ಗಂಗಾ ನದಿ ತೀರದಲ್ಲಿ ತೇಲಿದ 40ಕ್ಕೂ ಹೆಚ್ಚು ಮೃತ ದೇಹಗಳು : ಬಿಹಾರದಲ್ಲಿ ಕೋವಿಡ್ ಪ್ಯಾನಿಕ್!
ಗಂಗಾ ನದಿ ತೀರದಲ್ಲಿ 40 ಕ್ಕೂ ಹೆಚ್ಚು ಕೊಳೆತ ದೇಹಗಳು ಪತ್ತೆಯಾಗಿದ್ದು ಬಿಹಾರ ಪಟ್ಟಣದಲ್ಲಿ ಕೋವಿಡ್ ಭೀತಿ ಹೆಚ್ಚಾಗಿದೆ.
ಭಾರತದ ಕೋವಿಡ್ ಬಿಕ್ಕಟ್ಟಿನ ಪ್ರಮಾಣವನ್ನು ಬಹಿರಂಗಪಡಿಸುವ ಹೊಸ ದೃಶ್ಯಗಳು ಗಂಗಾ ನದಿ ತೀರದಲ್ಲಿ ಕಂಡು ಬಂದಿವೆ. ಬಿಹಾರದ ಗಂಗಾ ನದಿ ತೀರದಲ್ಲಿ ಉಬ್ಬಿದ, ಕೊಳೆತ ದೇಹಗಳು ಇಂದು ಬೆಳಿಗ್ಗೆ ಕಾಣಿಸಿಕೊಂಡಿವೆ. ಬಿಹಾರದ ಗಡಿಯಲ್ಲಿರುವ ಚೌಸಾ ಪಟ್ಟಣದಲ್ಲಿ ಡಜನ್ಗಟ್ಟಲೆ ಶವಗಳು ನದಿಯಲ್ಲಿ ತೇಲುತ್ತಿವೆ. ಈ ದೃಶ್ಯಗಳು ನಿವಾಸಿಗಳಲ್ಲಿ ಭಯವನ್ನುಂಟು ಮಾಡಿವೆ.
ಜನರು ಇಂದು ಮುಂಜಾನೆ ಭಯಾನಕ ದೃಶ್ಯ ಕಂಡು ಭಯಭೀತರಾಗಿದ್ದಾರೆ. ಶವಗಳು ಉತ್ತರ ಪ್ರದೇಶದಿಂದ ಆಗಮಿಸಿರಬಹುದು ಎನ್ನಲಾಗುತ್ತಿದ್ದು, ಕೋವಿಡ್ ರೋಗಿಗಳಾಗಿರಬಹುದು ಎಂದು ಸ್ಥಳೀಯ ಆಡಳಿತ ಅನುಮಾನ ವ್ಯಕ್ತಪಡಿಸಿದೆ. ಕೋರೊನಾ ರೋಗಿಗಳ ಸಂಬಂಧಿಕರಿಗೆ ಶವಸಂಸ್ಕಾರ ಮಾಡಲು ಅಥವಾ ಹೂಳಲು ಸ್ಥಳ ಸಿಗದೇ ಮೃತ ದೇಹಗಳನ್ನು ನದಿಯಲ್ಲಿ ಎಸೆದಿರಬಹುದು ಎನ್ನಲಾಗುತ್ತಿದೆ.
ಇಲ್ಲಿ “ಸುಮಾರು 40-45 ಶವಗಳು ತೇಲುತ್ತಿರುವಂತೆ ಕಂಡುಬಂದಿದೆ” ಎಂದು ಚೌಸಾ ಜಿಲ್ಲೆಯ ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ. ಇನ್ನೂ ಕೆಲವರ ಪ್ರಕಾರ 100 ದೇಹಗಳಿರಬಹುದು ಎನ್ನಲಾಗುತ್ತಿದೆ.
“ಮೃತ ದೇಹಗಳು ಕನಿಷ್ಠ ಐದರಿಂದ ಏಳು ದಿನಗಳವರೆಗೆ ನೀರಿನಲ್ಲಿ ಇದ್ದು ಉಬ್ಬಿಕೊಳ್ಳುತ್ತವೆ. ಈ ದೇಹಗಳು ಯುಪಿ ಯ ಯಾವ ಊರಿನಿಂದ ಬಂದಿವೆ ಎಂದು ನಾವು ತನಿಖೆ ಮಾಡಬೇಕಾಗಿದೆ” ಎಂದು ಚೌಸಾ ಅಧಿಕಾರಿ ಕೆ.ಕೆ. ಉಪಾಧ್ಯಾಯ ಹೇಳಿದರು.
ಶವಗಳಿಂದ ಮತ್ತು ನದಿಯ ನೀರಿನಿಂದ ಸೋಂಕಿನ ಬಗ್ಗೆ ಪಟ್ಟಣದಲ್ಲಿ ಮತ್ತು ಇತರರಲ್ಲಿ ಭೀತಿ ಹೆಚ್ಚಾಗಿದೆ. ಹೀಗಾಗಿ ಶವಗಳನ್ನು ಹೂಳಲು ನಿರ್ಧರಿಸಲಾಗಿದೆ.
“ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಬಂದು ಶವಗಳನ್ನು ಸ್ವಚ್ಚಗೊಳಿಸಲು 500 ಪಾವತಿಸುವುದಾಗಿ ಹೇಳಿದರು” ಎಂದು ಗ್ರಾಮಸ್ಥ ನರೇಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಭಾರತವು ಸುಮಾರು ಮೂರು ವಾರಗಳವರೆಗೆ ಪ್ರತಿದಿನ ಮೂರು ಲಕ್ಷ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ ಮತ್ತು ಕಳೆದ ವಾರ 4,000 ಕ್ಕಿಂತ ಹೆಚ್ಚು ದಾಖಲೆಯ ಸಾವುಗಳನ್ನು ದಾಖಲಿಸಿದೆ.

