ತಾಯಿ ಮೇಲೆ ವೈದ್ಯರು ಮತ್ತು ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪ; ತನಿಖೆಗೆ ಆದೇಶ

ತನ್ನ 40 ವರ್ಷದ ತಾಯಿಯನ್ನು ಲಕ್ನೋ ಆಸ್ಪತ್ರೆಯೊಂದರಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಥಳಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಅಮೇಥಿಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಜೂನ್ 12 ರ ರಾತ್ರಿ ರಾಜ್ಯ ರಾಜಧಾನಿ ಲಕ್ನೋದಲ್ಲಿ ತನ್ನ ತಾಯಿಯನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮೃತಪಟ್ಟಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.

ಅಮೆಥಿ ಭೇಟಿಯಲ್ಲಿದ್ದ ಕೇಂದ್ರ ಸಚಿವ ಸ್ಮೃತಿ ಇರಾನಿಯನ್ನು ಶನಿವಾರ ಸಂಪರ್ಕಿಸಿರುವುದಾಗಿ ಆ ಮಹಿಳೆ ತಿಳಿಸಿದ್ದಾರೆ. ಇರಾನಿ ಅವರು ಅಮೆಥಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಅವರಿಗೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿದ್ದು, ಅರುಣ್‌ ಕುಮಾರ್‌ ಅವರು ತನಿಖೆಗಾಗಿ ತಂಡವನ್ನು ರಚಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತಮ್ಮ ತಾಯಿಯನ್ನು ಜೂನ್ 6 ರಂದು ಗೌರಿಗಂಜ್‌ನ ಅಮೆಥಿ ಜಂಟಿ ಜಿಲ್ಲಾ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಮರುದಿನ ಅವರನ್ನು ಲಕ್ನೋದ ಡಾ ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ಯಲಾಯಿತು ಎಂದು ಮಹಿಳೆ ಹೇಳಿದ್ದಾರೆ.

ತನ್ನ ತಾಯಿಯನ್ನು ಆರಂಭದಲ್ಲಿ ಲಕ್ನೋ ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ಇರಿಸಲಾಗಿತ್ತು. ನಂತರ ನಾಲ್ಕನೇ ಮಹಡಿಯಲ್ಲಿರುವ ಹಾಸಿಗೆಗೆ ಸ್ಥಳಾಂತರಿಸಲಾಯಿತು. ಆದರೆ, ಅಲ್ಲಿಗೆ ಕುಟುಂಬದ ಯಾವುದೇ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪದೇ ಪದೇ ವಿನಂತಿಸಿದ ನಂತರ ತಾಯಿಯನ್ನು ಭೇಟಿಯಾಗಲು ಅನುಮತಿ ನೀಡಲಾಯಿತು. ಆ ವೇಳೆಗೆ ತನ್ನ ತಾಯಿಯ ಸ್ಥಿತಿ ಗಂಭೀರವಾಗಿತ್ತು ಎಂದು ಮಗಳು ಹೇಳಿಕೊಂಡಿದ್ದಾರೆ.

ವೈದ್ಯರು ಮತ್ತು ಸಿಬ್ಬಂದಿಗಳಿಂದ ತನ್ನನ್ನು ಥಳಿಸಲಾಯಿತು ಮತ್ತು ಅತ್ಯಾಚಾರ ಎಸಗಲಾಯಿತು ಎಂದು ತಾಯಿ ಹೇಳಿದ್ದರು ಎಂದು ಆ ಮಹಿಳೆ ಆರೋಪಿಸಿದ್ದಾರೆ.

ಆದಾಗ್ಯೂ, ಡಾ.ರಾಮ್ ಮನೋಹರ್ ಲೋಹಿಯಾ ಸಂಸ್ಥಾನದ ವಕ್ತಾರರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಶುಕ್ರವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತಾಯಿಯನ್ನು ಡಾ.ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮತ್ತೆ ಗೌರಿಗಂಜ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಹಿಳೆ ಹೇಳಿದ್ದಾರೆ.

ಗೌರಿಗಂಜ್‌ನ ಅಮೆಥಿ ಜಂಟಿ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪಿ.ಕೆ ಉಪಾಧ್ಯಾಯ ಅವರು ಮಹಿಳೆಯಲ್ಲಿ ಬ್ಲಾಕ್‌ ಫಂಗಸ್‌ ಪತ್ತೆಯಾದ್ದರಿಂದ ಅವರನ್ನು ಶನಿವಾರ ರಾತ್ರಿ ಲಖನೌದ ಆಸ್ಪತ್ರೆಗೆ ಸ್ಥಳಾಂತರಿಸಲು ಕಳಿಸಲಾಯಿತು. ಆದರೆ ಅವರು ದಾರಿಯಲ್ಲಿ ಸಾವನ್ನಪ್ಪಿದ್ದಾರೆ.

ಗೌರಿಗಂಜ್ ಉಪ ಜಿಲ್ಲಾಧಿಕಾರಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಎಸಿಎಂಒ ಅವರನ್ನು ಒಳಗೊಂಡ ತನಿಖಾ ಸಮಿತಿಯನ್ನು ರಚಿಸಲಾಗಿದೆ ಮತ್ತು ಸಮಿತಿಯು ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಸಿಂಗ್ ಅವರು ಶನಿವಾರ ಮಹಿಳೆಯ ಮೇಲೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ನಮ್ಮ ಫೋನ್‌ ಕರೆಗಳನ್ನು ಕದ್ದಾಲಿಸಲಾಗುತ್ತಿದೆ: ಕಾಂಗ್ರೆಸ್‌ ಶಾಸಕರ ಆರೋಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights