ಪಡಿತರ ಅಕ್ಕಿ ಕೇಳಿದ್ದಕ್ಕೆ ಸತ್ತು ಹೋಗು ಎಂದ ಸಚಿವ ಉಮೇಶ್‌ ಕತ್ತಿ; ಆಡಿಯೋ ವೈರಲ್‌!

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಬಿಜೆಪಿಯಿಂದ ಸಚಿವರಾಗಿರುವವರ ದರ್ಪ, ಅಹಂಕಾರ ಮಿತಿ ಮೀರುತ್ತಿದೆ. ಇದೀಗ ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಉಮೇಶ್ ಕತ್ತಿ ಅವರ ದರ್ಪ, ದುರಹಂಕಾರ ಮತ್ತೊಮ್ಮೆ ಬಯಲಾಗಿದೆ.

ಪರಿತರ ಅನ್ನಭಾಗ್ಯ ಯೋಜನೆಯಲ್ಲಿ ನೀಡಲಾಗುವ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಲಾಕ್‌ಡೌನ್‌ ಇರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅಕ್ಕಿಯನ್ನು ಕಡಿಮೆ ಕೊಡುತ್ತೀರಾ ಎಂದು ನಾಗರಿಕರೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕತ್ತಿ, ಸತ್ತು ಹೋಗು ಎಂದು ಉತ್ತರಿಸಿದ್ದಾರೆ. ಅವರ ಆಡಿಯೋ ಜಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ಈಶ್ವರ ಎಂಬ ವ್ಯಕ್ತಿ ಆಹಾರ ಸಚಿವ ಉಮೇಶ್ ಕತ್ತಿಯವರಿಗೆ ಕರೆ ಮಾಡಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕೇವಲ 2 ಕೆ.ಜಿ ಪಡಿತರ ಅಕ್ಕಿ ಕೊಡುತ್ತೀದ್ದೀರಾ ಇಷ್ಟು ಕಡಿಮೆ ಅಕ್ಕಿಯಲ್ಲಿ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾನೆ.

ಅದಕ್ಕೆ ಉತ್ತರಿಸಿದ ಆಹಾರ ಸಚಿವರು 2 ಕೆ.ಜಿ ಅಕ್ಕಿ, 3ಕೆಜಿ ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಕೊಡುತ್ತಿದ್ದೇವೆ. ಮೇ, ಜೂನ್ ತಿಂಗಳಿಂದ ಕೇಂದ್ರ ಸರ್ಕಾರದಿಂದ 5 ಕೆ.ಜಿ ಪಡಿತರ ನೀಡಲಾಗುವುದು ಎಂದು ಹೇಳಿದ್ದಾರೆ.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವ್ಯಕ್ತಿ, ಉತ್ತರ ಕರ್ನಾಟಕ ಭಾಗಕ್ಕೆ ಈಗ ಕೇವಲ 2 ಕೆ.ಜಿ ಅಕ್ಕಿ ಮಾತ್ರ ಸಿಗುತ್ತಿದೆ. ಮುಂದಿನ ತಿಂಗಳಿಂದ 05 ತಿಂಗಳು ಪಡಿತರ ಕೊಡುತ್ತೀರಿ ಎನ್ನುವುದಾದರೆ, ಈ ತಿಂಗಳು ನಾವು ಏನು ಮಾಡಬೇಕು. ಲಾಕ್ ಡೌನ್ ನಿಂದಾಗಿ ಈಗಾಗಲೇ ಎಲ್ಲವೂ ಬಂದ್ ಆಗಿದೆ. ಕೆಲಸವೂ ಇಲ್ಲ, ಊಟಕ್ಕೂ ಇಲ್ಲದೇ ಅಲ್ಲಿಯವರೆಗೆ ನಾವು ಸಾಯಬೇಕೆ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಸಚಿವರು ಸತ್ತು ಹೋಗು. ನನಗೆ ಫೋನ್ ಮಾಡಬೇಡ ಎಂದು ಕಿಡಿಕಾರಿದ್ದಾರೆ.

ಊಟಕ್ಕಾಗಿ ಪಡಿತರ ಅಕ್ಕಿ ಕೇಳಿದ್ದಕ್ಕೆ ಆಹಾರ ಸಚಿವರ ದೌಲತ್ತಿನ ಉತ್ತರ ನೀಡಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights