ಅಂದು ರೋಮ್‌ನಲ್ಲಿ ಜನರ ದಂಗೆ ತಪ್ಪಿಸಲು ಗ್ಲಾಡಿಯೇಟರ್‌ ಗೇಮ್‌; ಇಂದು ಭಾರತೀಯರಿಗೆ ಐಪಿಎಲ್‌; ಮೋದಿ ಸರ್ಕಾರದ ವಿರುದ್ದ ಆಕ್ರೋಶ

ದೇಶದಲ್ಲಿ ಕೊರೊನಾ ಎರಡನೇ ಅಲೆ ಭಾರೀ ವ್ಯಾಪಕವಾಗಿ ಕಾಡುತ್ತಿದೆ. ಹಲವಾರು ಜನರು ಸೂಕ್ತ ಚಿಕಿತ್ಸೆ, ವೆಂಟಿಲೇಟರ್‌, ಆಕ್ಸಿಜನ್‌ ಸಿಗದೇ ನರಳಾಡುತ್ತಿದ್ದಾರೆ. ಹೀಗಾಗಿ ವಿವಿಧ ದೇಶಗಳು ಭಾರತಕ್ಕೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಕೊರೊನಾ ಆಕ್ರಮಣ ಆರಂಭವಾಗಿ ಒಂದು ವರ್ಷ ಕಳೆದರೂ ಭಾರತ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿಲ್ಲ ಎಂದು ಅಂತಾರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡುತ್ತಿವೆ. ಅಂದು ರೋಮ್‌ ಚಕ್ರವರ್ತಿ ತನ್ನ ಅರಾಜಕತೆಯಿಂದ ಕೂಡಿದ ಆಡಳಿತದ ವಿರುದ್ಧ ದಂಗೆ ಏಳದಂತೆ ಜನರನ್ನು ಬೇರೆಡೆ ಸೆಳೆಯಲು ಗ್ಲಾಡಿಯೇಟರ್‌ ಆಡಿಸುತ್ತಿದ್ದ, ಈಗ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರನ್ನು ಬೇರೆಡೆ ಸೆಳೆಯಲು ಭಾರತದಲ್ಲಿ ಐಪಿಎಲ್‌ ಇದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ದೇಶದಲ್ಲಿ ಐಪಿಎಲ್‌ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನಗಳೆದ್ದಿವೆ. ಪ್ರಸ್ತುತ ಐಪಿಎಲ್ ನಡೆಯುತ್ತಿರುವ ದೆಹಲಿಯಲ್ಲಿ ಜನರು ಮೂಲ ಆರೋಗ್ಯ ಸೌಕರ್ಯವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದರೆ, ಕ್ರೀಡಾಂಗಣದ ಹೊರಗೆ ಆಂಬುಲೆನ್ಸ್‌ಗಳನ್ನು, ಆರೋಗ್ಯ ಸೌಲಭ್ಯವನ್ನು ಸೀಮಿತ ಜನರಿಗೆ ಮೀಸಲಾಗಿಟ್ಟು, ಸಾಮಾನ್ಯ ಜನರಿಗೆ ಅದರಿಂದ ವಂಚಿತರನ್ನಾಗಿ ಮಾಡುವುದು ನೈತಿಕತೆಯೆ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಪಡಿತರ ಅಕ್ಕಿ ಕೇಳಿದ್ದಕ್ಕೆ ಸತ್ತು ಹೋಗು ಎಂದ ಸಚಿವ ಉಮೇಶ್‌ ಕತ್ತಿ; ಆಡಿಯೋ ವೈರಲ್‌!

ಮುಂದಿನ ತಿಂಗಳಿನಿಂದ ಬೆಂಗಳೂರಿನಲ್ಲೂ ಐಪಿಎಲ್ ಪಂದ್ಯಾಟ ನಡೆಯಲಿದೆ. ದೇಶದಲ್ಲೇ ಅತ್ಯಂತ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವ ಬೆಂಗಳೂರಿನ ಪರಿಸ್ಥಿತಿ ಮುಂದಿನ ತಿಂಗಳು ಇನ್ನೂ ಹದಗೆಡಲಿದೆ ಎಂದು ಈಗಾಗಲೇ ಹಲವರು ಊಹಿಸಿದ್ದು, ಈ ಸಮಯದಲ್ಲಿ ಜೂಜಿನ ಆಟವಾದ ಐಪಿಎಲ್ ಬೇಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ದೇಶದ ಖ್ಯಾತ ಪತ್ರಕರ್ತೆ ಬರ್ಖಾದತ್‌ ಐಪಿಎಲ್ ಅನ್ನು ‘ಕಿವುಡು’ ಎಂದು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ನಿಖಿಲ್ ಜೆ ಆಳ್ವಾ ಅವರು, “ಪ್ರಾಚೀನ ಕಾಲದಲ್ಲಿ, ಪರಿಸ್ಥಿತಿಯು ಕೆಟ್ಟದಾಗಿದ್ದಾಗ ನಾಗರೀಕರ ಗಮನವನ್ನು ಬೇರೆಡೆಗೆ ಸೆಳೆಯಲು ರೋಮ್‌ನ ಚಕ್ರವರ್ತಿಗಳು ಕಾಲೊಸಿಯಂನಲ್ಲಿ ಗ್ಲಾಡಿಯೇಟರ್ ಆಟಗಳನ್ನು ಆಯೋಜಿಸಿಸುತ್ತಿದ್ದರು. ಭಾರತದಲ್ಲಿ ನಮಗೆ ಐಪಿಎಲ್ ಇದೆ” ಎಂದು ಹೇಳಿದ್ದಾರೆ.

ಪತ್ರಕರ್ತ ಶಶಿಧರ್‌ ಹೆಮ್ಮಾಡಿ, “IPL ಗೂ ಈ ದೇಶಕ್ಕೂ ಸಂಬಂಧವಿದೆಯೆ? BCCI ಗೆ ಈ ದೇಶದ ಕುರಿತು ಏನಾದರೂ ಕಾಳಜಿ ಇದೆಯೆ? ಇದ್ದರೆ ಇಷ್ಟೊಂದು ಅಮಾನವೀಯತೆಯಿಂದ BCCI ವರ್ತಿಸುತ್ತಿರಲಿಲ್ಲ. ಇಂದು ದೆಹಲಿಯಲ್ಲಿ IPL ಮ್ಯಾಚ್ ಇದೆ. ದೆಹಲಿಯಲ್ಲಿ ನಿತ್ಯವೂ ನೂರಾರು ಜನರು ಕೋವಿಡ್‌ನಿಂದ ಸಾಯುತ್ತಿದ್ದು ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ” ಎಂದು ಬುಧವಾರ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೂಗಿಗೆ ನಿಂಬೆರಸ ಹಾಕಿಕೊಂಡ ಶಿಕ್ಷಕ ದಾರುಣ ಸಾವು!

“ಜನಸಾಮಾನ್ಯರಿಗೆ ಹೆಣ ಸಾಗಿಸಲೂ ಸಹ ಆಂಬುಲೆನ್ಸ್‌ಗಳು ಸಿಗುತ್ತಿಲ್ಲ. ಆದರೆ IPL ಮ್ಯಾಚ್ ನಡೆಯುತ್ತಿರುವ ಮೈದಾನದ ಸುತ್ತ ಪೊಲೀಸರು ನೂರಾರು ಸಂಖ್ಯೆಯಲ್ಲಿದ್ದಾರೆ. ಆಟಗಾರರಿಗಾಗಿ ಆಂಬುಲೆನ್ಸ್‌ಗಳು ಸಜ್ಜಾಗಿ ನಿಂತಿವೆ. ಆಕ್ಸಿಜನ್ ಪೂರೈಕೆ, ಪರೀಕ್ಷೆ ಸೌಲಭ್ಯ ಎಲ್ಲವೂ ಇಲ್ಲಿ ಸಿದ್ಧವಿದೆ. ದೆಹಲಿಯಲ್ಲಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಲಭ್ಯವಾಗಬೇಕಾದ ಸೌಲಭ್ಯಗಳು IPL ಗಾಗಿ ಮೀಸಲಿಡಲಾಗಿದೆ. ಇದೇ ಮೈದಾನದ ಪಕ್ಕದಲ್ಲಿ ಇರುವ ಸ್ಮಶಾನದಲ್ಲಿ ಕಳೆದೆರಡು ದಿನಗಳಲ್ಲಿ ನೂರಕ್ಕೂ ಹೆಚ್ಚು ಹೆಣಗಳನ್ನು ದಹನ ಮಾಡಲಾಗಿದೆ. IPL ಇಂತಹ ಸ್ಥಿತಿಯಲ್ಲೂ ಮುಂದುವರಿಯಬೇಕೆ?” ಎಂದು ಶಶಿಧರ್‌ ಅವರು ಪ್ರಶ್ನಿಸಿದ್ದಾರೆ.

ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು, “ಈ ಸಮಯದಲ್ಲಿ 2 ಭಾರತಗಳಿವೆ ಎಂದು ತೋರುತ್ತದೆ. ಒಂದು ಜನರು ಹಾಸಿಗೆ ಪಡೆಯಲು ಹೆಣಗಾಡುತ್ತಿರುವ ಭಾರತ. ಇನ್ನೊಂದು ಆರಾಮದಾಯ ಬಬಲ್‌ನಲ್ಲಿನ ಐಪಿಎಲ್” ಎಂದು ಹೇಳಿದ್ದಾರೆ.

https://twitter.com/sardesairajdeep/status/1387448574846259202

ಪ್ರದೀಪ್ ಅವರು, “ದೆಹಲಿಯಲ್ಲಿ ಲಾಕ್ ಡೌನ್ ಇದೆ ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ಇದೆ. ಐಪಿಎಲ್ ನಂತಹ ಸಂಪೂರ್ಣ ವಾಣಿಜ್ಯ ಚಟುವಟಿಕೆಯನ್ನು ಏಕೆ ಅನುಮತಿಸಲಾಗಿದೆ ಎಂದು ಯಾರಾದರೂ ವಿವರಿಸಬಹುದೇ? ಲೈವ್ ಮನರಂಜನೆಗೆ ವಿನಾಯಿತಿ ಇದೆಯೇ ಅಥವಾ ಐಪಿಎಲ್‌ ರಾಜ್ಯದ ಕಾನೂನುಗಳಿಗೆ ನಿರೋಧಕವಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ

ಸಾಮಾಜಿಕ ಕಾರ್ಯಕರ್ತ ವಿ.ಎಲ್. ಬಾಲು ಅವರು, “IPL ನಡಿಲಿ 100% ತಪ್ಪಿಲ್ಲ. ಜನ ಸ್ವಲ್ಪ (ಆಮ್ಲಜನಕ ಇಲ್ಲದೆ ಸತ್ತ ಕುಟುಂಬ, ಬೆಡ್ ಸಿಗದ ಸ್ನೇಹಿತರು) ಬಯ್ದರೆ ಅಡ್ಜಸ್ಟ್ ಮಾಡ್ಕೋಳಿ! ಅವರಿಗೆ ಬಯ್ಯೊದಿಕ್ಕಾದರು ಸ್ವಾತಂತ್ರ್ಯ ಕೋಡೋಣ ಸರ್!” ಎಂದು ವ್ಯಂಗ್ಯವಾಡಿದ್ದಾರೆ.

ವರ್ಡ್ ಟೇಲ್‌ ಎಂಬ ಟ್ವಿಟರ್‌ ಅಕೌಂಟ್‌, “ದೆಹಲಿಯ ಹೊರಗಿನ ಐಪಿಎಲ್‌ಗಾಗಿ ಕ್ರಿಕೆಟ್ ಮೈದಾನದಲ್ಲಿ ಆಂಬುಲೆನ್ಸ್‌ ನಿಲ್ಲಿಸಲಾಗಿದೆ. ಆದರೆ ರೋಗಿಗಳಿಗೆ ಅಥವಾ ಮೃತ ದೇಹಗಳಿಗೆ ಈ ಆಂಬುಲೆನ್ಸ್‌‌ ಲಭ್ಯವಿಲ್ಲ” ಎಂದು ಹೇಳಿದ್ದಾರೆ.

“ಇಡೀ ಭಾರತ ಸಂಕಷ್ಟದಲ್ಲಿರುವಾಗ, ಈ ಕ್ರಿಕೆಟಿಗರು ಮೈದಾನದಲ್ಲಿ ಆನಂದಿಸುತ್ತಿದ್ದಾರೆ! ಭಾರಿ ಅಸೂಕ್ಷ್ಮತೆ’’ ಎಂದು ಶಿಬಾ ಬಿಸ್ವಾಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮಗಳನ್ನು ಪ್ರೀತಿಸಿದ್ದಕ್ಕಾಗಿ ಯುವಕನ ಕೈ-ಕಾಲು ಕತ್ತರಿಸಿ ಬರ್ಬರ ಹತ್ಯೆ: ಯುವತಿ ತಂದೆ ಮತ್ತು ಐವರ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights