತ್ರ ಅಬುಬಕ್ಕರ್ ಎಂಬವರು ಮಂಗಳವಾರ [ಏಪ್ರಿಲ್ 21] ಸಂಜೆ ಕ್ರಿಕೆಟ್ ಆಡುತ್ತಿದ್ದಾಗ, ಸೊಲೈಮಾನ್ ಮೊಲ್ಲಾ ಅವರ ಪುತ್ರ ಕಿಬ್ರಿಯಾ ಮೊಲ್ಲಾ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಕಾರಣದಿಂದಾಗಿ, ಫಜಲ್ ಖಾರ್‌ನ ಜನರು ರಾತ್ರಿ ವೇಳೆಯಲ್ಲಿ ಛೇಲಮಾನ್ ಮೊಹಲ್ಲಾ ಜನರ ಮೇಲೆ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಈ ಗಲಾಟೆಯನ್ನು ನಿಲ್ಲಿಸಲು ಪ್ರಯತ್ನಿಸಿದ ಮನ್ಸೂರ್ ಮೊಲ್ಲಾ ಅವರಿಗೆ ತಲೆಗೆ ಹೊಡೆಯಲಾಗಿದೆ. ಅವರನ್ನು ಫರೀದ್ಪುರ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಂಜಾನೆ 1 ಗಂಟೆ ಸುಮಾರಿಗೆ ನಿಧನರಾದರು”

ಏಪ್ರಿಲ್ 21 ರಂದು ಕೆಲವು ಯುವಕರ ನಡುವಿನ ಕ್ರಿಕೆಟ್ ಪಂದ್ಯವೊಂದರಲ್ಲಿ ನಡೆದ ಜಗಳದಲ್ಲಿ ಮನ್ಸೂರ್ ಮೊಲ್ಲಾ ಗಾಯಗೊಂಡಿದ್ದಾರೆ. ಏಪ್ರಿಲ್ 22 ರ ಮುಂಜಾನೆ ಅವರು ನಿಧನ ಹೊಂದಿದರು ಎಂದು ದಿ ಡೈಲಿ ಪ್ರೋಥಮ್ ಅಲೋದಲ್ಲಿ ಪ್ರಕಟವಾದ ಮತ್ತೊಂದು ವರದಿ ಹೇಳುತ್ತದೆ.

ಈ ಬಗ್ಗೆ ‘ভিডিও মনসুর মোল্লা’ (ವಿಡಿಯೋ ಮನ್ಸೂರ್ ಮೊಲ್ಲಾ) ಎಂಬ ಕೀವರ್ಡ್‌ಗಳೊಂದಿಗೆ ಫೇಸ್‌ಬುಕ್‌ನಲ್ಲಿ ಹುಡುಕಾಡಿದಾಗ ಬಾಂಗ್ಲಾದೇಶದ ಡಾಕಾ ನಿವಾಸಿ ಹಸನ್ ಮೊಲ್ಲಾ ಎಂಬವರ ಫೇಸ್‌ಬುಕ್ ಸ್ಟೇಟಸ್ ಒಂದು ಕಂಡು ಬಂದಿದೆ. ಅದರಲ್ಲಿ ಮನ್ಸೂರ್ ಮೊಲ್ಲಾಗೆ ಸಂಬಂಧಿಸಿದ ಘಟನೆಯ ವೀಡಿಯೊವನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ ಎಂದು ಅವರು ಮೇ 18 ರಂದು ಬರೆದಿದ್ದಾರೆ.

ವೈರಲ್ ವಿಡಿಯೊದಲ್ಲಿ ಇರುವ ವ್ಯಕ್ತಿಗೂ, ಮನ್ಸೂರ್‌‌ ಮೊಲ್ಲಾ ಅವರಿಗೂ ಸಂಬಂಧವಿಲ್ಲ ಎಂದು ಮನ್ಸೂರ್‌ ಮೊಲ್ಲರಿಗೆ ಆಗಿರುವ ಗಾಯಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮನ್ಸೂರ್‌ ಮೊಲ್ಲಾ ದಪ್ಪ ಗಡ್ಡವನ್ನು ಹೊಂದಿದ್ದು ಅದು ಅವನ ಕುತ್ತಿಗೆ ಪೂರ್ತಿ ಆವರಿಸಿದೆ. ಆದರೆ ವೀಡಿಯೊದಲ್ಲಿರುವ ವ್ಯಕ್ತಿಗೆ ಗಡ್ಡವಿಲ್ಲ ಎಂದು ಅವರು ಬರೆದಿದ್ದಾರೆ.

ಹಸನ್ ಮೊಲ್ಲಾ ಅವರ ಫೇಸ್‌ಬುಕ್‌ ಪೋಸ್ಟ್ ಬಗ್ಗೆ ಹಲವಾರು ಜನರು ಕಮೆಂಟ್ ಮಾಡಿದ್ದು, ಹಲವು ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ವೀಡಿಯೊವನ್ನು ಸಂಪೂರ್ಣವಾಗಿ ವಿಭಿನ್ನ ಸಂದರ್ಭದೊಂದಿಗೆ ಹಂಚಿಕೊಳ್ಳಲಾಗಿದೆ.

ಮೇ 14 ರಂದು ಬಾಂಗ್ಲಾದೇಶದ ಸಿಲ್ಹೆಟ್‌ನ ರಾಜೇಶ್ ಸರ್ಕಾರ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಕತ್ತು ಹಿಸುಕುತ್ತಿದ್ದಾನೆ ಎಂದು ಬರೆದಿದ್ದಾರೆ. ಅವರು ಹಂಚಿರುವ ವೀಡಿಯೊ slynewsbd.com ನ ಲೋಗೊವನ್ನು ಹೊಂದಿದೆ. ಅದೆ ವೀಡಿಯೊವನ್ನು ಅದೇ ರೀತಿಯ ನಿರೂಪಣೆಯೊಂದಿಗೆ ಔಟ್‌ಲೆಟ್‌ ಹಂಚಿಕೊಂಡಿತ್ತು.

ಮಗನೊಬ್ಬ ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ಕತ್ತು ಹಿಸುಕುತ್ತಿದ್ದಾನೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊ ಬಾಂಗ್ಲಾದೇಶದಲ್ಲಿ ವೈರಲ್ ಆಗಿದೆ. ಆದರೆ ದೇಶದ ಯೂಟ್ಯೂಬರ್ ಒಬ್ಬರು, ಮಗನೊಬ್ಬ ತನ್ನ ತಂದೆಗೆ ಬಲವಂತವಾಗಿ ಆಹಾರವನ್ನು ನೀಡಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳುತ್ತಾರೆ.

ಈ ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದರೆ, ವಯಸ್ಸಾದ ವ್ಯಕ್ತಿಯ ಕೈಗಳು ಅವರ ಕುತ್ತಿಗೆಗೆ ಹೋಗುವುದೆ ಇಲ್ಲ. ಅವರು ತಮ್ಮ ಬಾಯಿಯನ್ನು ಮುಚ್ಚಲು ಪ್ರಯತ್ನಿಸುತ್ತಾ ಇದ್ದಾರೆ. ಅದಕ್ಕಾಗಿ ಅವರ ಮಗ ಅವರ ಕೈಗಳನ್ನು ತನ್ನ ಕೈಯಿಂದ ತಳ್ಳುತ್ತಾ ಇರುವುದನ್ನು ನೋಡಬಹುದಾಗಿದೆ.

ಈ ವೀಡಿಯೊ ಮೊದಲಿಗೆ ಬಾಂಗ್ಲಾದೇಶದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ವೈರಲ್ ಆಗಿತ್ತು ಮತ್ತು ಅದನ್ನು ಹಲವಾರು ಮಾಧ್ಯಮಗಳು ಕೂಡಾ ಸುಳ್ಳು ಪ್ರತಿಪಾದನೆಯೊಂದಿಗೆ ವರದಿ ಮಾಡಿದ್ದವು. ಈಗ ಅದು ಕೊರೊನಾ ಸಮಯದಲ್ಲಿ ಭಾರತದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಗಳು ರೋಗಿಗಳನ್ನು ಹಣಕ್ಕಾಗಿ ಕೊಲ್ಲುತ್ತಿದೆ ಎಂಬ ಸುಳ್ಳು ಪ್ರತಿಪಾದನೆಯೊಂದಗೆ ವೈರಲ್ ಆಗಿದೆ.

ಕೃಪೆ: Alt News

Read Also: ತಟ್ಟೆ-ಗಂಜಲದ ಸಾಲಿಗೆ ನಿಂಬೆಹಣ್ಣು ಸೇರ್ಪಡೆ; ಕೊರೊನಾ ಓಡಿಸಲು ಮೂಗಿಗೆ ನಿಂಬೆರಸ ಹಾಕೊಳಿ ಎಂದ ಸಂಕೇಶ್ವರ ಮತ್ತು BJP ಸಂಸದ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights