ಕೇಂದ್ರ ಮತ್ತು ಟ್ವಿಟರ್‌ ನಡುವೆ ಕಾಳಗ; ಭಾರತೀಯ ಕುಂದುಕೊರತೆ ಅಧಿಕಾರಿ ರಾಜೀನಾಮೆ!

ಟ್ವಿಟರ್‌ ಇಂಡಿಯಾದ ಹಂಗಾಮಿ ಕುಂದುಕೊರತೆ ಅಧಿಕಾರಿ ಧರ್ಮೇಂದ್ರ ಚತುರ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಕಂಪನಿಯಿಂದ ಹೊರಹೋಗಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ ಇಂಡಿಯಾ ವಿರುದ್ದ ದೂರು ದಾಖಲಿಸಿ, ನೋಟಿಸ್‌ ನೀಡಿತ್ತು. ಈ ಬೆನ್ನಲ್ಲೇ ಧರ್ಮೇಂದ್ರ ಅವರು ಟ್ವಿಟರ್‌ನ ಕುಂದುಕೊರತೆ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ಕೇಂದ್ರವು ಟ್ವಿಟರ್‌ ಮೇಲೆ ಮತ್ತಷ್ಟು ಸವಾರಿ ಮಾಡಲು ನೆರವಾಗುತ್ತದೆ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರವು ಟ್ವಿಟರ್‌ಅನ್ನು ಬಗ್ಗುಬಡಿಯಲು ಭಾರೀ ಪ್ರಯತ್ನಗಳನ್ನು ನಡೆಸುತ್ತಿದೆ. ಇತ್ತೀಚೆಗೆ ಸೋಷಿಯಲ್‌ ಮೀಡಿಯಾಗಳನ್ನು ನಿಯಂತ್ರಿಸಲು ಕೇಂದ್ರವು ಹೊಸ ಐಟಿ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಆ ನಿಯಮಗಳನ್ನು ಪಾಲಿಸಲು ಟ್ವಿಟರ್‌ ನಿರಾಕರಿಸಿದೆ. ಹೀಗಾಗಿ, ಟ್ವಿಟರ್‌ ಮತ್ತು ಕೇಂದ್ರದ ನಡುವೆ ಜಟಾಪಟಿ ಏರ್ಪಟ್ಟಿದೆ.

ಮೇ 25ರಿಂದ ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಲ್ಲಾ ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತೀಯ ಬಳಕೆದಾರರಿಂದ ದೂರುಗಳನ್ನು ಪರಿಹರಿಸಲು ಮೈಕ್ರೊ-ಬ್ಲಾಗಿಂಗ್ ತಾಣಗಳು ಒಬ್ಬ ಕುಂದುಕೊರತೆ ಪರಿಶೀಲನಾ ಅಧಿಕಾರಿಯನ್ನು ಹೊಂದಿರಬೇಕು. ಅವರು ಭಾರತದಲ್ಲಿ ವಾಸವಿರಬೇಕು. ಅಂತಹ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು.

ಇದನ್ನೂ ಓದಿ: ಟ್ವಿಟರ್ ಸಿಇಒ 15 ವರ್ಷದ ಹಳೆಯ ಟ್ವೀಟ್‌; 02 ಕೋಟಿ ರೂ.ಗೆ ಮಾರಾಟ!

ಜೂನ್ 5ರಂದು ಸರ್ಕಾರ ನೀಡಿರುವ ಅಂತಿಮ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಟ್ವಿಟರ್, ಹೊಸ ಐಟಿ ನಿಯಮಗಳನ್ನು ಪಾಲಿಸಲು ಉದ್ದೇಶಿಸಿದೆ ಮತ್ತು ಮುಖ್ಯ ಅನುಸರಣೆ ಅಧಿಕಾರಿಯ ವಿವರಗಳನ್ನು ಹಂಚಿಕೊಳ್ಳಲಿದೆ ಎಂದು ಹೇಳಿದೆ. ಈ ಮಧ್ಯೆ, ಟ್ವಿಟರ್ ಧರ್ಮೇಂದ್ರ ಚತುರ್‌ರನ್ನು ಭಾರತದ ಹಂಗಾಮಿ ನಿವಾಸಿ (ರೆಸಿಡೆಂಟ್‍) ಕುಂದುಕೊರತೆ ಅಧಿಕಾರಿಯಾಗಿ ನೇಮಿಸಿತ್ತು.

ಆದರೆ, ಧರ್ಮೇಂದ್ರ ಚತುರ್ ಅವರು ಈ ಹುದ್ದೆ ತ್ಯಜಿಸಿದ್ದಾರೆ. ಈಗ ಟ್ವಿಟರ್ ಇಂಡಿಯಾದಲ್ಲಿ ಆ ಸ್ಥಾನ ಖಾಲಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ. ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳು-2021ರ ಪ್ರಕಾರ ಕಂಪನಿಯ ವೆಬ್‌ಸೈಟ್ ಇನ್ನು ಮುಂದೆ ಅವರ ಹೆಸರನ್ನು ತೋರಿಸುವಂತಿಲ್ಲ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಟ್ವಿಟರ್ ನಿರಾಕರಿಸಿದೆ ಎಂದು ತಿಳಿದು ಬಂದಿದೆ.

ಕಂಪನಿಯು ಒಂದು ಹಂತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ. ಅದರ ಬಳಕೆದಾರರು ವೇದಿಕೆಯಲ್ಲಿ ಪೋಸ್ಟ್ ಮಾಡಿದ ಎಲ್ಲಾ ವಿಷಯಗಳಿಗೆ ಕಾನೂನುಬದ್ಧವಾಗಿ ಕಂಪನಿಯೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಟೂಲ್‌ಕಿಟ್‌: ದೆಹಲಿ ಪೊಲೀಸರಿಂದ ಟ್ವಿಟರ್ ಇಂಡಿಯಾದ ಮುಖ್ಯಸ್ಥರ ವಿಚಾರಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights