ಭ್ರಷ್ಟಾಚಾರ ಆರೋಪ; ಮಾಜಿ ಪೊಲೀಸ್‌ ಆಯುಕ್ತ, ಡಿಸಿಪಿ ಮತ್ತು 26 ಪೊಲೀಸರ ವಿರುದ್ದ ಎಫ್‌ಐಆರ್‌ ದಾಖಲು!

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಮಹಾರಾಷ್ಟ್ರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪೊಲೀಸ್ ಇನ್‌ಸ್ಪೆಕ್ಟರ್ ಭೀಮರಾವ್ ಘಡ್ಜ್ ಅವರು ಸಿಂಗ್, ಡಿಸಿಪಿ ಪರಾಗ್ ಮಾನೆರೆ ಮತ್ತು ಇತರ 26 ಪೊಲೀಸರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಹೀಗಾಗಿ ಅಷ್ಟೂ ಜನರ ಪೊಲೀಸ್‌ ಅಧಿಕಾರಿಗಳ ವಿರುದ್ದ ಅಕೋಲಾ ಕೊಟ್ವಾಲಿ ನಗರದ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪರಾಧ ಪಿತೂರಿ, ಸಾಕ್ಷ್ಯಗಳ ನಾಶ ಮತ್ತು 1989 ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ ಕಾಯ್ದೆ) ಸೇರಿ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ ಅನ್ನು ಶೂನ್ಯ ಎಫ್‌ಐಆರ್ (ಆ ಪ್ರದೇಶದಲ್ಲಿ ಅಥವಾ ಇನ್ನಾವುದೇ ಪ್ರದೇಶದಲ್ಲಿ ಮಾಡಿದ ಅಪರಾಧವನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವ ವಿಧಾನ) ನಿಯಮದಲ್ಲಿ ದಾಖಲಿಸಲಾಗಿದೆ. ಅದನ್ನು ಥಾಣೆ ನಗರ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

2015-2018ರ ಅವಧಿಯಲ್ಲಿ ಠಾಣೆ ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ನೇಮಕಗೊಂಡಿದ್ದ ಘಡ್ಜ್ ಅವರ ಅಧಿಕಾರಾವಧಿಯಲ್ಲಿ ಸಿಂಗ್ ನೇತೃತ್ವದ ಹಲವಾರು ಅಧಿಕಾರಿಗಳು ವಿವಿಧ ಭ್ರಷ್ಟಾಚಾರ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಾಗಿರುವ ಕೆಲವು ವ್ಯಕ್ತಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕದಂತೆ ಸಿಂಗ್ ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈಗ ಅಕೋಲಾ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ನಿಯೋಜನೆಗೊಂಡಿರುವ ಘಡ್ಜ್, ಸಿಂಗ್ ಅವರ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದ ನಂತರ, ಅವರ ವಿರುದ್ಧ ಐದು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights