‘ಅಭಿನಯ ಶಾರದೆ’ ಹಿರಿಯ ನಟಿ ಜಯಂತಿ ಇನ್ನಿಲ್ಲ…!
500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟಿ ‘ಅಭಿನಯ ಶಾರದೆ’ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಜಯಂತಿ ಇಂದು ನಿಧನರಾಗಿದ್ದಾರೆ.
ಒಬ್ಬ ಕಲಾವಿದೆಯಾಗಿ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ ಜಯಂತಿ (76) ಅವರು ಇಂದು ಇಹಲೋಕ ತ್ಯಹಿಸಿದ್ದಾರೆ. ಇಂದು ಬೆಳಗಿನ ಜಾವ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಅಸ್ತಮಾ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟಿ ಕಳೆದ ವರ್ಷ ಕೋವಿಡ್-19 ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ 40 ದಿನಗಳ ಕಾಲ ಇದ್ದು ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ.
ಈವರೆಗೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಅವರು ಡಾ.ರಾಜುಕುಮಾರ್ ಜೊತೆ 45 ಚಿತ್ರಗಳನ್ನು ನಟಿಸಿದ್ದಾರೆ. ಸಾಮಾನ್ಯವಾಗಿ ಅಭಿಮಾನಿಗಳು ಡಾ. ರಾಜಕುಮಾರ್ ಅವರನ್ನು ‘ಅಣ್ಣಾವ್ರು’ ಎಂದು ಕರೆದರೆ, ಜಯಂತಿ ಅವರು ಮಾತ್ರ ಅವರನ್ನು ‘ಡಾ. ರಾಜ್ ಅಥವಾ ನನ್ನ ರಾಜ್’ ಎಂದು ಕರೆಯುತ್ತಿದ್ದರು. ರಾಜುಕುಮಾರ್ ಕುಟುಂಬಕ್ಕೆ ತುಂಬಾ ಆತ್ಮೀಯರಾಗಿದ್ದ ಜಯಂತಿ ಪುನೀತ್ ರಾಜ್, ರಾಘವೇಂದ್ರ ಜೊತೆಗೂ ನಟಿಸಿದ್ದಾರೆ.
ಡಾ. ವಿಷ್ಣುವರ್ಧನ್, ಅಂಬರೀಶ್, ಎಂಟಿಆರ್, ಅಕ್ಕಿನೇನಿ, ಮಹೇಶ್ ಬಾಬು, ಸೂಪರ್ ಸ್ಟಾರ್ ರಜನಿಕಾಂತ್ ಹೀಗೆ ಎಲ್ಲಾ ಸ್ಟಾರ್ ನಟರೊಂದಿಗೆ ಜಯಂತಿ ನಟಿಸಿದ್ದಾರೆ.
‘ಕಲಾವತಿ’ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಸಂಜೆ 5 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

